ಸಾಗರ: ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಬೇರೆ ಕಡೆ ವರ್ಗ ಮಾಡಿಸಿಕೊಂಡು ಹೋಗಿ. ಸಾರ್ವಜನಿಕರಿಂದ ದೂರು ಬಂದರೆ ಸುಮ್ಮನೆ ಇರುವುದಿಲ್ಲ. ನಾಳೆ ಬಾ ನಾಡಿದ್ದು ಬಾ ಎಂದು ಹೇಳಿ ಜನರನ್ನು ಕಚೇರಿಗೆ ಅಲೆಸಬೇಡಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಘಟನೆ ನಡೆದಿದೆ.
ಕಂದಾಯ ಇಲಾಖೆ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಬೇಕಾಬಿಟ್ಟಿ ಕೆಲಸ ಮಾಡಲು ಇದು ಸಂತೆ ಮಾರ್ಕೆಟ್ ಅಲ್ಲ. ನೀವು ಕೆಲಸ ಮಾಡಲು ಬಂದಿದ್ದೀರಾ, ಇಲ್ಲ ಹುಡುಗಾಟ ಮಾಡಲು ಬಂದಿದ್ದೀರಾ ಎಂದು ಕೋಪದಿಂದ ತರಾಟೆಗೆ ತೆಗೆದುಕೊಂಡ ಶಾಸಕರು, ತಹಸೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ಆಗಿ ಸೇವೆ ಸಲ್ಲಿಸಿ ತೀರ್ಥಹಳ್ಳಿಗೆ ವರ್ಗಾವಣೆಗೊಂಡಿರುವ ಆಕಾಶ್ ಎಂಬ ಅಧಿಕಾರಿ ಎರಡು ವರ್ಷದಿಂದ ಚಾರ್ಜ್ ಕೊಟ್ಟಿಲ್ಲ. ಅವರನ್ನು ಅಮಾನತ್ತು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು.
ತಾಲೂಕಿನಲ್ಲಿ ಬಗರ್‌ಹುಕುಂ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತಕ್ಷಣ ಪರಿಶೀಲನೆ ನಡೆಸಿ ಅರ್ಹರಿಗೆ ಭೂಮಿ ಮಂಜೂರಾತಿ ಮಾಡಲಾಗುತ್ತದೆ. ಹೊಸದಾಗಿ ಯಾರೂ ಭೂಮಿ ಒತ್ತುವರಿ ಮಾಡಿಕೊಳ್ಳುವಂತೆ ಇಲ್ಲ. ಕಾನೂನಿನ ಪ್ರಕಾರ ಹಿಂದೆ ಸಾಗುವಳಿ ಮಾಡಿಕೊಂಡು, ಸ್ವಾಧೀನದಲ್ಲಿ ಹೊಂದಿದವರನ್ನು ಭೂ ಮಂಜೂರಾತಿ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.ಸಭೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ಬಗರ್‌ಹುಕುಂ ಸಮಿತಿ ಸದಸ್ಯ ಕೆ.ಹೊಳೆಯಪ್ಪ, ರವಿಕುಮಾರ್ ಆನಂದಪುರಂ ಇನ್ನಿತರರು ಹಾಜರಿದ್ದರು.--------------ಶಾಸಕ ಬೇಳೂರು ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ತಾಲೂಕು ಬಗರ್‌ಹುಕುಂ ಸಮಿತಿ ಸಭೆ ನಡೆಯಿತು.