ಇ-ಪೌತಿ ಖಾತೆ ಆಂದೋಲನಕ್ಕೆ ಶಾಸಕರಿಂದ ಚಾಲನೆ

KannadaprabhaNewsNetwork |  
Published : Jul 30, 2025, 12:48 AM IST
ಕೂಡ್ಲಿಗಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆಯ ಇ-ಪೌತಿ ಖಾತೆ ಆಂದೋಲನಕ್ಕೆ  ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನುಗಳು ತಾತ, ಮುತ್ತಾತರ ಹೆಸರಿನಲ್ಲೇ ಇದ್ದು, ಅವರ ನಿಧನದ ನಂತರ ವಾರಸುದಾರರಿಗೆ ವರ್ಗಾವಣೆಯಾಗುವಾಗ ರೈತರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನುಗಳು ತಾತ, ಮುತ್ತಾತರ ಹೆಸರಿನಲ್ಲೇ ಇದ್ದು, ಅವರ ನಿಧನದ ನಂತರ ವಾರಸುದಾರರಿಗೆ ವರ್ಗಾವಣೆಯಾಗುವಾಗ ರೈತರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನರಿತು ಇತಿಹಾಸದಲ್ಲೇ ಕಂದಾಯ ಇಲಾಖೆಯಲ್ಲಿ ಆಗದಿರುವಂಥ ಕೆಲಸವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಇ-ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಂದಾಯ ಇಲಾಖೆ ಇ-ಪೌತಿ ಖಾತೆ ಆಂದೋಲನ ಹಮ್ಮಿಕೊಂಡಿದೆ. ರೈತರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ವಿಶೇಷ ಕಾರ್ಯಕ್ಕೆ ಮುಂದಾಗಿದೆ. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಪೌತಿ ಖಾತೆ ಮಾಡಿಸಿಕೊಳ್ಳಲು ಸೂಕ್ತ ದಾಖಲೆ ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ವಿ.ಕೆ. ನೇತ್ರಾವತಿ ಮಾತನಾಡಿ, ತಾಲೂಕಿನಲ್ಲಿ 35 ಸಾವಿರಕ್ಕೂ ಅಧಿಕ ಪೌತಿ ಖಾತೆಗಳನ್ನು ಗುರುತಿಸಿದ್ದು, ಅವುಗಳಲ್ಲಿ ಕೆಲವು 3-4 ತಲೆಮಾರಿನಿಂದಲೂ ಖಾತೆಗಳು ಬದಲಾಗಿಲ್ಲ. ಹೀಗಾಗಿ, ಪೌತಿ ಖಾತೆಯಾಗದ ವಾರಸುದಾರರು ವಂಶವೃಕ್ಷ ಕೊಟ್ಟರೆ ಯಾವುದೇ ಅಡೆತಡೆ ಇಲ್ಲದಂತೆ 15 ದಿನದೊಳಗೆ ಪೌತಿ ಖಾತೆ ಮಾಡಿಸಲಾಗುವುದು. ರೈತರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಸರ್ಕಾರಿ ಪಪೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಎಸ್.ಜನ್ನು, ಪಪಂ ಸದಸ್ಯ ಕೆ.ಈಶಪ್ಪ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಎಸ್.ಸುರೇಶ್, ಮುಖಂಡ ಡಾಣಿ ರಾಘವೇಂದ್ರ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶುಕೂರ್, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಭೂ ದಾಖಲೆಗಳ ಎಡಿಎಲ್‌ಆರ್ ವಿಜಯಕುಮಾರ್, ಲೋಕಿಕೆರೆ ಲೋಕೇಶ್, ಹಿರಿಯ ರೈತ ಮುಖಂಡ ಗುಂಡುಮುಣುಗು ಜಿ.ಪಿ. ಗುರುಲಿಂಗಪ್ಪ, ಕಂದಾಯ ನಿರೀಕ್ಷಕರಾದ ಕೊಟ್ರೇಶ್, ಮುರಳಿಕೃಷ್ಣ, ಗ್ರಾಮ ಆಡಳಿತಾಧಿಕಾರಿ ತಳವಾರ ಪ್ರಭು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ