ಕನ್ನಡಪ್ರಭ ವಾರ್ತೆ ಹೊಸಕೋಟೆ
ಕುಂಬಳಹಳ್ಳಿ ಗ್ರಾಮದ ಸ್ಮಶಾನಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆಗೆ ನರೇಗಾ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಿ ಚರಂಡಿ ಕಾಮಗಾರಿಯೂ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಮುಕ್ತಾಯವಾಗಿರುವ ಚರಂಡಿ ಕಾಮಗಾರಿಗೆ ಮತ್ತೆ ಗುದ್ದಲಿ ಪೂಜೆ ನಡೆಸುತ್ತಿರುವುದು ಎಂತಹ ಅಭಿವೃದ್ಧಿ ಎಂದು ಕುಂಬಳಹಳ್ಳಿ ಗ್ರಾಮದ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ಗುರುವಾರ ತಾಲೂಕಿನ ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರಿಂದ ಸುಮಾರು ೬೫ ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ನಂತರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಬಿಜೆಪಿ ಮುಖಂಡ ಶಿವಕುಮಾರ್ ಮಾತನಾಡಿ, ಗ್ರಾಮದಿಂದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿತ್ತು. ಸುಮಾರು ೧೨ ಅಡಿ ಆಳ ಮತ್ತು ಸಂಚರಿಸಲು ಯೋಗ್ಯವಲ್ಲದ ರಸ್ತೆಯನ್ನು ಅತ್ಯುತ್ತಮ ಗುಣಮಟ್ಟದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿ, ಚರಂಡಿ ನಿರ್ಮಾಣ ಮಾಡಿ ಇನ್ನೇನು ಸಾರ್ವಜನಿಕ ಬಳಕೆಗೆ ಮುಕ್ತ ಮಾಡುವವರಿದ್ದೆವು. ಇಂತಹ ಸಂದರ್ಭದಲ್ಲಿ ಶಾಸಕರು ಇದೇ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ. ರಸ್ತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕುರಿತು ನಮ್ಮ ತಕರಾರಿಲ್ಲ. ಆದರೆ ಚರಂಡಿ ಅಭಿವೃದ್ಧಿ ಕಾಮಗಾರಿಯ ಕುರಿತು ನಮ್ಮ ತಕರಾರು ಇದೆ. ಹಲವು ತಿಂಗಳುಗಳಿಂದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾವು ಪಟ್ಟ ಶ್ರಮವನ್ನು ಸಾರ್ವಜನಿಕರು ನೋಡಿದ್ದಾರೆ. ಆದರೂ ಅದನ್ನು ಕಡೆಗಣಿಸಿ ಚರಂಡಿ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆಸಿದ್ದಾರೆ, ಇದು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ ಎಂದು ಪ್ರಶ್ನಿಸಿದರು.ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ , ಮುಖಂಡರಾದ ಶಿವಕುಮಾರ್, ನಾಗರಾಜ್, ರಮೇಶ್ ಕೆಟಿಆರ್, ಕೆ.ಸಿ.ನಾಗರಾಜ್, ಮುನಿವೆಂಕಟಪ್ಪ, ಮರಿಯಪ್ಪ ಇದ್ದರು.