ಕನ್ನಡಪ್ರಭ ವಾರ್ತೆ ಧಾರವಾಡ
ಪ್ರಜಾಪ್ರಭುತ್ವ ತನ್ನ ಮೊದಲಿನ ತೂಕ ಹಾಗೂ ಪಾವಿತ್ರ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಧಾನಸಭಾಧ್ಯಕ್ಷರು ಹಾಗೂ ಪರಿಷತ್ ಸಭಾಪತಿಗಳು ಕ್ರಾಂತಿಕಾರಕ ಹೆಜ್ಜೆಗಳನ್ನಿಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಶನಿವಾರ ಸದನದಲ್ಲಿ ಎಚ್.ಕೆ. ಪಾಟೀಲ ಐದು ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕರು ಸ್ವಯಂ ಅಂಕುಶವನ್ನು ಇಟ್ಟುಕೊಳ್ಳಬೇಕು. ಆದರೆ, ಕೆಲವು ಶಾಸಕರ ಮಾತು, ಕೃತಿಗಳ ಮೇಲೆ ಅಂಕುಶ ಇಲ್ಲದಾಗಿದೆ. ಹೀಗಾಗಿ, ಸದನದಲ್ಲಿ ಕೆಟ್ಟ ಶಬ್ದಗಳನ್ನು ಬಳಸುವುದು, ಬಟ್ಟೆ ಹರಿದುಕೊಳ್ಳುವುದು, ಅಶ್ಲೀಲ ವಿಡಿಯೋ ನೋಡುವ ಪ್ರಸಂಗಗಳು ಈ ಹಿಂದೆ ನಡೆದಿವೆ. ನಮ್ಮ ತಪ್ಪುಗಳನ್ನು ತೋರಿಸಿದ ದೃಶ್ಯ ಮಾಧ್ಯಮವನ್ನು ವಿಧಾನಸಭೆಯಿಂದ ಹೊರ ಹಾಕಿದ ಘಟನೆಯೂ ನಡೆಯಿತು. ಇದರಿಂದಾಗಿ ಪ್ರಜಾಪ್ರಭುತ್ವ ತನ್ನ ತೂಕ ಮತ್ತು ಪಾವಿತ್ರ್ಯತೆ ಕಳೆದುಕೊಂಡಿತು. ಸಂಯಮ ಇದ್ದರೆ, ನಮ್ಮ ಮೇಲೆ ಅಂಕುಶ ಇದ್ದರೆ ಹೀಗಾಗುತ್ತಿರಲಿಲ್ಲ. ಇನ್ನಾದರೂ ನಾವು ಆತ್ಮಾವಲೋಕನ ಮಾಡಿಕೊಂಡು ವ್ಯವಸ್ಥೆಯನ್ನು ಸಮಗ್ರವಾಗಿ ಬದಲಿಸಬೇಕು. ಈ ನಿಟ್ಟಿನಲ್ಲಿ ವಿಧಾನಸಭೆ ಸಭಾಧ್ಯಕ್ಷರು, ವಿಪ ಸಭಾಪತಿಗಳು ಗಂಭೀರ ಚಿಂತನೆ ಮಾಡುವ ಮೂಲಕ ಕ್ರಾಂತಿಕಾರಕ ಬದಲಾವಣೆಯ ಹೆಜ್ಜೆ ಇಡಬೇಕು ಎಂದು ಮನವಿ ಮಾಡಿದರು.ಶಾಸಕರು ಸದನದಲ್ಲಿ ಎಷ್ಟು ಪ್ರಶ್ನೆ ಕೇಳಿದರು, ಏನು ಚರ್ಚೆ, ಭಾಷಣ ಮಾಡಿದರು ಎಂಬ ವಿಡಿಯೋ, ಆಡಿಯೋ ಅಥವಾ ಲಿಖಿತವಾಗಿರುದನ್ನು ಆಯಾ ಶಾಸಕರಿಗೆ ತಲುಪಿಸುವ ಕಾರ್ಯವನ್ನು ಸಭಾಧ್ಯಕ್ಷರು, ಸಭಾಪತಿಗಳು ಮಾಡಬೇಕಿದೆ. ಈ ಮೂಲಕ ಶಾಸಕರು ತಮ್ಮ ಕ್ಷೇತ್ರಕ್ಕೆ ಏನು ಮಾಡುತ್ತಾರೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಾಗುತ್ತದೆ. ಕ್ಯೂಆರ್ ಕೋಡ್ ಮೂಲಕ ಶಾಸಕರ ಕಾರ್ಯವನ್ನು ವಿಶ್ಲೇಷಿಸುವ ಕಾರ್ಯ ಮಾಡಬೇಕು ಎಂದರು.