ಮೀಸಲಾತಿಗಾಗಿ ಶಾಸಕರು ಧ್ವನಿ ಎತ್ತಲಿ: ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ

KannadaprabhaNewsNetwork | Published : Mar 5, 2024 1:35 AM

ಸಾರಾಂಶ

ಅಧಿಕಾರ ಇರಲಾರದ ಸಂದರ್ಭದಲ್ಲಿ ಸಮಾಜದ ಪರವಾಗಿ ನಿಂತು ಮಾತನಾಡಿದವರು ಇಂದು ಅಧಿಕಾರ ಪಡೆದುಕೊಂಡಿದ್ದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎದುರಿಗೆ ಸಮಾಜದ ಮೀಸಲಾತಿಯ ಹೋರಾಟದ ಧ್ವನಿ ಎತ್ತುತ್ತಿಲ್ಲ.

ಕುಷ್ಟಗಿ: ಪಂಚಮಸಾಲಿ ಸಮಾಜದ ಅಭಿವೃದ್ಧಿಗಾಗಿ, ಮೀಸಲಾತಿಯ ಹೋರಾಟಕ್ಕಾಗಿ ಸಮಾಜದ ಶಾಸಕರು ವಿಧಾನಸೌಧದಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜದ ಕಡೆ ಸರ್ಕಾರ ಗಮನ ಕೊಡಲು ಸಾಧ್ಯ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಹೇಳಿದರು.ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಅನಾವರಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಧಿಕಾರ ಇರಲಾರದ ಸಂದರ್ಭದಲ್ಲಿ ಸಮಾಜದ ಪರವಾಗಿ ನಿಂತು ಮಾತನಾಡಿದವರು ಇಂದು ಅಧಿಕಾರ ಪಡೆದುಕೊಂಡಿದ್ದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎದುರಿಗೆ ಸಮಾಜದ ಮೀಸಲಾತಿಯ ಹೋರಾಟದ ಧ್ವನಿ ಎತ್ತುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಎಲ್ಲಾ ಶಾಸಕರು ಮೀಸಲಾತಿಗಾಗಿ ಧ್ವನಿ ಎತ್ತಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಸಮಾಜದ ಬಗ್ಗೆ ನಿರ್ಲಕ್ಷತನವನ್ನು ತೋರಬೇಡಿ. ಪಾದಯಾತ್ರೆ ಮೂಲಕವೇ ನೀವು ಅಧಿಕಾರ ಹಿಡಿದುಕೊಂಡಿದ್ದೀರಿ. ಅಧಿಕಾರ ಶಾಶ್ವತ ಅಲ್ಲ. ಸಮಾಜ ಶಾಶ್ವತವಾಗಿದ್ದು, ಸಮಾಜದ ಪರ ಕೆಲಸ ಮಾಡಬೇಕು ಎಂದರು.ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ನಮ್ಮನ್ನು ಮಾತನಾಡಿಸುತ್ತಿದ್ದರು, ಸಮಾಜದ ಕಾರ್ಯಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಷ್ಟವಾಗುತ್ತಿದೆ. ನಾನು ಎಂದಿಗೂ ವಿಧಾನಸೌಧದ ಮೆಟ್ಟಿಲು ಏರಿದವನಲ್ಲ. ಈ ಸರ್ಕಾರದಲ್ಲಿ ಅನಿವಾರ್ಯವಾಗಿ ಸಮಾಜದ ಪರವಾಗಿ ಹೋಗಬೇಕಾಯಿತು. ನಾನು ಒಬ್ಬನೇ ಹೋರಾಟ ಮಾಡಿದರೆ ನನ್ನ ಧ್ವನಿ ವಿಧಾನಸೌಧ ಮುಟ್ಟಲ್ಲ. ಸಮಾಜದ ಶಾಸಕರು ಧ್ವನಿ ಎತ್ತಬೇಕು. ಎಲ್ಲರು ಒಗ್ಗಟ್ಟಾಗಬೇಕು. ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದರು.ನಮ್ಮ ದೇಶಕ್ಕೆ ಚೆನ್ನಮ್ಮನ ಕೊಡುಗೆ ಅಪಾರ. ಚೆನ್ನಮ್ಮ ಕುರಿತು ಇತಿಹಾಸವನ್ನು ಎಲ್ಲರು ತಿಳಿದುಕೊಳ್ಳಬೇಕು. ಅಭಿಮಾನಕ್ಕಾಗಿ ಮೂರ್ತಿಗಳು ಅನಾವರಣ ಆಗುತ್ತಿವೆಯೇ ಹೊರತು ಪ್ರತಿಷ್ಠೆ ತೋರಿಸುವುದಕ್ಕಾಗಿ ಅಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಚೆನ್ನಮ್ಮ. ಸಾಮರಸ್ಯ ಜೀವನಕ್ಕಾಗಿ ಮೂರ್ತಿ ಅನಾವರಣ ಮಾಡಲಾಗುತ್ತದೆ. ಎಲ್ಲರು ಒಗ್ಗಟ್ಟಿನಿಂದ ಜೀವನ ಮಾಡಬೇಕು. 2 ಎ ಸೆಂಟ್ರಲ್ ಒಬಿಸಿ ಸರ್ಟಿಫಿಕೇಟ್ ಬೇಕು, ಅಲ್ಲಿಯವರೆಗೆ ಹೋರಾಟ ಮಾಡೋಣ ಎಂದರು.ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಸಮಾಜದ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿದರು.ಬಿಜಕಲ್ ವಿರಕ್ತಮಠದ ಶಿವಲಿಂಗ ಶ್ರೀ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯಕ್ಷ ಗೌಡಪ್ಪಗೌಡ ಕಂದಗಲ್ಲ ಇದ್ದರು. ಕಳಶ ಕುಂಭಗಳೊಂದಿಗೆ ರಾಣಿ ಚೆನ್ನಮ್ಮಳ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

Share this article