ಕುಟುಂಬ ಸಮೇತ ಹಾಸನಾಂಬೆ ದರ್ಶನ ಮಾಡಿದ ಎಂಎಲ್ಸಿ
ಕನ್ನಡಪ್ರಭ ವಾರ್ತೆ ಹಾಸನಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಹಾಸನಾಂಬೆ ನಂತರ ದರ್ಭಾರ್ ಗಣಪತಿಗೆ ಪೂಜೆ ಮಾಡಿ ಶ್ರೀ ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕುಟುಂಬ ಸಮೇತರಾಗಿ ಆಗಮಿಸಿ ದೇವಿ ದರ್ಶನ ಮಾಡಿದ್ದೇನೆ. ಮಳೆ, ಬೆಳೆ ಚೆನ್ನಾಗಿ ಆಗಿದೆ. ಕೆಲವೆಡೆ ಅತಿವೃಷ್ಠಿ ಆಗಿದ್ದು, ಸರ್ಕಾರ ಕ್ರಮಗಳನ್ನು ಕೈಗೊಂಡು ಪರಿಹಾರ ನೀಡಬೇಕು. ಶುಕ್ರವಾರ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ನಿಖಿಲ್ ಅವರಿಗೆ ಜಯ ಆಗಲಿ ಎಂದು ಹಾಸನಾಂಬೆ ದೇವಿಯಲ್ಲಿ ಪ್ರಾರ್ಥಿಸಿದ್ದು, ನಾಮಪತ್ರ ಸಲ್ಲಿಸುವ ಮುನ್ನವೇ ನಾನು ಹಾಸನಾಂಬೆ ದೇವಿ ದರ್ಶನ ಪಡೆದಿದ್ದೇನೆ ಎಂದು ತಿಳಿಸಿದರು.ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ನಂತರ ನಿಖಿಲ್ ಅವರು ಚನ್ನಪಟ್ಟಣದಲ್ಲಿ ನಿಕಟ ಸಂಪರ್ಕ ಹೊಂದಿದ್ದಾರೆ. ದೇವೇಗೌಡರನ್ನು ಚನ್ನಪಟ್ಟಣದ ಜನತೆ ಹೆಚ್ಚಿನ ರೀತಿ ಇಷ್ಟಪಡುತ್ತಾರೆ. ದೇವೇಗೌಡರೇ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದಾರೆ. ಸೋಲುವಾಗ ಕಾರ್ಯಕರ್ತರನ್ನು, ಗೆಲ್ಲುವಾಗ ಅವರ ಕುಟುಂಬದವರನ್ನು ನಿಲ್ಲಿಸುತ್ತಾರೆ ಎಂಬ ಕಳಂಕ ಇತ್ತು. ಹಾಗಾಗಿಯೇ ಚನ್ನಪಟ್ಟಣದಲ್ಲಿ ನಿಖಿಲ್ ಅವರನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು.
ಎನ್‌ಡಿಎ ಅಭ್ಯರ್ಥಿ ಆಗಲು ಅವಕಾಶ ಕೊಡಲಿಲ್ಲ ಎಂದು ಯೋಗೇಶ್ವರ್ ಹೇಳುತ್ತಾರೆ. ಏಕೆ ನೀವು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಿ. ಮೊದಲೇ ಒಂದು ಕಾಲು ಆ ಕಡೆ ಇಟ್ಟಿದ್ದರು. ನಮ್ಮ ಕಾರ್ಯಕರ್ತರು ಅವರಿಗಾಗಿ ಕೆಲಸ ಮಾಡಲು ಸಿದ್ದರಿದ್ದರು. ಯೋಗೇಶ್ವರ್ ಅವರಿಗೆ ನಾವು ಅಗೌರವ ತೋರಿಲ್ಲ. ಚನ್ನಪಟ್ಟಣ ಜನ ಈ ಬಾರಿ ಯೋಗೇಶ್ವರ್ ಅವರಿಗೆ ಬುದ್ದಿ ಕಲಿಸುತ್ತಾರೆ. ಎಲ್ಲಾ ಪಕ್ಷದಲ್ಲೂ ಕಳ್ಳರಿದ್ದಾರೆ. ಎಲ್ಲಾ ಪಕ್ಷದಲ್ಲೂ ಹೊಂದಾಣಿಕೆ ರಾಜಕೀಯ ಇದೆ. ಆದರೆ ಈ ಬಾರಿ ಚನ್ನಪಟ್ಟಣದಲ್ಲಿ ಕಾರ್ಯಕರ್ತರು ನಿಖಿಲ್ ಪರ ಇರುವುದರಿಂದ ನಿಖಿಲ್ ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿದರು.