ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಎಂಎಸ್‌ಎಂಇ ಹಾಗೂ ಹೊಸ ಸ್ಟಾರ್ಟ್‌ಅಪ್‌ಗಳಿಗೆ ಪ್ರೇರಣೆ ನೀಡುವ ಮೌಲ್ಯವರ್ಧಿತ ಯೋಜನೆಗಳಿಗೆ ಬ್ಯಾಂಕ್‌ಗಳು ಸಾಲ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ದ.ಕ. ಜಿ.ಪಂ. ಸಿಇಒ ವಿನಾಯಕ ನರ್ವಾಡೆ ನಿರ್ದೇಶನ ನೀಡಿದ್ದಾರೆ.
ಮಂಗಳೂರು: ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಎಂಎಸ್‌ಎಂಇ ಹಾಗೂ ಹೊಸ ಸ್ಟಾರ್ಟ್‌ಅಪ್‌ಗಳಿಗೆ ಪ್ರೇರಣೆ ನೀಡುವ ಮೌಲ್ಯವರ್ಧಿತ ಯೋಜನೆಗಳಿಗೆ ಬ್ಯಾಂಕ್‌ಗಳು ಸಾಲ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ದ.ಕ. ಜಿ.ಪಂ. ಸಿಇಒ ವಿನಾಯಕ ನರ್ವಾಡೆ ನಿರ್ದೇಶನ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ಸಮಾಲೋಚನಾ ಸಭೆ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿ.ಎಲ್.ಆರ್.ಸಿ.) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುದ್ರಾ ಯೋಜನೆ, ಪಿಎಂ ಸ್ವನಿಧಿ ಸೇರಿದಂತೆ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಿಸಿ ಸಾಲ ನೀಡುವಲ್ಲಿ ಕೆಲವು ಬ್ಯಾಂಕ್‌ಗಳ ಪ್ರಗತಿಯಲ್ಲಿ ಕುಂಠಿತ ಆಗಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.2025ರ ಏಪ್ರಿಲ್‌ನಿಂದ ಡಿಸೆಂಬರ್ ವರೆಗೆ ಮುದ್ರಾ ಯೋಜನೆಯಡಿ ಜಿಲ್ಲೆಯಲ್ಲಿ 644.29 ಕೋಟಿ ರು. ಸಾಲ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ 29,010 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ 41,657 ಮಂದಿಯನ್ನು ಯೋಜನೆಗೆ ನೋಂದಣಿ ಮಾಡಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 88,780 ಮಂದಿಯನ್ನು ನೋಂದಣಿ ಮಾಡಲಾಗಿದ್ದು, ಅಟಲ್ ಪಿಂಚಣಿ ಯೋಜನೆಯಡಿ 25,425 ಮಂದಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಪಿಎಂ ಸ್ವ ನಿಧಿ ಯೋಜನೆಯಡಿ ಪ್ರಥಮ ಕಂತಿನಡಿ 13,234, ದ್ವಿತೀಯ ಕಂತಿನಡಿ 6,352 ಹಾಗೂ ತೃತೀಯ ಕಂತಿನಡಿ 2,181 ಮಂದಿಗೆ ಮಂಜೂರಾತಿ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಎನ್. ಶೆಟ್ಟಿ ಮಾಹಿತಿ ನೀಡಿದರು.
ಆದ್ಯತಾ ವಲಯವಾದ ಶೈಕ್ಷಣಿಕ ಕ್ಷೇತ್ರದಲ್ಲಿ 157.09 ಕೋಟಿ ರು. ಸಾಲ ವಿತರಣೆಯ ಮೂಲಕ ತ್ರೈಮಾಸಿಕ ಗುರಿಯಾದ 164.22 ಕೋಟಿ ರು.ಗಳಲ್ಲಿ ಶೇ. 95.65 ನಿರ್ವಹಣೆ ಸಾಧಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಡಿ 6,806.78 ಕೋಟಿ ರು. ಸಾಲ ವಿತರಣೆಯಾಗಿದ್ದು, ಶೇ. 115.41 ರಷ್ಟುನಿರ್ವಹಣೆಯಾಗಿದೆ. ಕೃಷಿ ಕ್ಷೇತ್ರದಲ್ಲಿಯೂ ಗುರಿ ಮೀರಿದ ಸಾಧನೆಯಾಗಿದ್ದು, 10,346.21 ಕೋಟಿ ರು. ವಿತರಣೆಯಾಗಿದೆ ಎಂದರು.
ಆರ್‌ಬಿಐ ಎಜಿಎಂ ಅರುಣ್ ಕುಮಾರ್ ಪಿ., ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್‌ನ ಡಿಜಿಎಂ ಶೈಲೇಂದ್ರನಾಥ್ ಶೇಟ್, ನಬಾರ್ಡ್‌ನ ಡಿಜಿಎಂ ಸಂಗೀತ ಕರ್ತಾ ಇದ್ದರು.
ಗೃಹ ಸಾಲ ಕ್ಷೇತ್ರದಲ್ಲಿ ಪ್ರಗತಿ ಕುಂಠಿತ: ಅಸಮಾಧಾನ
ಅದ್ಯತಾ ವಲಯದ ಗೃಹ ಸಾಲ ಕ್ಷೇತ್ರದಲ್ಲಿ ಜಿಲ್ಲೆಯ ಬ್ಯಾಂಕ್‌ಗಳಿಂದ ತ್ರೈಮಾಸಿಕ ಅವಧಿಯಲ್ಲಿ 285.11 ಕೋಟಿ ರು. ಸಾಲ ವಿತರಣೆಯಾಗಿದ್ದು, ಇದು ನಿಗದಿತ ಗುರಿಯ (503.34 ಕೋಟಿ ರು.) ಶೇ. 56.64 ನಿರ್ವಹಣೆ ಮಾತ್ರ ಆಗಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಸಿಇಒ ವಿನಾಯಕ ನರ್ವಾಡೆ, ಕರ್ನಾಟಕ ಹೌಸಿಂಗ್ ಬೋರ್ಡ್ ಜತೆ ಮಾತನಾಡಿ ಫಲಾನುಭವಿಗಳ ಅಂಕಿಅಂಶಗಳನ್ನು ಲೀಡ್ ಬ್ಯಾಂಕ್ ಜತೆ ಹಂಚಿಕೊಳ್ಳುವುದಾಗಿ ತಿಳಿಸಿದರು.
ಉದ್ಯೋಗಿನಿ, ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಎಂಎಸ್‌ಎಂಇ ವಲಯಗಳಿಗೆ ಸಾಲ ಹಾಗೂ ಹಣಕಾಸಿನ ವಿತರಣೆ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುವ ಜತೆಗೆ ಗಂಭೀರವಾಗಿ ಪರಿಗಣಿಸಬೇಕು. ಸಕಾರಣವಿಲ್ಲದೆ ಅರ್ಜಿಗಳನ್ನು ಬಾಕಿ ಇರಿಸಬಾರದು ಎಂದು ಅವರು ಬ್ಯಾಂಕ್‌ಗಳಿಗೆ ತಾಕೀತು ಮಾಡಿದರು.
25.22 ಸಾವಿರ ಕೋಟಿ ರು. ಸಾಲ ಯೋಜನೆ: 2026-27ರ ಸಾಲಿನ ಹಣಕಾಸು ವರ್ಷದಲ್ಲಿ ದ.ಕ. ಜಿಲ್ಲೆಯಲ್ಲಿ 25,22,247.56 ಕೋಟಿ ರು. ಮೊತ್ತವನ್ನು ಆದ್ಯತಾ ವಲಯಕ್ಕೆ ಸಾಲ ನೀಡಬಹುದು ಎಂದು ನಬಾರ್ಡ್ ಡಿಜಿಎಂ ಸಂಗೀತ ಕರ್ತಾ ಹೇಳಿದರು.
ಸಾಮರ್ಥ್ಯ ಆಧಾರಿತ ಸಾಲ ಯೋಜನಾ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇದರಲ್ಲಿ ಕೃಷಿ, ಎಂಎಸ್‌ಎಂಇ, ರಫ್ತು, ಶಿಕ್ಷಣ, ಹೌಸಿಂಗ್, ನವೀಕೃತ ಇಂಧನ, ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿ, ಆದ್ಯತಾ ವಲಯಗಳು ಸೇರಿವೆ. ಹಿಂದಿನ ಸಾಲ ಯೋಜನೆಯಲ್ಲಿ ಮೀಸಲಿಟ್ಟ ಮೊತ್ತಕ್ಕಿಂತ ಶೇ.8.85ರಷ್ಟು ಹೆಚ್ಚಿದೆ. ಇಲ್ಲಿ ಕೃಷಿಗೆ 12,732 ಕೋಟಿ ರು. ಮೀಸಲಿರಿಸಲಾಗಿದ್ದು, ಎ₹ಎಸ್‌ಎಂಇಗೆ 8,143.97 ಕೋಟಿ ರು., ಶಿಕ್ಷಣಕ್ಕೆ 207 ಕೋಟಿ ರು., ವಸತಿಗೆ 1,361.25 ಕೋಟಿ ರು. ಮೀಸಲಿರಿಸಲಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.