Mobile app for booking fertilizers from December 1st
-ಕೃಷಿ ಇಲಾಖೆಯಲ್ಲಿ ರಸಗೊಬ್ಬರ ಮಾರಾಟಗಾರರಿಗೆ ಮೊಬೈಲ್ ಆ್ಯಪ್ ತರಬೇತಿ ಕಾರ್ಯಕ್ರಮ
--
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ರಸಗೊಬ್ಬರ ಕಾಯ್ದಿರಿಸಲು ರೈತರಿಗಾಗಿ ಮೊಬೈಲ್ ಆಪ್ ಡಿ.1ರಿಂದ ಆರಂಭವಾಗುತ್ತಿದ್ದು ರಸಗೊಬ್ಬರ ವಿತರಕರು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ ಮಹೇಶ್ ಹೇಳಿದರು.
ಅವರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ರಸಗೊಬ್ಬರ ಪರಿಕರ ಮಾರಾಟಗಾರರಿಗೆ ಮೊಬೈಲ್ ಆಪ್ಲಿಕೇಶನ್ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಸಗೊಬ್ಬರ ಪರಿಕರ ಮಾರಾಟಗಾರರಿಗೆ ಹಾಗೂ ರೈತರ ಮಾರಾಟ ಚೌಕಟ್ಟು 2026-27ರ ಅನ್ವಯ ರೈತರು ತಮಗೆ ಬೇಕಾದ ರಸಗೊಬ್ಬರವನ್ನು ಮೊಬೈಲ್ ಮೂಲಕ ಮುಂಗಡವಾಗಿ ಕಾಯ್ದಿರಿಸಿ ಕ್ಯೂಆರ್ ಕೋಡ್, ಟೋಕನ್ ತೋರಿಸಿ ಆಯ್ಕೆ ಮಾಡಿದ ಅಂಗಡಿಯಲ್ಲಿ ಪಡೆಯುವ ಡಿಜಿಟಲ್ ವ್ಯವಸ್ಥೆಯಾಗಿದೆ. ರಸಗೊಬ್ಬರ ಖರೀದಿ ಪ್ರಕ್ರಿಯೆ ಸರಳವಾಗಿಸಲು ಕೇಂದ್ರ ಸರ್ಕಾರ ರಸಗೊಬ್ಬರ ಮಾರಾಟ ಅಪ್ಲಿಕೇಷನ್ ಜಾರಿಗೊಳಿಸಿದ್ದು, ಪ್ರೇಮ್ ವರ್ಕ್ ಫಾರ್ ಫರ್ಟಿಲೈಸರ್ ಸೆಲ್ಸ್ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಚಿಕ್ಕಮಗಳೂರು ಸೇರಿ 15 ಜಿಲ್ಲೆಗಳಲ್ಲಿ ಡಿ.1ರಿಂದ ಆ್ಯಪ್ ಬಳಕೆಗೆ ಲಭ್ಯವಾಗಲಿದೆ. ಗೊಬ್ಬರ ಖರೀದಿಗೆ ರೈತರು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ನಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ ಎಫ್.ಐ.ಡಿ, ಹಿಡುವಳಿ ವಿಸ್ತೀರ್ಣ ಮಾಹಿತಿ ಲಭ್ಯವಾಗಲಿದೆ.
ಆಧಾರ್ ಗೆ ಜೋಡಣೆಯಾದ ಮೊಬೈಲ್ ಗೆ ಒಟಿಪಿ ಬರಲಿದೆ. ಎರಡು ದಿನಗಳಲ್ಲಿ ಗೊಬ್ಬರ ಖರೀದಿಸಬೇಕು. ಇಲ್ಲವಾದಲ್ಲಿ ಕ್ಯೂಆರ್ ಕೋಡ್ ರದ್ದಾಗಲಿದೆ. ಬುಕ್ಕಿಂಗ್ ಬಳಿಕ ಬರುವ ಕ್ಯೂ ಆರ್ ಕೋಡನ್ನು ಗೊಬ್ಬರ ಅಂಗಡಿಯವರು ಸ್ಕ್ಯಾನ್ ಮಾಡಿ ಗೊಬ್ಬರ ನೀಡುತ್ತಾರೆ.
ರೈತರು ಅಥವಾ ಅವರ ಪರವಾಗಿ ಬೇರೆ ವ್ಯಕ್ತಿಯೂ ಪಡೆಯಬಹುದು. ಆ ಬೇರೆ ವ್ಯಕ್ತಿ ಒಟಿಪಿ, ಕ್ಯೂಆರ್ ಕೋಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸುವುದು. ಯುಪಿಐ ಮೂಲಕ ಹಣ ಪಾವತಿ ಮಾಡಬಹುದು ಎಂದರು.
ತರಬೇತಿಯಲ್ಲಿ ತರೀಕೆರೆಯ ಉಪಕೃಷಿ ನಿರ್ದೇಶಕ ಸಿ.ಎಸ್ ಚಂದ್ರಶೇಖರ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ನವೀನ್, ನಿರ್ದೇಶಕರಾದ ಎಚ್.ಎನ್. ರವಿಶಂಕರ್, ರಂಜಿತ್, ತಾಲೂಕಿನ ಎಲ್ಲಾ ರಸಗೊಬ್ಬರ ಮಾರಾಟಗಾರರು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ಮಾರಾಟಗಾರರು ಉಪಸ್ಥಿತರಿದ್ದರು.
ಫೋಟೊ
ನರಸಿಂಹರಾಜಪುರದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರಸಗೊಬ್ಬರ ಪರಿಕರ ಮಾರಾಟಗಾರರಿಗೆ ಮೊಬೈಲ್ ಆಪ್ಲಿಕೇಶನ್ ಆ್ಯಪ್ ತರಬೇತಿ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ ಮಹೇಶ್ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.