ಮೊಬೈಲ್‌ ಡಿ-ಅಡಿಕ್ಷನ್‌ ಸೆಂಟರ್‌ ಆರಂಭ ಆತಂಕ: ಪ್ರೊ.ಎಂ.ಕೃಷ್ಣೇಗೌಡ

KannadaprabhaNewsNetwork |  
Published : Apr 07, 2024, 01:47 AM IST
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ ) ಇವರ ವತಿಯಿಂದ ಕಾಲೇಜಿನ ವನರಂಗದಲ್ಲಿ ನಡೆದ ಜಾನಪದ ಜಾತ್ರೆಗೆ ಚಿಂತಕ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಚಾಲನೆ ನೀಡಿದರು. | Kannada Prabha

ಸಾರಾಂಶ

ಮೊಬೈಲ್‌ ಬಂದ ನಂತರದಲ್ಲಿ ನಮಗೆ ಪ್ರಾಧಾನ್ಯತೆಗಳೇ ಇಲ್ಲವಾಗಿದೆ. ಮೊದಲು ಯಾವುದಕ್ಕೆ ಪ್ರಾಧಾನ್ಯತೆ ಕೊಡಬೇಕು, ನಂತರ ಯಾವುದಕ್ಕೆ ನೀಡಬೇಕು ಎನ್ನುವುದು ಗೊತ್ತೇ ಇಲ್ಲದಂತೆ ವರ್ತಿಸುತ್ತಿದ್ದೇವೆ. ವಿದ್ಯಾರ್ಥಿಗಳು ಮೊಬೈಲ್‌ನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದು, ಅದನ್ನು ಕಡಿಮೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವ ಜನಾಂಗ ಮೊಬೈಲ್‌ ಚಟಕ್ಕೆ ಬಲಿಯಾಗುತ್ತಿರುವುದನ್ನು ನೋಡಿದರೆ ಕೆಲವೇ ವರ್ಷಗಳಲ್ಲಿ ಆಸ್ಪತ್ರೆಗಳಲ್ಲಿ ಮೊಬೈಲ್‌ ಡಿ-ಅಡಿಕ್ಷನ್‌ ಸೆಂಟರ್‌ ಆರಂಭವಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಚಿಂತಕ, ವಾಗ್ಮಿ, ಪ್ರೊ.ಎಂ.ಕೃಷ್ಣೇಗೌಡ ಆತಂಕ ವ್ಯಕ್ತಪಡಿಸಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ ) ಇವರ ವತಿಯಿಂದ ಕಾಲೇಜಿನ ವನರಂಗದಲ್ಲಿ ನಡೆದ ಜಾನಪದ ಜಾತ್ರೆಗೆ ಭತ್ತ-ರಾಗಿಯ ರಾಶಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಈ ಶತಮಾನದ ಬಹಳ ಅದ್ಭುತ ಆವಿಷ್ಕಾರ ಎಂದರೆ ಮೊಬೈಲ್‌. ಅದರಿಂದ ಇಡೀ ಜಗತ್ತಿನ ಎಲ್ಲಾ ವಿದ್ಯಮಾನಗಳು ಬದಲಾದವು. ಆದರೆ, ನಮ್ಮ ಕೈನ ಪ್ರಬಲ ಆಯುಧವಾಗಬೇಕಿದ್ದ ಮೊಬೈಲ್‌ ದೌರ್ಬಲ್ಯವಾಯಿತು. ಅದ್ಭುತವಾಗಬೇಕಿದ್ದು ಅಸಹ್ಯವಾಯಿತು. ಮೊಬೈಲ್‌ ಬಳಸುವ ವೇಳೆ ವಿವೇಕವನ್ನು ಇಟ್ಟುಕೊಳ್ಳದಿದ್ದರೆ ಮುಂದೆ ನಾವು ಯಾರೂ ನಮ್ಮ ನಿಯಂತ್ರಣದಲ್ಲಿರುವುದಿಲ್ಲ ಎಂದು ಎಚ್ಚರಿಸಿದರು.

ಮೊಬೈಲ್‌ ಬಂದ ನಂತರದಲ್ಲಿ ನಮಗೆ ಪ್ರಾಧಾನ್ಯತೆಗಳೇ ಇಲ್ಲವಾಗಿದೆ. ಮೊದಲು ಯಾವುದಕ್ಕೆ ಪ್ರಾಧಾನ್ಯತೆ ಕೊಡಬೇಕು, ನಂತರ ಯಾವುದಕ್ಕೆ ನೀಡಬೇಕು ಎನ್ನುವುದು ಗೊತ್ತೇ ಇಲ್ಲದಂತೆ ವರ್ತಿಸುತ್ತಿದ್ದೇವೆ. ವಿದ್ಯಾರ್ಥಿಗಳು ಮೊಬೈಲ್‌ನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದು, ಅದನ್ನು ಕಡಿಮೆ ಮಾಡಬೇಕು. ಸ್ವಲ್ಪ ಸಮಯವಾದರೂ ನಮ್ಮತನಕ್ಕೆ ಆಧ್ಯತೆ ನೀಡಬೇಕು ಎಂದು ಬುದ್ಧಿಮಾತು ಹೇಳಿದರು.

ವಿದೇಶಿ ಸಂಸ್ಕೃತಿಯನ್ನು ಬದಿಗೊತ್ತಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಪ್ರಸ್ತುತ ದಿನಗಳಲ್ಲಿ ವಿದೇಶಿ ವಸ್ತುಗಳ ಉತ್ಪನ್ನಗಳಿಗೆ ರಾಜಮಾರ್ಗ ತೋರಿಸಿರುವ ನಾವು, ನಮ್ಮ ಉತ್ಪನ್ನಗಳನ್ನು ಹುಡುಕಿಕೊಂಡು ಹೋಗುವಂತಹ ಸ್ಥಿತಿಯಲ್ಲಿಟ್ಟಿದ್ದೇವೆ ಎಂದು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿ ವಿಷಾದಿಸಿದರು.

ಆಹಾರ, ಬಟ್ಟೆ ಇತ್ಯಾದಿ ಮೂಲಭೂತ ಅಂಶಗಳಲ್ಲಿ ವಿದೇಶಿ ಶೈಲಿಯನ್ನು ಅನುಸರಿಸುತ್ತಿದ್ದು, ಅವು ನಮ್ಮ ಆರೋಗ್ಯ ಮತ್ತು ಸಂಸ್ಕೃತಿಗೆ ಒಳ್ಳೆಯದಲ್ಲ. ಆದ್ದರಿಂದ ದೇಶಿ ಉತ್ಪನ್ನಗಳನ್ನು ಬಳಸಬೇಕು. ಜಾನಪದ ಜಾತ್ರೆ ಮಾದರಿಯಲ್ಲೇ ಇನ್ನಷ್ಟು ದೇಶಿಯ ಹಬ್ಬಗಳು ನಡೆಯಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸುವಂತಹ ಕೆಲಸಗಳಾಗಬೇಕು ಎಂದು ಸಲಹೆ ನೀಡಿದರು.

ಹಂಪಿ ವಿವಿ ವಿಶ್ರಾಂತ ಕುಲಪತಿ ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಅತೀ ಹೆಚ್ಚು ಜನಪದ ಕಲೆಗಳನ್ನು ಹೊಂದಿರುವ ಮಂಡ್ಯ ಜಿಲ್ಲೆ, ಹೆಚ್ಚಿನ ಜನಪದ ಸಂಸ್ಕೃತಿಯನ್ನು ಹೊಂದಿದೆ. ಇದು ಜನಪದದ ತವರೂರು ಎಂದು ಬಣ್ಣಿಸಿದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ಕುಮಾರ್ ಬೆಳಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಕೆ. ಹೇಮಲತಾ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಜಾತ್ರೆಯ ಸಹ ಸಂಚಾಲಕರು ಡಾ. ಕೆಂಪಮ್ಮ ಎಂ. ಮತ್ತು ತಂಡದವರು ಜಾನಪದ ಹಾಡನ್ನು ಹೇಳುತ್ತಾ, ರಾಗಿಬೀಸುವ ಮೂಲಕ ಚಾಲನೆ ನೀಡಿದರು.

ಸಾಂಸ್ಕೃತಿಕ ವೇದಿಕೆ ಖಜಾಂಚಿ ಡಾ. ಜ್ಯೋತ್ಸ್ನಾ ಕಾರಂತ್, ಪತ್ರಾಂಕಿತ ವ್ಯವಸ್ಥಾಪಕ ರವಿಕಿರಣ್ ಕೆ. ಪಿ. ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಜನಪದ ಜಾತ್ರೆಯಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು:

ಸಂಭ್ರಮಿಸಿದ ವಿದ್ಯಾರ್ಥಿನಿಯರು ಜಾನಪದ ವಸ್ತುಗಳ ವಸ್ತು ಪ್ರದರ್ಶನ ಹಾಗೂ ದೇಸಿ ತಿಂಡಿ - ತಿನಿಸುಗಳನ್ನೊಳಗೊಂಡ ಆಹಾರ ಮಳಿಗೆ (ಸ್ಟಾಲ್)ಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳು ನೃತ್ಯ ಮಾಡಿ ಸಂತೋಷಪಟ್ಟರು. ಕಾಲೇಜಿನ ಮೈದಾನದಿಂದ ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ವೀರಗಾಸೆ ಸೇರಿ ೫ ಕ್ಕೂ ಹೆಚ್ಚು ಕಲಾ ತಂಡಗಳಿಂದ ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಎತ್ತಿನಗಾಡಿಯ ಮೆರವಣಿಗೆಯಲ್ಲಿ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮಿಂಚಿದರು. ಇನ್ನುಳಿದ ವಿದ್ಯಾರ್ಥಿಗಳು ಕುಂಭ ಹಿಡಿದು ಸಂಭ್ರಮಿಸಿದರು.

ಇದೇ ವೇಳೆ ಬುಜ್ಜಣಿಗೆ ಬುಟ್ಟಿ ಲಕ್ಕಿ ಡ್ರಾದಲ್ಲಿ ವಿಜೇತ ವಿದ್ಯಾರ್ಥಿನಿ ಹಾಗೂ ಅಧ್ಯಾಪಕರಿಗೆ ಬುಜ್ಜಣಿಗೆ ಬುಟ್ಟಿಯನ್ನು ವಿತರಿಸಿದರು.

ತದನಂತರ ಜಾನಪದ ಚೆಲುವೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಅಲಂಕೃತಗೊಂಡ ಎತ್ತಿನ ಗಾಡಿ ಮೆರವಣಿಗೆ ಸ್ಪರ್ಧೆ, ಗಾದೆ ಹೇಳಿ ಒಗಟು ಬಿಡಿಸಿ ಹಾಗೂ ಗ್ರಾಮೀಣ ಕ್ರೀಡೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ