ಸಿಕ್ಕಿಬಿದ್ದ ಪೊಲೀಸ್ ನಾಪತ್ತೆ
ಕಳೆದ ತಿಂಗಳೇ ಎಫ್ಐಆರ್ ದಾಖಲುತಬ್ಬಿಬ್ಬಾಗಿರುವ ಪೊಲೀಸ್ ಇಲಾಖೆ
ಕನ್ನಡಪ್ರಭ ವಾರ್ತೆ ಕೊಪ್ಪಳಮೊಬೈಲ್ ಕಾಲ್ ಹಿಸ್ಟರಿ ಸೇರಿದಂತೆ ಮೊಬೈಲ್ ಸಿಡಿಆರ್ ಮಾಹಿತಿಯನ್ನು ಇಲ್ಲಿಯ ಸೆನ್ ಪೊಲೀಸ್ ಠಾಣೆಯ ಮುಖ್ಯ ಪೊಲೀಸ್ ಕಾನಸ್ಟೇಬಲ್ ಮಾರಾಟ ಮಾಡಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಇದು, ಪೊಲೀಸ್ ಇಲಾಖೆಯನ್ನೇ ತಬ್ಬಿಬ್ಬುಗೊಳಿಸಿದ್ದು, ನಾಗರಿಕರು ಸಹ ಆತಂಕಗೊಳ್ಳುವಂತೆ ಮಾಡಿದೆ.ಯಾವುದಾದರೂ ಮಾಹಿತಿ ಬೇಕಾಗಿದ್ದಲ್ಲಿ ಹಣ ನೀಡಿದರೆ, ಮೊಬೈಲ್ ಲೊಕೇಶನ್, ಸಿಡಿಆರ್ ಮಾಹಿತಿ, ಟಾವರ್ ಮಾಹಿತಿಯನ್ನು ಇಲ್ಲಿಯ ಎಸ್ಪಿ ಕಚೇರಿಯಲ್ಲಿರುವ ಸೆನ್ ಪೊಲೀಸ್ ಠಾಣೆಯ ಮುಖ್ಯ ಕಾನ್‌ಸ್ಟೇಬಲ್ ಕೋಟೆಪ್ಪ ನೀಡುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಸುಮಾರು 145 ಇಂತಹ ಮಾಹಿತಿಯನ್ನು ಆತ ಸೋರಿಕೆ ಮಾಡಿದ್ದು ಪತ್ತೆಯಾಗಿದೆ.
145 ಮೊಬೈಲ್ ಸಿಡಿಆರ್ ಹಾಗೂ 9 ಟವರ್ ಲೋಕೇಶನ್ ಮಾಹಿತಿ ನೀಡಿದ್ದಾನೆ. ಈಗ ಈತನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಸ್ವಯಂ ದೂರು ದಾಖಲು ಮಾಡಿಕೊಳ್ಳಲಾಗಿದೆ.ಕಳೆದ ತಿಂಗಳು ಪ್ರಕರಣ ದಾಖಲಾಗಿದ್ದರೂ ಸಹ ಇದು ತಡವಾಗಿ ಬೆಳಕಿಗೆ ಬಂದಿದೆ. ಇದುವರೆಗೂ ಪೊಲೀಸ್ ಇಲಾಖೆಯೂ ಸಹ ಸಾರ್ವಜನಿಕರ ಮಾಹಿತಿಗಾಗಿಯೂ ಈ ವಿಷಯವನ್ನು ಹಂಚಿಕೆ ಮಾಡಿಲ್ಲ. ಆರೋಪಿ ನಾಪತ್ತೆ:
ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಮುಖ್ಯಪೇದೆ ಕೋಟೆಪ್ಪ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಶೋಧಕಾರ್ಯ ನಡೆಸಿದ್ದರೂ ಇದುವರೆಗೂ ಪತ್ತೆಯಾಗಿಲ್ಲ.ಸೆನ್ ಠಾಣೆಯ ಎಎಸ್ಐ ದಾಖಲಿಸಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.ಮಹಾ ಅಪರಾಧ:
ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ, ನಂತರ ಅಗತ್ಯಬಿದ್ದಾಗ ಮೇಲಾಧಿಕಾರಿಗಳ ಅನುಮತಿಯ ಮೇಲೆ ಮೊಬೈಲ್ ಡಾಟಾ ಅಥವಾ ಕಾಲ್ ಹಿಸ್ಟರಿ ಮಾಹಿತಿ ನೀಡಬೇಕು. ಆದರೆ, ಇದ್ಯಾವುದು ಅಲ್ಲದೆ ಮಾಹಿತಿಯನ್ನು ನೀಡಿರುವುದು ಅಘಾತಕಾರಿಯಾಗಿದೆ. ಯಾರ್‍ಯಾರಿಗೆ ಮಾಹಿತಿ ನೀಡಿದ್ದಾನೆ ಮತ್ತು ಯಾವ ಕಾರಣಕ್ಕಾಗಿ ಮಾಹಿತಿ ನೀಡಿದ್ದಾನೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.ತನಿಖೆಯಾಗಲಿ:145 ಮೊಬೈಲ್ ಸಿಡಿಆರ್ ಮಾಹಿತಿ ಮತ್ತು 9 ಮೊಬೈಲ್ ಟವರ್ ಲೋಕೇಶನ್ ಮಾಹಿತಿಯನ್ನು ಆತ ಸೋರಿಕೆ ಮಾಡಿದ್ದಾನೆ. ಆದರೆ, ಇದು ಯಾವ ಕಾರಣಕ್ಕಾಗಿ ನೀಡಿರುವ ಮಾಹಿತಿ, ಯಾರದು ಮಾಹಿತಿ ನೀಡಿದ್ದಾರೆ. ಅದರಿಂದಾಗಿರುವ ಪರಿಣಾಮ ಏನು, ಮಾಹಿತಿ ಸೋರಿಕೆಯಿಂದ ಯಾರಿಗಾದರೂ ತೊಂದರೆಯಾಗಿದೆಯಾ ಎನ್ನುವುದು ಸಹ ತನಿಖೆಯಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.