ವಿದ್ಯುತ್ ಚಿತಾಗಾರ ನಿರ್ಮಾಣ ಆಗ್ರಹಿಸಿ ಅಣಕು ಶವಯಾತ್ರೆ

KannadaprabhaNewsNetwork | Published : Aug 8, 2024 1:34 AM

ಸಾರಾಂಶ

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ಬಿಎಸ್‌ಪಿ ಜಿಲ್ಲಾಧ್ಯಕ್ಷ ಆಟ್ರಂಗಡ ದಿವಿಲ್‌ಕುಮಾರ್ ನೇತೃತ್ವದಲ್ಲಿ ಮಡಿಕೇರಿ ಎಲ್‌ಐಸಿ ಕಚೇರಿ ಬಳಿ ಇರುವ ಬಹುಜನ ಸಮಾಜ ಪಾರ್ಟಿಯ ಮುಂಭಾಗ ಜಮಾಯಿಸಿದ ಪಕ್ಷದ ಪ್ರಮುಖರು ಪ್ರತಿಭಟನ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ಬಿಎಸ್‌ಪಿ ಜಿಲ್ಲಾಧ್ಯಕ್ಷ ಆಟ್ರಂಗಡ ದಿವಿಲ್‌ಕುಮಾರ್ ನೇತೃತ್ವದಲ್ಲಿ ನಗರದ ಎಲ್‌ಐಸಿ ಕಚೇರಿ ಬಳಿ ಇರುವ ಬಹುಜನ ಸಮಾಜ ಪಾರ್ಟಿಯ ಮುಂಭಾಗ ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಜಿಲ್ಲಾ ಕಚೇರಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಅಣಕು ಶವಯಾತ್ರೆಯೊಂದಿಗೆ ಕಾಲ್ನಡಿಗೆ ಮೂಲಕ ತೆರಳಿ ಮಾನವ ಸರಪಳಿ ರಚನೆ ಮಾಡಿ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಆಟ್ರಂಗಡ ದಿವಿಲ್‌ಕುಮಾರ್ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಣ್ಣೀರ ಹರೀಶ್, ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಇನ್ನೂ ಕೂಡ ಕೊಡಗು ಜಿಲ್ಲೆಯ ಮೂಲ ನಿವಾಸಿಗಳು, ಬಡವರ್ಗದವರಿಗೆ ಮೂಲಭೂತ ಸೌಕರ್ಯಗಳು ಲಭಿಸಿಲ್ಲ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ತಿಂಗಳ ಕಾಲ ಮಳೆಗಾಲ ಇರುತ್ತದೆ. ಈ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಅಗತ್ಯವಾಗಿ ಬೇಕಾಗುವ ಕಟ್ಟಿಗೆಗಳೂ ಸಿಗುವುದಿಲ್ಲ. ಬೇಸಿಗೆಯಲ್ಲಿಯೂ ಕಟ್ಟಿಗೆಗಳ ಅಭಾವವಿರುತ್ತದೆ. ಅರಣ್ಯ ಪ್ರದೇಶದಿಂದ ಕಟ್ಟಿಗೆ ತರಲು ಕಟ್ಟಿಗೆ ತರಲು ಅರಣ್ಯ ಇಲಾಖೆಯ ಅಭ್ಯಂತರವಿರುತ್ತದೆ. ಇದರಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಲಿದೆ ಎಂದರು.

ಸಮಸ್ಯೆ ಬಗ್ಗೆ ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳಾಗಿ, ಅಧಿಕಾರಿಗಳಾಗಿ ಇದುವರೆಗೆ ಗಮನ ಹರಿಸಿಲ್ಲ ಎಂದ ಅವರು, ಪಕ್ಷದ ವತಿಯಿಂದ ಕಳೆದ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ

ಕೂಡ ಸಲ್ಲಿಸಲಾಗಿತ್ತು. ಆದರೂ ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲವೆಂದು ಆರೋಪಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಪುತ್ರಿ ರೇವತಿರಾಜ್, ರಾಜ್ಯ ಪದಾಧಿಕಾರಿಗಳಾದ ಎಂ.ಎಂ.ರಾಜು, ಚೇತನ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಬೇಡಿಕೆಯನ್ನೊಳಗೊಂಡ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

Share this article