- ಕಟ್ಟಿನಮನೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಸ್ತಿ ಸಾಂದ್ರತಾ ಮಾಪನ ತಪಾಸಣಾ ಶಿಬಿರ
ನರಸಿಂಹರಾಜಪುರ: ಆಧುನಿಕ ಆಹಾರ ಪದ್ಧತಿಯಿಂದ ಮೂಳೆಗಳ ಸವೆತ ಹೆಚ್ಚಾಗುತ್ತಿದೆ ಎಂದು ಸರ್ಕಾರಿ ಆಸ್ಪತ್ರೆ ಕೀಲು ಮತ್ತು ಮೂಳೆ ತಜ್ಞ ಡಾ.ವಿಜಯ್ ತಿಳಿಸಿದರು.ಗುರುವಾರ ತಾಲೂಕಿನ ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಕಾನೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಅಸ್ತಿ ಸಾಂದ್ರತಾ ಮಾಪನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಮೂಳೆ ಗಳು ಮನುಷ್ಯನಿಗೆ ಅತಿ ಅವಶ್ಯಕ. ಮೂಳೆಗಳ ಬಗ್ಗೆ ಕಾಳಜಿ ವಹಿಸಬೇಕು. ಇಳಿ ವಯಸ್ಸಿನಲ್ಲಿ ಮೂಳೆಗಳ ಆರೋಗ್ಯದ ಬಗ್ಗೆ ಗಮನ ನೀಡಬೇಕು. ಕ್ಯಾಲ್ಸಿಯಂ ಇರುವಂತಹ ಆಹಾರ ಪದಾರ್ಥಗಳ ಸೇವನೆ, ಹಾಲು ಮೊಟ್ಟೆ ಸೇವಿಸುವುದರಿಂದ ಮೂಳೆ ಗಳ ಬೆಳವಣಿಗೆಗೆ ಬಹಳ ಸಹಕಾರಿಯಾಗುತ್ತದೆ. ಮನುಷ್ಯರಲ್ಲಿ ಸುಮಾರು 206 ಮೂಳೆಗಳಿದ್ದು ಇವುಗಳು ಸಹಜ ಸ್ಥಿತಿಯಲ್ಲಿ ದ್ದರೆ ಮಾತ್ರ ನಮ್ಮ ದೈನಂದಿನ ಚಟುವಟಿಕೆ ನಡೆಸಲು, ನಡೆದಾಡಲು ಸಹಕಾರಿ. ಆದ್ದರಿಂದ ಮೂಳೆಗಳ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು ಡಾಕ್ಟರ್ ಆಕಾಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಟ್ಟಿನಮನೆ ಮನೆ ಪ್ರದೇಶದಲ್ಲಿ ಮಂಗನ ಕಾಯಿಲೆ ಹರಡುತ್ತಿದ್ದು ಎಲ್ಲ ಸಾರ್ವಜನಿಕರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಕಾಡಿಗೆ ಹೋಗುವವರು ಕಡ್ಡಾಯವಾಗಿ ಡೆಫಾ ತೈಲ ಹಚ್ಚಿಕೊಂಡು ಕಾಡಿಗೆ ತೆರಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಸದಸ್ಯೆ ವಿಶಾಂತಿ ಡಿಸೋಜ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ವಿಜಯ್ ಕುಮಾರ್, ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್, ಡಾ. ನಿಶಾಲ್, ಡಾ.ಅನುಷಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.
ಡಾ.ಅನುಷಾ ಶಿಬಿರಾರ್ಥಿಗಳಿಗೆ ಫಿಜಿಯೋ ಥೆರಪಿ ಮಾಡಿದರು. ಮಂಜುಳಾ ಆಯುಷ್ಮಾನ್ ಆರೋಗ್ಯ ಕರ್ನಾಟಕ ಬಗ್ಗೆ ಮಾಹಿತಿ ನೀಡಿದರು. 88 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.ಕ್ಯಾಪ್ಷನ್:
ನರಸಿಂಹರಾಜಪುರ ತಾಲೂಕಿನ ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಅಸ್ತಿ ಸಾಂದ್ರತಾ ಮಾಪನ ತಪಾಸಣಾ ಶಿಬಿರದಲ್ಲಿ ಕೀಲು ಮತ್ತು ಮೂಳೆ ತಜ್ಞ ಡಾ.ವಿಜಯ್ ಮಾತನಾಡಿದರು.