ಗುಡ್ಡೆಹೊಸೂರು: ಗ್ರಾಮದ ಮಕ್ಕಳ ಬಾಲ್ಯಕ್ಕೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯು ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸಂಪೂರ್ಣ ಆಧುನಿಕ ಹಾಗೂ ಶಿಶುಸ್ನೇಹಿ ರೂಪ ನೀಡುವ ಮೂಲಕ ಮಾದರಿಯಾಗಿದೆ. ಪಂಚಾಯಿತಿಯ ಶ್ರಮದಿಂದಾಗಿ ಇಂದು ಈ ಅಂಗನವಾಡಿ ಕೇಂದ್ರವು ಸುಸಜ್ಜಿತ, ನವೀನ ಹಾಗೂ ಆಕರ್ಷಕ ವಾತಾವರಣದೊಂದಿಗೆ ಕಂಗೊಳಿಸುತ್ತಿದೆ. ಮಕ್ಕಳ ಕಲಿಕೆ ಮತ್ತು ಆಟದ ವಾತಾವರಣವನ್ನು ಆಹ್ಲಾದಕರಗೊಳಿಸಲು ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಆಕರ್ಷಕ ವಾತಾವರಣ: ಗೋಡೆಗಳಿಗೆ ಚಿತ್ತಾರಗಳಿಂದ ಕೂಡಿದ ಮನಮೋಹಕ ಬಣ್ಣ ಬಳೆಯಲಾಗಿದ್ದು, ಶುಚಿತ್ವದಿಂದ ಕೂಡಿದ ನೆಲ (ಫ್ರೆಂಚ್ ಶೈಲಿಯ ಸುಂದರ ಫ್ಲೋರಿಂಗ್) ಹಾಗೂ ಮಕ್ಕಳಿಗೆ ಗಾಯವಾಗದಂತೆ ಗುಣಮಟ್ಟದ ಫ್ಲೋರ್ ಮ್ಯಾಟ್‌ಗಳನ್ನು ಅಳವಡಿಸಲಾಗಿದೆ.
ಆಧುನಿಕ ಶಿಕ್ಷಣಕ್ಕೆ ಆದ್ಯತೆ: ಡಿಜಿಟಲ್ ಕಲಿಕೆಗೆ ಪೂರಕವಾಗಿ ಇಂಟರ್ನೆಟ್ ಸಂಪರ್ಕ ಹೊಂದಿರುವ ಟೆಲಿವಿಷನ್ ವ್ಯವಸ್ಥೆ ಮಾಡಲಾಗಿದ್ದು, ದೃಶ್ಯ-ಶ್ರವಣ ಮಾಧ್ಯಮದ ಮೂಲಕ ಮಕ್ಕಳು ಸುಲಭವಾಗಿ ಕಲಿಯಲು ಹಾದಿ ಸುಗಮವಾಗಿದೆ.
ಆರೋಗ್ಯ ಮತ್ತು ನೈರ್ಮಲ್ಯ: ತಂಪಾದ ಗಾಳಿಗೆ ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ನೈರ್ಮಲ್ಯದಿಂದ ಕೂಡಿದ ಅಡುಗೆ ಮನೆ ಮತ್ತು ಮಕ್ಕಳು ಬಳಸಲು ಅನುಕೂಲಕರವಾದ ಬಾಲಸ್ನೇಹಿ ಶೌಚಾಲಯ ನಿರ್ಮಿಸಲಾಗಿದೆ. ಅಂಗನವಾಡಿಯ ಈ ಅಭೂತಪೂರ್ವ ಬದಲಾವಣೆಯಿಂದಾಗಿ ಗ್ರಾಮದ ಮಕ್ಕಳು ಮತ್ತು ಪೋಷಕರಲ್ಲಿ ಸಂತಸದ ಹೊನಲು ಹರಿದಿದೆ. ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಪ್ರೇರಕವಾಗಿರುವ ಈ ವಾತಾವರಣ ಸೃಷ್ಟಿಸಲು ಗ್ರಾಮ ಪಂಚಾಯಿತಿ ವಹಿಸಿದ ನಿರಂತರ ಆಸಕ್ತಿ ಹಾಗೂ ಕಾಳಜಿಗೆ ಸಾರ್ವಜನಿಕರಿಂದ, ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.