ಕನ್ನಡಪ್ರಭ ವಾರ್ತೆ ತಿಪಟೂರು
ರೈಲು ನಿಲ್ದಾಣಗಳ ಆಧುನೀಕರಣ ಹಾಗೂ ರೈಲ್ವೆ ಕೆಳಸೇತುವೆ ಮತ್ತು ಮೇತ್ಸೆತುವೆ ನಿರ್ಮಾಣಕ್ಕಾಗಿ ಕೇಂದ್ರ ರೈಲ್ವೆ ಇಲಾಖೆಯಿಂದ 750ಕೋಟಿರು.ವೆಚ್ಚದಲ್ಲಿ ರೈಲ್ವೆ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿದ್ದು ಮುಂದಿನ ಒಂದೂವರೆ ವರ್ಷದೊಳಗೆ ಜಿಲ್ಲೆಯಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಳಿಸಿದರು.ತಿಪಟೂರು ಜನತೆಯ ಬಹುವರ್ಷಗಳ ಪ್ರಮುಖ ಬೇಡಿಕೆಗಳಲ್ಲೊಂದಾದ ಶಾರದ ನಗರದ ರೈಲ್ವೆ ನಿಲ್ದಾಣದ ಮೂಲಕ ಹಾಯ್ದು ಹೋಗುವ ಹಾಸನ ರಸ್ತೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಲ್ಲಿನ ರೈಲ್ವೆ ಗೇಟ್ ಮುಚ್ಚುವುದರಿಂದ ಸಾರ್ವಜನಿಕರು ಹಲವು ವರ್ಷಗಳಿಂದಲೂ ಕಷ್ಟ ಅನುಭವಿಸುತ್ತಿದ್ದರು. ಒಮ್ಮೊಮ್ಮೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇತ್ತು. ಹಾಗಾಗಿ ಇಲ್ಲಿನ ಜನರ ಕಷ್ಟವನ್ನು ಅರ್ಥಮಾಡಿಕೊಂಡು ನಾನು ಮೇಲ್ಸೆತುವೆ ಯೋಜನೆಯನ್ನು ೪೨ಕೋಟಿ ರು. ವೆಚ್ಚದಲ್ಲಿ ಮಂಜೂರು ಮಾಡಿ ಇಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಅನುಕೂಲಕ್ಕೆ ಬಿಟ್ಟುಕೊಡಲಾಗುವುದು. ಜಿಲ್ಲೆಯಲ್ಲಿ ೨೩ಕಡೆಗಳಲ್ಲಿ ಕೆಳಸೇತುವೆ ಮತ್ತು ಮೇಲ್ಸೆತುವೆಗಳ ನಿರ್ಮಾಣವಾಗಲಿದ್ದು ಈಗಾಗಲೇ ೧೦ ಕಡೆಗಳಲ್ಲಿ ಗುದ್ದಲಿಪೂಜೆ ಮಾಡಲಾಗಿದೆ. ತಾಲೂಕಿನ ಹೊನ್ನವಳ್ಳಿ(ಬಿದರೆಗುಡಿ) ಗೇಟ್‌ನಲ್ಲಿ ೨೬ಕೋಟಿ ರು., ಹಿಂಡಿಸ್ಕೆರೆ ೩೨ಕೋಟಿರು. ಕಾಮಗಾರಿ ಟೆಂಡರ್ ಕರೆಯಲಾಗಿದೆ. ೨೪ಕೋಟಿರು. ವೆಚ್ಚದಲ್ಲಿ ತಿಪಟೂರು ರೈಲ್ವೆ ನಿಲ್ದಾಣ, ೧೬ಕೋಟಿರು. ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ದಿ ಪಡಿಸಲಾಗುವುದು. ಗುಬ್ಬಿ, ಮೈಸೂರು-ನಿಟ್ಟೂರು, ಚಿತ್ರದುರ್ಗ ರಾಜ್ಯ ಹೆದ್ದಾರಿ ರಸ್ತೆಗೂ ಗುದ್ದಲಿಪೂಜೆ ನೆರವೇರಿಸಲಾಗಿದೆ. ರಾಜ್ಯದಲ್ಲಿ ೬೧ ರೈಲ್ವೆ ಸ್ಟೇಷನ್‌ಗಳ ಕಾಮಗಾರಿ ತೆಗೆದುಕೊಳ್ಳಲಾಗಿದ್ದು, ಪ್ರಧಾನಿಗಳು ಎರಡು ಸಾವಿರ ಕೋಟಿ ರು. ಬಿಡುಗಡೆ ಮಾಡಿದ್ದು ಇದರಲ್ಲಿ ನಮ್ಮ ಜಿಲ್ಲೆಯ ನಿಲ್ದಾಣಗಳೂ ಸೇರಿವೆ. ೯೦ಕೋಟಿರೂ ವೆಚ್ಚದಲ್ಲಿ ಹೊಸ ಆಯಾಮದೊಂದಿಗೆ ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಹೆಸರನ್ನು ತುಮಕೂರು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲಾಗುವುದು ಎಂದರು. ೩೦ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಾಯದುರ್ಗ-ತುಮಕೂರು ಮತ್ತು ತುಮಕೂರು, ಶಿರಾ, ದಾವಣಗೆರೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ೨ಸಾವಿರ ಕೋಟಿರು. ಯೋಜನೆ ಕೈಗೆತ್ತಿಕೊಂಡಿದ್ದೇವೆ. ತುಮಕೂರು-ನೆಲಮಂಗಳ ರಸ್ತೆ ಅದ್ವಾನವಾಗಿತ್ತು ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದೆ. ಹಾಸನ-ಹಿರಿಯೂರು, ತಿಪಟೂರು-ಹೊನ್ನವಳ್ಳಿ ಮೇಲೆ ಗ್ರೀನ್ ಕಾರಿಡಾಲ್ ರಸ್ತೆ ಆಗಲಿದೆ. ತುಮಕೂರು ಹೊರತು ಪಡಿಸಿ ತಿಪಟೂರು ಬೆಳೆಯುತ್ತಿದ್ದು ಆದರೆ ಇಲ್ಲಿ ಕೊಬ್ಬರಿ ಬಿಟ್ಟರೆ ಬೇರ‍್ಯಾವುದೇ ಉದ್ಯಮವಿಲ್ಲ ಆಗಾಗಿ ಇಲ್ಲಿ ಕೈಗಾರಿಕೆ ನಿರ್ಮಾಣ ಮಾಡುವ ಚಿಂತನೆ ಮಾಡಲಾಗಿದೆ. ನಾನು ರೈಲ್ವೆ ಮತ್ತು ಜಲಶಕ್ತಿ ಸಚಿವರಾಗಿರುವ ಕಾರಣ ಜಿಲ್ಲೆಯಲ್ಲಿ ಪ್ರಧಾನಮಂತ್ರಿಗಳ ದೂರದೃಷ್ಟಿ ಯೋಜನೆಯಾದ ಮನೆಮನೆಗೆ ಗಂಗೆ ಜೆಜೆಎಂ ಯೋಜನೆಗಾಗಿ ರಾಷ್ಟ್ರಕ್ಕೆ ೪ಲಕ್ಷ ಕೋಟಿ ರು. ನೀಡಿದ್ದು ಇದರಲ್ಲಿ ಕರ್ನಾಟಕವೂ ಸೇರಿದ್ದು ಪ್ರತಿಯೊಬ್ಬರಿಗೂ ಶುದ್ಧಕುಡಿಯುವ ನೀರು ಒದಗಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದ ಅವರು ನಾನು ಚುನಾವಣೆಯಲ್ಲಿ ನಿಮಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದು ಮುಂದೆಯೂ ನಿಮ್ಮೊಂದಿಗಿರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಆರ್.ಎಂ ಮುದಿನ್‌ಮಿಥ್ಥನ್, ನೈರುತ್ಯ ರೈಲ್ವೆ ನಿರ್ಮಾಣದ ಮುಖ್ಯ ಆಡಳಿತಾಧಿಕಾರಿ ಅಜಯ್‌ಶರ್ಮ, ಮುಖ್ಯ ಇಂಜಿನಿಯರ್ ಪ್ರದೀಪ್ ಪೂರಿ, ಸಿಡಿಸಿಎಂ ಲೋಹಿತೇಶ್ವರ್, ಮಾಜಿ ಸಚಿವ ಬಿ.ಸಿ. ನಾಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ, ಮುಖಂಡರುಗಳಾದ ಲೋಕೇಶ್ವರ್, ಕೆ.ಟಿ. ಶಾಂತಕುಮಾರ್, ಜಕ್ಕನಹಳ್ಳಿ ಲಿಂಗರಾಜು, ತಹಸೀಲ್ದಾರ್ ಪವನ್‌ಕುಮಾರ್, ದಿಶಾ ಸಮಿತಿ ಸದಸ್ಯ ವೈ.ಎಚ್. ಹುಚ್ಚಯ್ಯ, ಶಿವಪ್ರಸಾದ್ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರುಗಳು ಭಾಗವಹಿಸಿದ್ದರು. ಚುನಾವಣೆಯಲ್ಲಿ ಮಾತ್ರ ಪಕ್ಷಇಲ್ಲಿನ ಶಾಸಕರಾದ ಕೆ. ಷಡಕ್ಷರಿಯವರು ಈ ಕಾರ್ಯಕ್ರಮಕ್ಕೆ ನಾನು ಆಹ್ವಾನಿಸಿದ್ದೆ ಆದರೆ ಬಂದಿಲ್ಲ. ಅವರನ್ನು ಬೇರೆ ಪಕ್ಷದವರು ಎಂದು ಭಾವಿಸಿಲ್ಲ. ನಾನು ಚುನಾವಣೆಯಲ್ಲಿ ಮಾತ್ರ ಒಂದು ಪಕ್ಷದವನಾಗಿರುತ್ತೇನೆ. ನಂತರ ನನಗೆ ಎಲ್ಲರೂ ಒಂದೇ, ಅಭಿವೃದ್ಧಿ ವಿಚಾರ ಬಂದಾಗ ನಾನು ರಾಜಕಾರಣ ಮಾಡಲ್ಲ ಎನ್ನುವ ಮೂಲಕ ಶಾಸಕರನ್ನು ನಯವಾಗಿಯೇ ತಿವಿದರು.