ಮೋದಿ ಗ್ಯಾರಂಟಿ ಕಾರ್ಡ್‌: ಸುಳ್ಳು ವದಂತಿಗೆ ಅಂಚೆ ಕಚೇರಿ ರಶ್‌

KannadaprabhaNewsNetwork | Published : Mar 20, 2024 1:17 AM

ಸಾರಾಂಶ

ಕಡಿಮೆ ಬೆಲೆಗೆ ಸಿಲಿಂಡರ್‌ ಪಡೆಯಲು ಕೆವೈಸಿ ಅಪ್‌ಡೇಟ್‌ ವದಂತಿ ಆಯ್ತು. ಈಗ ಅಂಚೆ ಇಲಾಖೆಯ ಸರದಿ. ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದರೆ ಕೇಂದ್ರ ಸರ್ಕಾರದಿಂದ 3 ಸಾವಿರ ಜಮಾ ಮಾಡಲಿದ್ದಾರೆ ಎಂಬ ವದಂತಿ.

ಹುಬ್ಬಳ್ಳಿ:

ಕಡಿಮೆ ಬೆಲೆಗೆ ಸಿಲಿಂಡರ್‌ ಪಡೆಯಲು ಕೆವೈಸಿ ಅಪ್‌ಡೇಟ್‌ ವದಂತಿ ಆಯ್ತು. ಈಗ ಅಂಚೆ ಇಲಾಖೆಯ ಸರದಿ. ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದರೆ ಕೇಂದ್ರ ಸರ್ಕಾರದಿಂದ ₹3 ಸಾವಿರ ಜಮಾ ಮಾಡಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ನಗರದ ಅಂಚೆ ಇಲಾಖೆ ಕಚೇರಿಗಳು ಕಳೆದ 3-4 ದಿನಗಳಿಂದ ಜನರಿಂದ ತುಂಬಿವೆ.

ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆ ಅಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್‌ ಕಾರ್ಡ್ ಹೊಂದಿದ ಮಹಿಳೆಯರ ಖಾತೆಗೆ ₹ 3 ಸಾವಿರ ಜಮಾ ಮಾಡಲಾಗುತ್ತದೆ ಎಂದು ಮಹಾನಗರದಾದ್ಯಂತ ವದಂತಿ ಹರಡಿದೆ. ಇದರಿಂದಾಗಿ ನಗರದ ಅಂಚೆ ಕಚೇರಿಗಳಿಗೆ ಮಹಿಳೆಯರು ಖಾತೆ ತೆರೆಯಲು ಮುಗಿಬೀಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೆ ಅಂಚೆಕಚೇರಿಗಳ ಎದುರು ನೂರಾರು ಮಹಿಳೆಯರು ಖಾತೆ ತೆರೆಯಲು ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದೆ.ಕಳೆದ ಡಿಸೆಂಬರ್‌ ತಿಂಗಳಲ್ಲಿ ಇ-ಕೆವೈಸಿ ಮಾಡಿಸದೇ ಇದ್ದರೆ ಗ್ಯಾಸ್‌ ಸಿಲಿಂಡರ್‌ಗಳ ಸಂಪರ್ಕ ಕಡಿತಗೊಳ್ಳಲಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗ್ಯಾಸ್‌ ಸಿಲಿಂಡರ್‌ ಪೂರೈಕೆ ಮಾಡುವ ಏಜನ್ಸಿಗಳ ಮುಂದೆ ಸಾವಿರಾರು ಜನರು ಸರದಿಯಲ್ಲಿ ನಿಂತು ಇ-ಕೆವೈಸಿ ಅಪ್‌ಡೇಟ್‌ ಮಾಡಿಸಿದ್ದರು. ಈಗ ಇದೇ ರೀತಿಯಾಗಿ ಅಂಚೆ ಕಚೇರಿಯ ವದಂತಿ ಹರಡಿರುವುದು ಜನತೆ ಗೊಂದಲಕ್ಕೆ ಸಿಲುಕುವಂತಾಗಿದೆ.

ಇಲ್ಲಿನ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಇರುವ ಮುಖ್ಯ ಅಂಚೆಕಚೇರಿ, ಹಳೇ ಹುಬ್ಬಳ್ಳಿ, ಗಿರಣಿಚಾಳ, ನವಗರರ, ಟ್ರಾಫಿಕ್‌ ಐಲ್ಯಾಂಡ್‌ ಉಪ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿರುವುದು ಮಂಗಳವಾರ ಕಂಡುಬಂದಿತು. ಇದು ಕೇವಲ ವದಂತಿ:

ಮೋದಿ ಕಾರ್ಡ್‌, ಮೋದಿ ಖಾತೆ ಎಂಬ ಯಾವುದೇ ಯೋಜನೆ ಅಂಚೆ ಕಚೇರಿಯಲ್ಲಿಲ್ಲ. ಕಳೆದ 2 ವರ್ಷದ ಹಿಂದೆಯೇ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಯೋಜನೆ ಪರಿಚಯಿಸಲಾಗಿದೆ. ಅದು ಕೇವಲ ಒಂದು ಉಳಿತಾಯ ಖಾತೆಯಾಗಿದ್ದು, ಯಾರು ಬೇಕಾದರೂ ₹200 ನೀಡಿ ಖಾತೆ ಹೊಂದಬಹುದು. ಈ ಕುರಿತು ಜನರಿಗೆ ಮನವರಿಕೆ ಮಾಡಲು ಯತ್ನಿಸಿದರೂ ನಮ್ಮ ಮಾತು ಕೇಳುತ್ತಿಲ್ಲ. ನಗರದ ಅಂಚೆ ಕಚೇರಿಗಳ ಎದುರು ಈ ಸುಳ್ಳು ಸುದ್ದಿ ನಂಬಬೇಡಿ ಎಂದು ನೋಟಿಸ್‌ ಅಂಟಿಸಲಾಗಿದೆ. ಆದರೂ ಬೆಳಗ್ಗೆ 7 ಗಂಟೆಗೆ ಕಚೇರಿಯ ಎದುರು ನೂರಾರು ಮಹಿಳೆಯರು ಸರದಿಯಲ್ಲಿ ನಿಂತು ಖಾತೆ ತರೆಯಲು ಬರುತ್ತಿದ್ದಾರೆ. ಜನದಟ್ಟಣೆಯ ಹಿನ್ನೆಲೆಯಲ್ಲಿ ಕಳೆದ 3-4 ದಿನಗಳಿಂದ ರಾತ್ರಿ 10 ಗಂಟೆಯ ವರೆಗೂ ಕೆಲಸ ನಿರ್ವಹಿಸುವಂತಾಗಿದೆ. ಇದೊಂದು ಸುಳ್ಳುಸುದ್ದಿಯಾಗಿದೆ ಎಂಬುದು ಅಂಚೆ ಇಲಾಖೆ ಅಧಿಕಾರಿಗಳ ಸ್ಪಷ್ಟನೆ.ಖಾತೆ ತೆರೆದರೆ ಅದಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಧಾನಿ ನರೇಂದ್ರ ಮೋದಿ ₹3 ಸಾವಿರ ಜಮಾ ಮಾಡುತ್ತಾರೆ ಎಂದು ನಮ್ಮ ಮನೆಯ ಅಕ್ಕಪಕ್ಕದವರು ಹೇಳುತ್ತಿದ್ದಾರೆ. ಅವರ ಮಾತು ನಂಬಿ ನಾನೂ ಖಾತೆ ತೆರೆಯಲು ಅಂಚೆ ಕಚೇರಿಗೆ ಬಂದಿದ್ದೇನೆ ಎಂದು ಹುಬ್ಬಳ್ಳಿಯ ಮಂಜುಳಾ ಅಗಸಿನ ಹೇಳಿದರು. ಎಲ್ಲಾರೂ ಹಂಗ ಹೇಳಾಕುಂತಾರ, ಇಲೆಕ್ಷನ್‌ ಆದ ಮ್ಯಾಲ ಮೋದಿ ನಮಗ ₹ 3 ಸಾವಿರ ಕೊಡ್ತಾರಂತ. ಪೋಸ್ಟ್‌ ಆಪೀಸ್‌ನ್ಯಾಗ ಅಕೌಂಟ್ ಮಾಡಿಸಿದ್ರ ಅಷ್ಟ ಹಾಕ್ತಾರಂತ ಹೇಳಿದ್ರು, ಹಂಗಾಗಿ ನಾನೂ ಅಕೌಂಟ್ ಮಾಡ್ಸಾಕ ಬಂದೀನ್ರಿ ಎಂದು ಹಳೇ ಹುಬ್ಬಳ್ಳಿ ನಿವಾಸಿ ಹನುಮವ್ವ ಮಾದರ ತಿಳಿಸಿದರು.

Share this article