ಮೋದಿ ಗ್ಯಾರಂಟಿ ಸುಳ್ಳಿನ‌ ಗ್ಯಾರಂಟಿ: ಸಚಿವ ಮಹದೇವಪ್ಪ

KannadaprabhaNewsNetwork | Published : Apr 19, 2024 1:02 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಎನ್ನುವುದು ಸುಳ್ಳಿನ ಗ್ಯಾರಂಟಿ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಎನ್ನುವುದು ಸುಳ್ಳಿನ ಗ್ಯಾರಂಟಿ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಪ್ರಚಾರದ ವೇಳೆ ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿ, ಮೋದಿ ಗ್ಯಾರಂಟಿಗಳು ಸುಳ್ಳಿನ ಗ್ಯಾರಂಟಿಗಳು, ಮೋದಿ ಬೆಲೆ ಏರಿಕೆ ಕಡಿಮೆ ಮಾಡಿದ್ದಾರಾ.? 15 ಲಕ್ಷವನ್ನು ಜನರ ಖಾತೆಗೆ ಹಾಕಿದ್ದಾರಾ.? ಪ್ರತಿವರ್ಷ ಎರಡು ಕೋಟಿ ಉದ್ಯೋಗವನ್ನ ಯುವಕರಿಗೆ ಕೊಟ್ಟಿದ್ದಾರಾ.? ರೈತರ ಆದಾಯ ಡಬಲ್ ಮಾಡಿದ್ದಾರಾ? ಇವೆಲ್ಲ ಅವರೇ ಹೇಳಿದ್ದು, ಅವರೇ ಹೇಳಿದ್ದ ಮಾತಿಗೆ ವಿರುದ್ಧ ಆದ್ರೆ, ಇವೆಲ್ಲ ಸುಳ್ಳಿನ ಗ್ಯಾರಂಟಿಗಳೇ ಎಂದು ಬಿಜೆಪಿ ಪ್ರಣಾಳಿಕೆಗೆ ಕಿಡಿಕಾರಿದರು.

ಶ್ರೀರಾಮ ಘೋಷಣೆ ಕೂಗಿದ ಹಿಂದೂ ಯುವಕರ ಮೇಲೆ ಹಲ್ಲೆ ವಿಚಾರಕ್ಕೆ ಮಾತನಾಡಿ, ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇಂತಹ ರಾಜಕೀಯ ಬೇಳೆಯಿಂದ ಜನರನ್ನ ಒಡೆದು ಆಳುವಂತಹ ಬಿಜೆಪಿಯ ಆಟ ಬಹಳ ದಿನ ನಡೆಯಲ್ಲ, ಹಿಂದೂ ಯುವಕರ ಮೇಲಿನ ಹಲ್ಲೆ ಬಿಜೆಪಿ ಬೇಳೆಯಾಗಿದೆ. ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚಾರ ವಿಚಾರಗಳಿಗೆ ಮುಕ್ತ ಅವಕಾಶ ಇದೆ. ಯಾರ್ಯಾರು ಈ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಾರೆ. ಅವರಿಗೆ ಕಾನೂನು ತನ್ನ ಕ್ರಿಯೆ ಮಾಡುತ್ತೆ ಎಂದರು‌.

ಸಂವಿಧಾನ ವಿಚಾರದಲ್ಲಿ ಕಾಂಗ್ರೆಸ್ ದಲಿತರನ್ನು ಟಾರ್ಗೆಟ್ ಮಾಡಿದೆ ಎನ್ನುವ ಎನ್.ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಎನ್.ಮಹೇಶ್ ನಮ್ಮ ಸ್ನೇಹಿತರೆ, ಮೊದಲು ಅವರು ಒಂದು ಪೆನ್ ಹಿಡಿದುಕೊಂಡು ರಿಷರ್ವೇಷನ್ ಮೇಲಿಂದ ಕೆಳಗೆ ಕೆಳಗಿಂದ ಮೇಲೆ ಅಂತ ವಿರೋಧ ಮಾಡುತ್ತಿದ್ದರು. ಮಂಡಲ್ ಕಮಿಷನ್ ವರದಿಯನ್ನು ವಿರೋಧ ಮಾಡಿದವರು ಯಾರೂ.? ಆ ವರದಿ ಜಾರಿಯಾದಾಗ ಕಮಂಡಲ ಯಾಕೆ ಹೋಯ್ತು, ಯಾರಿಂದ ಆಯ್ತು, ಸಂವಿಧಾನಕ್ಕೆ ವಿರುದ್ಧವಾಗಿರುವವರು ಬಿಜೆಪಿಯವರು. ಸಂವಿಧಾನ ಪರಾಮರ್ಶೆ ಮಾಡಿದವರು ವಾಜಪೇಯಿ ಅವರು. ಪರಾಮರ್ಶೆ ಅಂದ್ರೆ, ಸಂವಿಧಾನ ಬದಲಾವಣೆ ಅಂತ ಅರ್ಥ, ಈಗ ಧರ್ಮದ ಮೇಲೆ ದೇಶ ಕಟ್ಟಬೇಕು ಎನ್ನುತ್ತಾರೆ. ಸಂವಿಧಾನದಲ್ಲಿ ಧರ್ಮ, ದೇಶ ಅಂತ ಇದೆಯಾ.? ಎಲ್ಲರೂ ಒಂದೇ, ಧರ್ಮದ ಹೆಸರಿನಲ್ಲಿ ದೇಶ ಕಟ್ಟುವುದೇ ಸಂವಿಧಾನ ವಿರೋಧಿ ನಡೆ.

ಧರ್ಮ ಆಧಾರಿತ ರಾಜಕೀಯ ಮಾಡುವುದೇ ಸಂವಿಧಾನ ವಿರೋಧಿ ನಡೆ. ಕಾಂಗ್ರೆಸ್ ಇದರ ತಂಟೆಗೆ ಹೋಗಲ್ಲ ಎಂದು ಗುಡುಗಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಡಿಸಿಸಿ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌, ಮಾಜಿ ಸಂಸದ ಶಿವಣ್ಣ, ಜಿಪಂ ಮಾಜಿ ಸದಸ್ಯರಾದ ಬಾಲರಾಜು, ಅಯ್ಯನಪುರ ಶಿವಕುಮಾರ್‌ ಇತರರು ಇದ್ದರು.

Share this article