ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆ.ಎನ್.ಮೆಡಿಕಲ್ ಕಾಲೇಜು ಜೀರಗೆ ಸಭಾಭವನದಲ್ಲಿ ಮಂಗಳವಾರ ನಡೆದ ಪ್ರಬುದ್ಧರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆಗಳಲ್ಲಿ ಬಹುಮತದೊಂದಿಗೆ ಗೆದ್ದ ಪಾರ್ಟಿಗಳು ಬಳಿಕ ಆ ಸರ್ಕಾರ ಒಂದು ಜಾತಿಗೆ ಸೀಮಿತವಾಗುತ್ತಿತ್ತು. ಇಂತಹ ಆಡಳಿತ ಎಂದಿಗೂ ಇಡೀ ಸಮಾಜ ಪ್ರತಿನಿಧಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣವನ್ನು ಸವಾಲಾಗಿ ಸ್ವೀಕರಿಸಿ, ರಾಜಕೀಯ ಸಂಸ್ಕೃತಿ ಬದಲಾಯಿಸಿದರು. ಜಾತಿ ರಾಜಕಾರಣಕ್ಕೆ ತಡೆಹಾಕಿದರು. ಎಲ್ಲರಿಗೂ ನ್ಯಾಯಕೊಟ್ಟರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಮಂತ್ರದೊಂದಿಗೆ ಅಭಿವೃದ್ಧಿ ಸಂಕಲ್ಪ ಮಾಡಿದರು ಎಂದರು.ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕುಟುಂಬಕ್ಕೆ ಸೀಮಿತವಾಗಿವೆ. ಆದರೆ, ಭಾರತೀಯ ಜನತಾ ಪಾರ್ಟಿ ಕೆಡರ್ ಬೇಸ್ ಪಾರ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಪ್ರಜಾಪ್ರಭುತ್ವ ಪಕ್ಷ ನಮ್ಮದಾಗಿದೆ ಎಂದು ಹೇಳಿದರು.
ಕೊರೋನಾ ನಿಯಂತ್ರಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಆದರೆ, ಮೋದಿ ಕೊರೋನಾ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಮೋದಿ ಜೊತೆಗೆ ದೇಶದ ಜನತೆ ತಟ್ಟೆ ಬಾರಿಸಿದರು. ದೀಪ ಬೆಳಗಿಸಿದರು. ಕರ್ಫ್ಯೂ, ಜನತಾ ಕರ್ಫ್ಯೂ, ಲಾಕ್‌ಡೌನ್ ಮಾಡುವ ಮೂಲಕ ಕೊರೋನಾ ಜೊತೆಗೆ ಹೋರಾಡಿದರು. ದೇಶಕ್ಕೆ ಅಷ್ಟೇ ಅಲ್ಲದೇ, ಕೊರೋನಾ ಲಸಿಕೆಗಳನ್ನು ಬೇರೆ ದೇಶಕ್ಕೂ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಆ ವೇಳೆ ಗಾಂಧಿ ಕುಟುಂಬದವರು ಕೊರೋನಾ ಲಸಿಕೆ ಪಡೆಯಬಾರದೆಂದು ಜನತೆಗೆ ಹೇಳಿ, ತಾವೇ ಕದ್ದು ಮುಚ್ಚಿ ಲಸಿಕೆ ಹಾಕಿಸಿಕೊಂಡರು ಎಂದರು.
ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಪಾಕ್ ಪರ ಘೋಷಣೆ ಕೂಗಿದರು. ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಈ ಭೂಮಿ ಪುತ್ರ ನೀವು. ಈ ವಿಚಾರದಲ್ಲಿ ನಿವೇಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದ ನಡ್ಡಾ, ಭಾರತ ಜೋಡೋ ಪಾದಯಾತ್ರೆ ಮಾಡುತ್ತಿದ್ದೀರಲ್ಲ. ಭಾರತ ಒಡೆಯುವವರು ನಿಮ್ಮ ಮನೆಯಲ್ಲೇ ಕುಳಿತಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಲಾಗಿದೆ. ಕಾಂಗ್ರೆಸ್‌ನವರಿಗೆ ಮತಗಳು ಬೇಕಿವೆ. ಅವರಿಗೆ ನಿಜವಾಗಿಯೂ ದೇಶಭಕ್ತಿ ಇಲ್ಲ. ಅವರದ್ದು ಕುಟುಂಬ ಭಕ್ತಿ ಎಂದು ವ್ಯಂಗ್ಯವಾಡಿದರು.
ಗಾಂಧಿ ಕುಟುಂಬ ತಿವಿದ ನಡ್ಡಾ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, 2004-14ರವರೆಗೆ ಯುಪಿಎ ಸರ್ಕಾರ ಯಾವ ರೀತಿ ಆಡಳಿತ ಕೊಟ್ಟಿದ್ದಾರೆ ಎಂದರೆ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಭಾರತಕ್ಕೆ ಭವಿಷ್ಯವೇ ಇಲ್ಲ. ಅಭಿವೃದ್ಧಿ ಸಾಧ್ಯವೇ ಇಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನೋಡಲು ಸಾಧ್ಯ ಇಲ್ಲ ಎಂದು ಎಲ್ಲರೂ ಮಾತನಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ದೇಶಕ್ಕೆ ಉತ್ತಮ ಭವಿಷ್ಯವಿದೆ. ಉತ್ತಮ ಆಡಳಿತ ಕೊಡಲು ಸಾಧ್ಯ ಇದೆ ಎಂದು ಕಳೆದ 10 ವರ್ಷಗಳಿಂದ ಭ್ರಷ್ಟಾಚಾರ ಇಲ್ಲದೇ ಪ್ರಧಾನಿ ಮೋದಿ ಆಡಳಿತ ನೀಡುತ್ತಿದ್ದಾರೆ. ಮೋದಿ ಆಡಳಿತ ವೈಖರಿ ಹೇಗಿದೆ ಎಂದರೆ ವಿಶ್ವದಲ್ಲಿ ಭಾರತ ಐದನೇ ಆರ್ಥಿಕ ದೇಶವಾಗಿದೆ ಎಂದರು.