- 10 ವರ್ಷದ ಸಾಧನೆ ಹೇಳಿಕೊಳ್ಳದೇ, ಸುಳ್ಳು ಹೇಳುವ ಪ್ರಧಾನಿ: ಸಮಾವೇಶದಲ್ಲಿ ಸಿಎಂ ಆರೋಪ
ಕನ್ನಡಪ್ರಭ ವಾರ್ತೆ, ದಾವಣಗೆರೆ, ಮೇ.4ಪ್ರಧಾನಿ ನರೇಂದ್ರ ಮೋದಿ 10 ವರ್ಷದಲ್ಲಿ ಮಾಡಿದ್ದೇನೆಂಬುದನ್ನು ದೇಶದ ಜನತೆಗೆ ತಿಳಿಸಿ ಮತ ಕೇಳದೇ, ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬರುತ್ತಿದ್ದಾರಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ದಾವಣಗೆರೆ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರ ಪರ ಮತಯಾಚಿಸಿ ಮಾತನಾಡಿದ ಅವರು, ಬಡವರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರಿಗೆ, ಯುವ ಜನರಿಗೆ 10 ವರ್ಷದಲ್ಲಿ ಏನು ಮಾಡಿದ್ದೀರೇಂಬುದನ್ನು ಮೋದಿ ಹೇಳದೇ, ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆದ್ದರೆ ಅದು ನಾನೇ ಗೆದ್ದಂತೆ. ಆದರೆ, ಇಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಸ್ಪರ್ಧಿಸಿದ್ದಾರೆ. ನೀವು ಇಲ್ಲಿ ಒಂದೇ ಒಂದು ಮತವನ್ನು ವಿನಯ್‌ಗೆ ಹಾಕಿದರೂ ಅದು ಬಿಜೆಪಿಗೆ ಮತ ನೀಡಿದಂತೆ. ನೀವೆಲ್ಲರೂ ಡಾ.ಪ್ರಭಾ ಮಲ್ಲಿಕಾರ್ಜುನಗೆ ಮತ ನೀಡಿ, ಆ ಮತ ನನಗೆ ನೀಡಿದಂತೆ. ನಾನೇ ಇಲ್ಲಿ ಕಾಂಗ್ರೆಸ್ ಅಭ್ಯ್ರಥಿಯಾಗಿ ಕಣದಲ್ಲಿದ್ದೇನೆಂದು ಮತ ಹಾಕಿ, ಭಾರಿ ಮತಗಳ ಅಂತರದಿಂದ ಕಾಂಗ್ರೆಸ್ಸನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ತಾವು ಪ್ರಧಾನಿಯಾದರೆ ವಿದೇಶದ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ತಂದು, ದೇಶದ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಣ ಹಾಕುವುದಾಗಿ ನಂಬಿಸಿದ್ದ ಮೋದಿ 10 ವರ್ಷವಾದರೂ ₹15 ಸಹ ಜನರ ಖಾತೆಗೆ ಹಾಕಲಿಲ್ಲ. ವರ್ಷಕ್ಕೆ ₹2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಜನರಿಗೆ ನಂಬಿಸಿದ್ದರು. 10 ವರ್ಷಕ್ಕೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಕೆಲಸ ಕೇಳಿದವರಿಗೆ ಪಕೋಡ ಮಾರಾಟ ಮಾಡಿಯೆನ್ನುವ ಮೂಲಕ ನಂಬಿಕೆ ದ್ರೋಹ ಮಾಡಿದರು. ಇಂತಹ ನಂಬಿಕೆ ದ್ರೋಹಿಗಳಿಗೆ ಮತ ಹಾಕಬೇಡಿ ಎಂದು ಅವರು ತಿಳಿಸಿದರು.
ನುಡಿದಂತೆ ನಡೆದವರು ಮತ್ತು ನಂಬಿಕೆ ದ್ರೋಹಿಗಳ ಮಧ್ಯೆ ಚುನಾವಣೆ ನಡೆಯುತ್ತಿದೆ. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿ. ನುಡಿದಂತೆ ನಡೆದು, 5ಕ್ಕೆ ಐದೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ನಿಮ್ಮ ಮತದ ಘನತೆ ಹೆಚ್ಚಿಸಿದವರಿಗೆ ನಿಮ್ಮ ಮತ ನೀಡಿ. ನಮ್ಮ ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣದಲ್ಲೂ ಜಾರಿಗೊಳಿಸಲಾಗಿದೆ. ರಾಷ್ಟ್ರೀಯ
ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಡಿ.ಜಿ.ಶಾಂತನಗೌಡ, ಎಂ.ಪಿ.ಲತಾ ಮಲ್ಲಿಕಾರ್ಜುನ, ಶಿವಗಂಗಾ ವಿ.ಬಸವರಾಜ, ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಮಾಜಿ ಸಚಿವರಾದ ಎಚ್.ಆಂಜನೇಯ, ಎಚ್.ಎಂ.ರೇವಣ್ಣ, ಪಿ.ಟಿ.ಪರಮೇಶ್ವರ ನಾಯ್ಕ, ಕೆ.ಸಿ.ಕೊಂಡಯ್ಯ, ಎಸ್.ರಾಮಪ್ಪ, ವಕೀಲ ಪ್ರಕಾಶ ಪಾಟೀಲ, ಎಚ್.ಎಸ್.ನಾಗರಾಜ, ಸೈಯದ್ ಸೈಫುಲ್ಲಾ, ಡಿ.ಬಸವರಾಜ, ನಂದಿಗಾವಿ ಶ್ರೀನಿವಾಸ, ಶ್ರೀಕಾಂತ ಬಗರೆ, ಕೆ.ಜಿ.ಶಿವಕುಮಾರ, ಎಸ್.ಮಲ್ಲಿಕಾರ್ಜುನ, ದಿನೇಶ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್ ಇತರರು ಇದ್ದರು.
- - - ಬಾಕ್ಸ್
ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರಗೆ ನನ್ನ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ ಕುಟುಂಬ ಆರಂಭದಿಂದಲೂ ಕಾಂಗ್ರೆಸ್ಸಿನಲ್ಲೇ ಇದೆ. ಡಾ.ಪ್ರಭಾ ಮಲ್ಲಿಕಾರ್ಜುನ ಅತ್ಯಂತ ಉತ್ತಮ ಅಭ್ಯರ್ಥಿಯಾಗಿದ್ದು, ಡಾ.ಪ್ರಭಾರನ್ನು ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು. - - - -4ಕೆಡಿವಿಜಿ10, 11, 12:
ದಾವಣಗೆರೆಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ರಣದೀಪ ಸಿಂಗ್ ಸುರ್ಜೀವಾಲಾ, ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ ಇತರರು ಇದ್ದರು.