ಬ್ಯಾಡಗಿ: ಮುಂದಿನ ಮೂರು ವರ್ಷಗಳಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲೂಕು ತಡಸ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದರು.ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಭಾರತವನ್ನು ಅಭಿವೃದ್ಧಿಶೀಲ ಭಾರತವನ್ನಾಗಿ ರೂಪಿಸಿದ್ದಾರೆ. ಮೋದಿ ಆಡಳಿತದಲ್ಲಿ ವಿಕಸಿತ ಭಾರತವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ೧೩೦ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆತ್ತಲಾಗಿದೆ ಎಂದರು.
ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಕಾಣಬೇಕಾದರೆ ಎಲ್ಲ ಬಡವರಿಗೆ ಸರ್ಕಾರದ ಸೌಲಭ್ಯ ದೊರಕಬೇಕು. ಉಚಿತ ಅಕ್ಕಿ, ಉಚಿತ ಗ್ಯಾಸ್, ಪ್ರತಿ ಮನೆಗೂ ನೆಲ್ಲಿ ನೀರು ಸೇರಿದಂತೆ ಹಲವು ಕೇಂದ್ರ ಸರ್ಕಾರದ ಉಚಿತ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮೋದಿ ಗ್ಯಾರಂಟಿ ಬಂಡಿ (ವಾಹನ) ಹಳ್ಳಿ ಹಳ್ಳಿಗೆ ತೆರಳಿ, ಈಗಾಗಲೇ ಯೋಜನೆ ಲಾಭಪಡೆದುಕೊಂಡವರು ಹಾಗೂ ಈವರೆಗೆ ಯೋಜನೆಯ ಫಲಾನುಭವಿಯಾದವರನ್ನು ಆಹ್ವಾನಿಸಿ ಅರಿವು ಮೂಡಿಸಿ ಅರ್ಹರಿಗೆ ಸೌಲಭ್ಯ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸ್ವಾತಂತ್ರ್ಯ ನಂತರ ೬೭ ವರ್ಷಗಳ ಸುದೀರ್ಘ ಅವಧಿಯಲ್ಲಿ ಮೂರು ಕೋಟಿ ೪೦ ಲಕ್ಷ ಮನೆ ನಿರ್ಮಾಣ ಮಾಡಿದ್ದರೆ, ಕಳೆದ ೧೦ ವರ್ಷಗಳಲ್ಲಿ ಬಡವರಿಗಾಗಿ ೪ ಕೋಟಿಗೂ ಹೆಚ್ಚು ಮನೆ ನಿರ್ಮಾಣ ಮಾಡಲಾಗಿದೆ. ದೇಶಾದ್ಯಂತ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಮೊದಲ ಹಂತದಲ್ಲಿ ₹೯.೫ ಕೋಟಿ ಹಾಗೂ ಎರಡನೇ ಹಂತದಲ್ಲಿ ₹೭೫ ಲಕ್ಷ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯ ಫಲಾನುಭವಿಗಳು ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವಕಾಶ ನೀಡುವುದರ ಜತೆಗೆ ಹೊಸ ಫಲಾನುಭವಿಗಳು ಯೋಜನೆಗಳ ಲಾಭ ಪಡೆದುಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶಾದ್ಯಂತ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಕೃಷಿ ಸನ್ಮಾನ ಯೋಜನೆ ಮೂಲಕ ೧೩ ಕೋಟಿ ರೈತ ಕುಟುಂಬಗಳಿಗೆ ₹೩ ಲಕ್ಷ ಕೋಟಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಿದೆ. ಪ್ರತಿ ಮನೆಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡುವ ಉದ್ದೇಶದಿಂದ ₹೬೪ ಸಾವಿರ ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಯೋಜನೆ ಜಾರಿಗೆ ತರಲಾಗಿದೆ. ಎಲ್ಲರೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.ಅಭಿಯಾನದ ಪ್ರಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಧ್ವನಿಮುದ್ರಿತ ಸಂದೇಶ ಮತ್ತು ಕಿರು ಚಿತ್ರ ಬಿತ್ತರಿಸಲಾಯಿತು.
ಕೇಂದ್ರ ಸರ್ಕಾರ ಕಾರ್ಯಕ್ರಮಗಳ ವಿಡಿಯೋ ತುಣುಕುಗಳನ್ನು ಎಲ್ ಇಡಿ ಪರದೆ ಮೂಲಕ ಪ್ರದರ್ಶನ ಮಾಡುವುರ ಜತೆಗೆ ವಿವಿಧ ಯೋಜನೆಗಳ ಮಾಹಿತಿ ಒಳಗೊಂಡ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು. ಯಾತ್ರೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸಲಾಯಿತು.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣನವರ, ಸಿದ್ದರಾಜ ಕಲಕೋಟಿ, ಬಸವರಾಜ ಕೇಲಗಾರ ಆರ್ಥಿಕ ಸಾಕ್ಷರತಾ ಅಧಿಕಾರಿ ಶಂಕರ್, ನಬಾರ್ಡ ಅಧಿಕಾರಿ ರಂಗನಾಥ್, ಕೆವಿಜಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಭಾಗವತ್, ಗ್ರಾಪಂ ಅಧ್ಯಕ್ಷೆ ರೂಪಾ ಹೊನ್ನಪ್ಪ ಇತರರು ಇದ್ದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ ಸ್ವಾಗತಿಸಿದರು.