ಮಂಡ್ಯ ಮಂಜುನಾಥ
ನಾಥ ಪರಂಪರೆಗೆ ಸೇರಿದ ಜಿಲ್ಲೆಯ ಆದಿ ಚುಂಚನಗಿರಿ ಕ್ಷೇತ್ರಕ್ಕೆ ಏ.೧೫ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಇದರೊಂದಿಗೆ ಶ್ರೀಮಠಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ. ಜೊತೆಗೆ ಅನೇಕ ರಾಷ್ಟ್ರಪತಿಗಳನ್ನು ಆಕರ್ಷಿಸಿದ್ದ ಶ್ರೀಮಠ ಇದೀಗ ಪ್ರಧಾನಮಂತ್ರಿಯನ್ನು ಬರಮಾಡಿಕೊಳ್ಳುವುದರೊಂದಿಗೆ ಕ್ಷೇತ್ರದ ಹಿರಿಮೆಗೆ ಹೊಸ ಗರಿಯನ್ನು ಮೂಡಿಸಿಕೊಂಡಿದೆ.
ಶ್ರೀಮಠಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಎರಡನೇ ಬಾರಿ ಭೇಟಿ ನೀಡುತ್ತಿದ್ದಾರೆ. ೨೦೨೩ರಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಆಗಮಿಸಿ ಎಲ್ಲರ ಗಮನಸೆಳೆದಿದ್ದರು. ಜೊತೆಗೆ ಮಂಡ್ಯ ನಗರದಲ್ಲಿ ರೋಡ್ ಷೋ ನಡೆಸುವ ಮೂಲಕ ಚುನಾವಣೆಗೂ ಮುನ್ನ ಜಿಲ್ಲೆಯೊಳಗೆ ಬಿಜೆಪಿ ಪರ ಅಲೆ ಎಬ್ಬಿಸುವ ಪ್ರಯತ್ನವನ್ನೂ ನಡೆಸಿದ್ದರು.ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರು ತಾವು ಪೀಠಾಧಿಪತಿಗಳಾಗಿದ್ದ ಕಾಲದಲ್ಲಿ ರಾಷ್ಟ್ರಪತಿಗಳನ್ನು ಶ್ರೀಕ್ಷೇತ್ರಕ್ಕೆ ಕರೆತಂದು ಗೌರವ ಸಮರ್ಪಿಸಿದ್ದರು. ಎಚ್.ಡಿ.ದೇವೇಗೌಡರು ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಅವರು ಅತ್ಯಾಪ್ತರಾಗಿದ್ದರೂ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ದೇವೇಗೌಡರು ಶ್ರೀಕ್ಷೇತ್ರಕ್ಕೆ ಆಗಮಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ರಾಷ್ಟ್ರಪತಿಗಳಾಗಿದ್ದ ಶಂಕರ್‌ದಯಾಳ್ ಶರ್ಮಾ, ಅಬ್ದುಲ್ ಕಲಾಂ ಸೇರಿದಂತೆ ಅನೇಕ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಕ್ಷೇತ್ರಕ್ಕೆ ಬಂದುಹೋಗಿದ್ದರು. ಒಮ್ಮೆ ಬೆಂಗಳೂರಿನ ಕುಂಬಳಗೋಡಿನಲ್ಲಿರುವ ಶ್ರೀಆದಿಚುಂಚನಗಿರಿ ಮಠಕ್ಕೆ ಪ್ರಧಾನಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಬಂದು ಹೋಗಿದ್ದರೆಂದು ಶ್ರೀಮಠದ ಮೂಲಗಳು ತಿಳಿಸಿವೆ.
ಆಗಿನಿಂದಲೂ ಮೋದಿ ಅವರೊಂದಿಗಿನ ನಿರ್ಮಲಾನಂದನಾಥಶ್ರೀಗಳ ಒಡನಾಟ, ಬಾಂಧವ್ಯ ಗಟ್ಟಿಗೊಂಡಿತ್ತು. ಶ್ರೀಗಳಲ್ಲಿರುವ ವಿದ್ವತ್ತು, ಭಾಷಾ ಪ್ರೌಢಿಮೆ ಆಕರ್ಷಿಸಿತ್ತು. ನಾಥ ಪರಂಪರೆಗೆ ಸೇರಿದ ಶ್ರೀಮಠದ ಮಹತ್ವ, ಆಚಾರ, ಸಂಸ್ಕೃತಿ, ವಿಸ್ತಾರದ ಬಗ್ಗೆ ಯೋಗಿ ಆದಿತ್ಯನಾಥ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಕೇಳಿ ತಿಳಿದುಕೊಂಡಿದ್ದರು. ಅದೇ ಕಾರಣದಿಂದಲೇ ನರೇಂದ್ರ ಮೋದಿ ಅವರು ಶ್ರೀಮಠಕ್ಕೆ ಭೇಟಿ ನೀಡಲು ಸಮ್ಮತಿ ಸೂಚಿಸಿದ್ದಾರೆ. ಇದಲ್ಲದೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಶ್ರೀಮಠಕ್ಕೆ ಕರೆತರುವ ಪ್ರಯತ್ನವನ್ನು ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ನಡೆಸಿದ್ದರೂ ಅದು ಫಲಪ್ರದವಾಗಲಿಲ್ಲ. ಇದೀಗ ನರೇಂದ್ರ ಮೋದಿ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡು ಶ್ರೀಮಠದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.