ಕನ್ನಡಪ್ರಭ ವಾರ್ತೆ ಮಂಡ್ಯ
ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಬಗ್ಗೆ ದೇಶದ ಜನರಿಗೆ ಸಂಪೂರ್ಣ ವಿಶ್ವಾಸವಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜಾ.ದಳ (ಎನ್‌ಡಿಎ) ಮೈತ್ರಿಕೂಟ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ. ನಾವು ಕರ್ನಾಟಕದ ೨೮ ಸ್ಥಾನಗಳಲ್ಲಿ ಗೆಲ್ಲಲು ಗುರಿ ಹಾಕಿಕೊಂಡಿದ್ದೇವೆ. ಬಿಜೆಪಿಯನ್ನೇ ಜನರು ಬೆಂಬಲಿಸಲಿದ್ದಾರೆ ಎಂದು ಖಚಿತವಾಗಿ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ. ಇದರಿಂದ ಎರಡೂ ಪಕ್ಷಗಳ ಪ್ರಾಬಲ್ಯ ಹೆಚ್ಚಿದೆ. ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಜತೆ ಯಾವ ಪಕ್ಷದವರೂ ಕೂಡ ಸೇರುತ್ತಿಲ್ಲ. ಅವರು ಏಕಾಂಗಿಯಾಗುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಎದುರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಆಯಾಯ ಪರಿಸ್ಥಿತಿ-ಸನ್ನಿವೇಶಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಬಿಜೆಪಿ ಮತ್ತು ಜಾ.ದಳ ಮೈತ್ರಿಯಿಂದ ದೇಶ ಮತ್ತು ರಾಜ್ಯಕ್ಕೆ ಅನುಕೂಲವಾಗಲಿದೆ. ೨೦೨೪ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸಲಿದೆ. ಹರಿಯಾಣದಲ್ಲಿ ೨೮ ಸೀಟುಗಳನ್ನು ಗೆದ್ದಂತೆ ಕರ್ನಾಟಕದಲ್ಲೂ ಕೂಡ ೨೮ಕ್ಕೆ ೨೮ನ್ನೂ ಎನ್‌ಡಿಎ ಮೈತ್ರಿಕೂಟ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಪಿ.ಎಂ. ಕಿಸಾನ್ ಯೋಜನೆಯಡಿ ೫೮.೧೨ ಲಕ್ಷ ರೈತರಿಗೆ ೧೩,೨೫೬ ಕೋಟಿ ರು. ತಲುಪುತ್ತಿದೆ. ಜನೌಷಧಿ ಯೋಜನೆಯಡಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳು, ೫ ಲಕ್ಷದವರೆಗೆ ಪ್ರತಿ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ, ೧.೫೧ ಕೋಟಿಗೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡುಗಳು, ಅಪಘಾತ ವಿಮೆ ಯೋಜನೆಗೆ ೧.೮೦ ಕೋಟಿ ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ ೩೪ ಲಕ್ಷ ಜನ ಎ.ಸಿ.ವೈ.ಗೆ ಚಂದಾದಾರರಾಗಿದ್ದಾರೆ. ಪ್ರಧಾನಮಂತ್ರಿ ಸ್ವನಿ ಯೋಜನೆಯಡಿ ೨.೬೨ ಲಕ್ಷ ಫಲಾನುಭವಿಗಳಿಗೆ ಬಂಡವಾಳ ಸಾಲವಾಗಿ ೪೯೦.೬೩ ರು. ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ದೇಶದ ಉದ್ದಗಲಕ್ಕೂ ನದಿಯಂತೆ ಹರಿದು ಬಡವರ ಹಾಗೂ ಕೃಷಿ ಕಾರ್ಮಿಕರ, ಮಹಿಳೆಯರ, ಯುವಕರ ಬದುಕಲ್ಲಿ ಬೆಳಕು ಕಂಡಿರುವುದಾಗಿ ಹೇಳಿದರು.