- ಹರಪನಹಳ್ಳಿ ತಾಲೂಕಿನ ಗ್ರಾಮಗಳಲ್ಲಿ ಮತಯಾಚನೆ । ಕರುಣಾಕರ ರೆಡ್ಡಿ ಸಾಥ್
ದೇಶದ ಭವಿಷ್ಯವಾದ ಯುವಜನರಿಗೆ ಪ್ರಧಾನಿ ನರೇಂದ್ರ ಮೋದಿಯೇ ಒಂದು ನಿಜವಾದ ಗ್ಯಾರಂಟಿಯಾಗಿದ್ದು, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಮುದ್ರಾ ಹೀಗೆ ನಾನಾ ಯೋಜನೆ ಮೂಲಕ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಜೊತೆಗೆ ಹೊಸ ಉದ್ಯಮ, ಕೋಟ್ಯಂತರ ಉದ್ಯೋಗ ಸೃಷ್ಟಿಗೂ ಕಾರಣರಾಗಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ಹರಪನಹಳ್ಳಿ ತಾಲೂಕಿನ ಬಾಗಳಿ, ಮೈದೂರು, ಚಿಗಟೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಜೊತೆಗೆ ಸೋಮವಾರ ಮತಯಾಚಿಸಿ ಮಾತನಾಡಿದ ಅವರು, ದೇಶದ ಜನತೆ, ಯುವಜನರಿಗೆ ನರೇಂದ್ರ ಮೋದಿಯೇ ನಿಜವಾದ ಗ್ಯಾರಂಟಿಯಾಗಿದ್ದಾರೆ. ದೇಶದ ಭವಿಷ್ಯವಾದ ಯುವಶಕ್ತಿಯ ಮೇಲೆ ಮೋದಿ ಸಾಕಷ್ಟು ಭರವಸೆ ಹೊಂದಿದ್ದಾರೆ ಎಂದರು.ಯುವನಿಧಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಯುವಜನರಿಗೆ ಯಾಮಾರಿಸಿದೆ. ಈವರೆಗೆ ಎಷ್ಟು ಯುವಕರಿಗೆ ಯುವನಿಧಿ ಹಣ ಬಂದಿದೆ? ಕಾಂಗ್ರೆಸ್ಸಿನ ಗ್ಯಾರಂಟಿಗಳಿಗೇ ಮರುಳಾದರೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಭವಿಷ್ಯ ಇರುವುದಿಲ್ಲ. ದೇಶದ ರಕ್ಷಣೆ, ನಿಮ್ಮ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ನೀವೆಲ್ಲರೂ ನನ್ನ ಕ್ರಮ ಸಂಖ್ಯೆ-1, ಹೆಸರು ಗಾಯತ್ರಿ ಸಿದ್ದೇಶ್ವರ, ಚಿಹ್ನೆ-ಕಮಲದ ಹೂವಿಗೆ ಮತ ನೀಡಿ ಗೆಲ್ಲಿಸಿದರೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ನಾನು, ಸಂಸದ ಸಿದ್ದೇಶಣ್ಣ ಹರಪನಹಳ್ಳಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇವೆ. ನಿಮ್ಮ ಗ್ರಾಮಗಳಿಗೆ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಿದ್ದೇವೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆ ಕೊಟ್ಟಿದ್ದು ನಾವೇ. ಈ ಬಾರಿ ಗಾಯತ್ರಿ ಸಿದ್ದೇಶ್ವರ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ದೆಹಲಿಗೆ ಹೋದರೆ, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ. ನಮ್ಮ ಪ್ರತಿ ಕಾರ್ಯಕರ್ತರು ತಮ್ಮನ್ನೇ ಅಭ್ಯರ್ಥಿ ಎಂದುಕೊಂಡು ಮನೆ ಮನೆಗೂ ಹೋಗಿ ಗಾಯತ್ರಿ ಸಿದ್ದೇಶ್ವರ್ ಅವರ ಪರ ಮತಯಾಚಿಸಬೇಕು ಎಂದು ತಿಳಿಸಿದರು.
ಮೈದೂರು ಗ್ರಾಮದಲ್ಲಿ ಮುಖಂಡರಾದ ಅರವಿಂದ ಗೌಡ, ಲೋಹಿತ, ಸುರೇಶ, ಮಂಜುನಾಥ ಬೆಂಬಲಿಗರು, ಬೆಣ್ಣೆಹಳ್ಳಿಯಲ್ಲಿ ರೇವಣ್ಣ ಸಿದ್ದಪ್ಪ ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ನರೇಂದ್ರ ಮೋದಿ ಆಡಳಿತ, ಸಿದ್ದೇಶಣ್ಣನ ಅಭಿವೃದ್ಧಿ ಕೆಲಸ ನೋಡಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ ಎಂದರು.
- - - ಕೋಟ್ ಲೋಕಸಭೆ ಚುನಾವಣೆಯ ಮತದಾನಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ. ಮೋದಿಜೀ ಪ್ರಧಾನಿ ಆಗಬೇಕೆಂದು ದೇಶದ ಜನ ತೀರ್ಮಾನ ಮಾಡಿದ್ದಾರೆ. ಗಾಯತ್ರಿ ಅಕ್ಕನವರು ದಾವಣಗೆರೆ ಪ್ರಥಮ ಮಹಿಳಾ ಸಂಸದೆ ಆಗಬೇಕು. ಇದು ಈ ಕ್ಷೇತ್ರದ ಜನರ ತೀರ್ಮಾನವೂ ಆಗಿದೆ. ನಮ್ಮೆಲ್ಲಾ ಕಾರ್ಯಕರ್ತರು ವಾನರ ಸೇನೆಯಂತೆ ಗಾಯತ್ರಿ ಸಿದ್ದೇಶ್ವರ ಅವರನ್ನು ಭಾರಿ ಮತಗಳ ಅಂತರದಲ್ಲಿ ಗೆಲ್ಲಿಸಿ, ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸಬೇಕು
- - -
- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರಪನಹಳ್ಳಿ ತಾಲೂಕಿನಲ್ಲಿ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ, ಕಮಲಾ ನಿರಾಣಿ ನೇತೃತ್ವದಲ್ಲಿ ಮತಯಾಚಿಸಿದರು.