ಅಭಿವೃದ್ಧಿಯಲ್ಲಿ ಮೋದಿ ದೊಡ್ಡ ವಿಷನ್ ಇಟ್ಟುಕೊಂಡಿದ್ದಾರೆ. ೨೦೧೬ರಲ್ಲಿ ಭಾರತದಲ್ಲಿ ೪೦೦ ಸ್ಟಾರ್ಟಪ್ ಕಂಪನಿಗಳಿದ್ದವು. ಕೇವಲ ಹತ್ತು ವರ್ಷದಲ್ಲಿ ಸ್ಟಾರ್ಟಪ್‌ಗಳ ಸಂಖ್ಯೆ 2 ಲಕ್ಷ ದಾಟಿದೆ. ಇದು ದೇಶದ ಆರ್ಥಿಕ ಪ್ರಗತಿಯ ಸಂಕೇತ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮೋದಿ ಅವರು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ .
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತ ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೊಡುಗೆ ಬಹು ದೊಡ್ಡದಿದೆ. ಸಿದ್ಧಾಂತಗಳನ್ನು ಇಟ್ಟುಕೊಂಡು ಮೋದಿ ದೇಶವನ್ನು ಕಟ್ಟುತ್ತಿದ್ದಾರೆ. ಭಾರತದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೊಗಳಿದರು.ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿ ನಡೆದ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ೨೦೨೨ರಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಮೋದಿ ಅವರು ಬಂದಿದ್ದರು. ಆ ಸಮಯದಲ್ಲಿ ಅವರು ಕೆಂಪೇಗೌಡರ ಆಲೋಚನೆಗಳನ್ನು ಸರ್ಕಾರಗಳು ಆಡಳಿತದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು ಎಂದು ನುಡಿದರು.ಅಭಿವೃದ್ಧಿಯಲ್ಲಿ ಮೋದಿ ದೊಡ್ಡ ವಿಷನ್ ಇಟ್ಟುಕೊಂಡಿದ್ದಾರೆ. ೨೦೧೬ರಲ್ಲಿ ಭಾರತದಲ್ಲಿ ೪೦೦ ಸ್ಟಾರ್ಟಪ್ ಕಂಪನಿಗಳಿದ್ದವು. ಕೇವಲ ಹತ್ತು ವರ್ಷದಲ್ಲಿ ಸ್ಟಾರ್ಟಪ್‌ಗಳ ಸಂಖ್ಯೆ 2 ಲಕ್ಷ ದಾಟಿದೆ. ಇದು ದೇಶದ ಆರ್ಥಿಕ ಪ್ರಗತಿಯ ಸಂಕೇತ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮೋದಿ ಅವರು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಿದರು. ಚುಂಚನಗಿರಿ ಮಠ 1800 ವರ್ಷಗಳ ಇತಿಹಾಸವನ್ನು ಹೊಂದಿದೆ. ಶ್ರೀ ಮಠದ ೭೧ ನೇ ಪೀಠಾಧಿಪತಿಗಳಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಇದ್ದರು. ಚುಂಚನಗಿರಿ ಮಠ ಆಧ್ಯಾತ್ಮಕ ಶಕ್ತಿಗೆ ಹೆಸರುವಾಸಿಯಾಗಿದೆ. ಕೋಟ್ಯಾಂತರ ಭಕ್ತರ ಆಸೆಯ ಪ್ರತೀಕವಾಗಿ ಶ್ರೀ ಗುರು ಭೈರವೈಕ್ಯ ಮಂದಿರ ನಿರ್ಮಾಣವಾಗಿದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ. ತ್ರಿವಳಿ ದಾಸೋಹದ ಮೂಲಕ ಅವರ ಹೆಸರು ಅಜರಾಮರವಾಗಿದೆ. ಅವರು ದೇಹವನ್ನು ಬಿಟ್ಟಿದ್ದರೂ ಸದಾ ನಮ್ಮೊಟ್ಟಿಗೆ ಇದ್ದಾರೆ. ಇಂತಹ ಗುರುಗಳ ಮಂದಿರವನ್ನು ಮೋದಿ ಅವರು ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದರು. ಬಾಲಗಂಗಾಧರನಾಥ ಶ್ರೀಗಳ ಚಿಂತನೆಗಳು ಇಂದಿಗೂ ಜನರಲ್ಲಿ ಶಾಶ್ವತವಾಗಿ ನೆಲೆಯೂರಿವೆ. ಅವರ ಮಾರ್ಗದರ್ಶನದಲ್ಲಿ ನಾವೂ ಮುನ್ನಡೆಯುತ್ತಿದ್ದೇವೆ. ಶ್ರೀಗಳು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆಂಬುದಕ್ಕೆ ಚುಂಚನಗಿರಿಗೆ ಬಂದಿರುವ ಭಕ್ತಜನರೇ ಸಾಕ್ಷಿಯಾಗಿದ್ದಾರೆ. ಎಂದು ನುಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.