ಮೋದಿ 11 ವರ್ಷ ಆಡಳಿತದಲ್ಲಿ ಎಲ್ಲ ಕ್ಷೇತ್ರದಲ್ಲೂ ಸಾಧನೆ

KannadaprabhaNewsNetwork |  
Published : Jun 13, 2025, 02:33 AM IST
12ಸಿಎಚ್‌ಎನ್‌55ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಿಕಸಿತ ಭಾರತ ಅಮೃತ ಕಾಲ ಸೇವೆ, ಸುಶಾಸನ,ಬಡವರ ಕಲ್ಯಾಣದ 11ವರ್ಷಗಳ ಸಾಧನೆಯ ಜಿಲ್ಲಾ ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಅವರು ಮಾತನಾಡಿದರು.  | Kannada Prabha

ಸಾರಾಂಶ

ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಕಸಿತ ಭಾರತ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ 11ವರ್ಷಗಳ ಸಾಧನೆಯ ಜಿಲ್ಲಾ ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಡಳಿತಕ್ಕೆ ಬಂದ 11 ವರ್ಷದಲ್ಲೇ 2 ಟ್ರಿಲಿಯನ್‌ನಿಂದ 4 ಟ್ರಿಲಿಯನ್ ಆರ್ಥಿಕತೆಗೆ ಜಿಗಿದಿದ್ದು, ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮಿದ್ದು, ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಿಕಸಿತ ಭಾರತ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ 11ವರ್ಷಗಳ ಸಾಧನೆಯ ಜಿಲ್ಲಾ ಕಾರ್ಯಾಗಾರದಲ್ಲಿ ಮಾತನಾಡಿದರು. ಮೋದಿ ನೇತೃತ್ವದಲ್ಲಿ 2014ರಿಂದ ದೇಶದಲ್ಲಿ ಸಮರ್ಥ ಸರ್ಕಾರ, ಆಡಳಿತದಿಂದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯಾಗಿದೆ. ಭಾರತವು ಇಂಗ್ಲೆಂಡ್ ಹಿಂದಿಕ್ಕಿ 5ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಅಮೇರಿಕಾ, ಚೀನಾ ನಂತರ 3ನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಪರೇಷನ್ ಸಿಂದೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ನಡವಳಿಕೆಗೆ, ಉಗ್ರರ 9 ಸ್ಥಳಗಳನ್ನು ಗುರುತಿಸಿ ಅದೇ ಜಾಗಕ್ಕೆ ಕ್ಷಿಪಣಿ ದಾಳಿ ನಡೆಸಿ ಉತ್ತರ ನೀಡಲು ಸಾಧ್ಯವಾಗಿದೆ. ಹಿಂದೆ ರಕ್ಷಣಾ ಕ್ಷೇತ್ರದ ಎಲ್ಲ ಉತ್ಪನ್ನ ಆಮದಾಗುತ್ತಿತ್ತು. ಈಗ ನಾವೇ 5000 ಉತ್ಪನ್ನಗಳನ್ನು ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾದಡಿ ಉತ್ಪಾದಿಸುತ್ತಿದ್ದೇವೆ. 25,000 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಮತ್ತಿತರ ಉತ್ಪನ್ನಗಳನ್ನು ರಫ್ತು ಮಾಡಿರುವುದು ದೇಶದಲ್ಲಿ ಇದೇ ಮೊದಲು ಎಂದರು. 2047ರ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸಲಿದೆ. ಆ ನಿಟ್ಟಿನಲ್ಲಿ ಅಲ್ಲಿಯ ತನಕ ವಿಕಸಿತ ಭಾರತ ನಿರ್ಮಾಣ ಮಾಡುವುದು ಮೋದಿ ಅವರ ಗುರಿಯಾಗಿದೆ. ಆ ಮೂಲಕ ಭಾರತವು ವಿಶ್ವ ಗುರುವಾಗುವ ಕಲ್ಪನೆ ಇದೆ ಎಂದರು. ನರೇಂದ್ರಮೋದಿ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ನಿರ್ಣಾಯಕ ಹೆಜ್ಜೆ ಇಟ್ಟ ಮೊದಲ ಪ್ರಧಾನ ಮ೦ತ್ರಿಯಾಗಿದ್ದಾರೆ. 2014ರ ನಂತರ ನರೇಂದ್ರಮೋದಿ ಅವರು ಪ್ರಧಾನಿಯಾದ ಬಳಿಕ ಅನೇಕ ಅಭಿವೃದ್ಧಿಗಳಾಗಿವೆ ಎಂದು ತಿಳಿಸಿದರು. ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯಗಳು ಸಿಗಬೇಕು ಎಂಬ ನಿಟ್ಟಿನಲ್ಲಿ ನರೇಂದ್ರಮೋದಿ ಪ್ರಧಾನಿಯಾದ ಬಳಿಕ ಜನ್‌ಧನ್ ಖಾತೆಯನ್ನು ತೆರೆದು ನೇರವಾಗಿ ಫಲಾನುಭವಿಗೆ ಸೌಲಭ್ಯ ತಲುಪುವಂತೆ ಮಾಡಿದ್ದಾರೆ ಎಂದರು. 2020ರಿಂದ 81.35 ಕೋಟಿ ಜನರಿಗೆ ಉಚಿತ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಜನೌಷಧಿ ಕೇಂದ್ರ, ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ, ಕೋವಿಡ್ ಸಂದರ್ಭದಲ್ಲಿ ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡಲಾಯಿತು.

15 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಜಲ ಜೀವನ್ ಮಿಷನ್ ಯೋಜನೆಯಡಿ ಎಲ್ಲರಿಗೂ ಕುಡಿಯುವ ನೀರು, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣ, ಪಿಎಂ ಕಿಸಾನ್ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿಜರಂಜನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನವನ್ನು ಬುಡಮೇಲು ಮಾಡುವ ಮೂಲಕ ತುರ್ತುಪರಿಸ್ಥಿತಿ ಹೇರಿದರು. ತುರ್ತು ಪರಿಸ್ಥಿತಿ ಕರಾಳ ಅಧ್ಯಯದ ಕುರಿತು ಪ್ರದರ್ಶನ ಆಯೋಜಿಸಿ ಜನರಲ್ಲಿ ಅರಿವು ಮೂಡಿಸಬೇಕು ಎಂದರು. ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನ ಆಚರಿಸಬೇಕು. ಜೂ.5 ರಿಂದ ಆ.15 ರವರಗೆ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಸಸಿನೆಡುವ ಅಭಿಯಾನ ನಡೆಸಲಾಗುತ್ತಿದೆ. ಪ್ರತಿಯೊಬ್ಬ ಕಾರ್ಯಕರ್ತರು ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡಬೇಕು. ಅಂತಾರಾಷ್ಟ್ರೀಯ ಯೋಗ. ದಿನಾಚರಣೆ ಆಚರಣೆ ಮಾಡಬೇಕು ಎಂದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿದರು. ಕಾರ್ಯಾಗಾರದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮಾಜಿ ಅಧ್ಯಕ್ಷ ಆರ್.ಸುಂದರ್, ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಮುಖಂಡ ಅರಕಲವಾಡಿ ನಾಗೇಂದ್ರ, ಪ್ರಣಯ್, ಮಂಡಲ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ