ನನ್ನ ಸಾಧನೆಗಿಂತ ಮೋದಿ ಸಾಧನೆ ದೊಡ್ಡದು: ಮಾಜಿ ಪ್ರಧಾನಿ ದೇವೇಗೌಡ

KannadaprabhaNewsNetwork | Updated : Jan 29 2024, 01:31 AM IST

ಸಾರಾಂಶ

ಇಡೀ ವಿಶ್ವದಲ್ಲಿ ಇಷ್ಟೊಂದು ಜನ ಸಂಖ್ಯೆಯನ್ನು ನಿಯಂತ್ರಣದಲ್ಲಿ ಒಗ್ಗೂಡಿಸುವರಿದ್ದರೆ ಅದು ಮೋದಿಯವರಿಗೆ ಮಾತ್ರ ಸಲ್ಲುತ್ತದೆ. ನಾನು ಹತ್ತೂವರೆ ತಿಂಗಳು ದೇಶದಲ್ಲಿ ಆಡಳಿತ ನಡೆಸಿದ್ದು ಬಿಟ್ಟರೆ, ಮೋದಿಯವರಂತೆ ಸಾಧನೆಗಳ ಮಾಡಲಾಗಿಲ್ಲ. ಆ ರಾಮನು ನನಗೆ ಆಯಸ್ಸು ಆರೋಗ್ಯ ನೀಡಿದರೆ ಮತ್ತೆ ಮುಂದಿನ ವರ್ಷ ನಾನು ಶ್ರೀರಾಮ ಮಂದಿರ ನೋಡಲು ಹೋಗುವ ಆಸೆ ಇದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣದೇಶದ 150 ಕೋಟಿ ಜನರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ನಾಯಕರಾಗಿ ಪ್ರಧಾನ ಮೋದಿ ಸಮರ್ಥವಾಗಿ ಬೆಳೆದಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಶ್ರೀರಂಗಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಭಾನುವಾರ ಶ್ರೀಮರಿದೇವರು ಶಿವಯೋಗಿ ಮಹಾಸ್ವಾಮಿಗಳ 130ನೇ ಜಯಂತಿ ಹಾಗೂ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ 25ನೇ ಪಟ್ಟಾಧಿಕಾರ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಡಿಎಂಎಸ್ ಅರ್ಯುವೇದ ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡಿದರು.

ದೇಶದ ಶ್ರೀರಾಮಭಕ್ತರಿಗೊಸ್ಕರ ನಿರ್ಮಿಸಿದ ಶ್ರೀರಾಮಮಂದಿರ ಉದ್ಘಾಟನೆಗೊಂಡು ನೂರಾರು ವರ್ಷಗಳ ಕನಸು ನನಸು ಮಾಡಿದ್ದು ಪ್ರಧಾನಿ ಮೋದಿ. ನಾನು ಕೂಡ ಶ್ರೀರಾಮ ಮಂದಿರಕ್ಕೆ ಹೋಗಿ ಬಂದಿದ್ದೇನೆ. ಆ ರಾಮನು ನನಗೆ ಆಯಸ್ಸು ಆರೋಗ್ಯ ನೀಡಿದರೆ ಮತ್ತೆ ಮುಂದಿನ ವರ್ಷ ನಾನು ಶ್ರೀರಾಮ ಮಂದಿರ ನೋಡಲು ಹೋಗುವ ಆಸೆ ಇದೆ ಎಂದರು.

ಇಡೀ ವಿಶ್ವದಲ್ಲಿ ಇಷ್ಟೊಂದು ಜನ ಸಂಖ್ಯೆಯನ್ನು ನಿಯಂತ್ರಣದಲ್ಲಿ ಒಗ್ಗೂಡಿಸುವರಿದ್ದರೆ ಅದು ಮೋದಿಯವರಿಗೆ ಮಾತ್ರ ಸಲ್ಲುತ್ತದೆ. ನನ್ನ ಸಾಧನೆಗಿಂತ ಮೋದಿಯವರ ಸಾಧನೆ ದೊಡ್ಡದು. ನಾನು ಹತ್ತುವರೆ ತಿಂಗಳು ದೇಶದಲ್ಲಿ ಆಡಳಿತ ನಡೆಸಿದ್ದು ಬಿಟ್ಟರೆ, ಮೋದಿಯವರಂತೆ ಸಾಧನೆಗಳ ಮಾಡಲಾಗಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಚಲದಂಕ ಮಲ್ಲ ಇದ್ದಂತೆ. ಹಿಡಿದ ಕೆಲಸ ಸಾಧಿಸುವವರೆಗೂ ಬಿಡುವುದಿಲ್ಲ. ಹುಟ್ಟು ಹೋರಾಟಗಾರನಾಗಿ ರಾಜ್ಯದ ಆಡಳಿತದ ಚಿಕ್ಕಾಣಿ ಹಿಡಿದು ಹಲವು ಜನಪರ ಕೆಲಸ ಮಾಡಿ ಯಶಸ್ಸಿನ ಹಾದಿಯಲ್ಲಿದ್ದಾರೆ. ದೇಶದಲ್ಲಿನ ಮಠಗಳು ಧಾರ್ಮಿಕವಾಗಿ ತಮ್ಮ ತಮ್ಮ ಸೇವೆಯಲ್ಲಿ ತೊಡಗಿದ್ದಾರೆ. ಮಠ ಮಾನ್ಯಗಳಿಂದ ಜನರ ಸೇವೆಗಳು ಕೂಡ ನಡೆಯುತ್ತಿದೆ ಎಂದರು.

ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದರು.

ಮೈಸೂರಿನ ಜಗದ್ಗುರು ಶ್ರೀವೀರಸಿಂಹ ಹಾಸನ ಮಹಾ ಸಂಸ್ಥಾನದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲನಂದನಾಥ ಸ್ವಾಮಿಗಳು ಕಾರ್ಯಕ್ರಮ ಕುರಿತು ಮಾತನಾಡಿದರು.

ಇದೇ ವೇಳೆ ತ್ರಿನೇತ್ರ ಸ್ವಾಮಿಗಳ ಜಲ ಯೋಗ ಪುಸ್ತಕ ಹಾಗೂ ಶತಾಯಿಷಿ ಮರಿದೇವರ ಶಿವಯೋಗಿಯ ಚರಿತ್ರೆ ಕೃತಿಗಳ ಬಿಡುಗಡೆಗೊಳಿಸಲಾಯಿತು. ಮಾಜಿ ಪ್ರಧಾನಿ ಎಚ್‌ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಚಂದ್ರವನದ ಪೀಠಾದ್ಯಕ್ಷ ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ತುಮಕೂರಿನ ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಸ್. ಪುಟ್ಟರಾಜು, ಬಿಜೆಪಿ ಮುಖಂಡ ಇಂಡವಾಳು ಸಚಿದಾನಂದ, ಶಾಸಕ ಎಚ್ .ಟಿ.ಮಂಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಸ್ವಾಗತ ಸಮಿತಿ ರುದ್ರೇಶ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

Share this article