ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ನಗರದ ಸೀನಪ್ಪಶೆಟ್ಟಿ ವೃತ್ತದಲ್ಲಿ ಬಿಜೆಪಿ ಶಿವಮೊಗ್ಗ ನಗರ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರದರ್ಶಿನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೇವಾಪಾಕ್ಷಿಕದ ಅಂಗವಾಗಿ ಕಾರ್ಯಕರ್ತರು ಸಮಾಜಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸಲಹೆ ಮೇರೆಗೆ ಪ್ರದರ್ಶಿನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು
ಸಮಾಜಕ್ಕಾಗಿ ಹೆಚ್ಚಿನ ಸಮಯ, ಸ್ವಂತಕ್ಕಾಗಿ ಸ್ವಲ್ಪ ಸಮಯ ಕೊಟ್ಟು ಮನೆಬಿಟ್ಟು ಈ ಕಾರ್ಯಗಳಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರನ್ನು ಅಭಿನಂದಿಸಿದ ಅವರು, ಈ ಸೇವಾ ಸಂದರ್ಭದಲ್ಲಿ ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಎಲ್ಲಾ ಬೂತ್‌ಗಳ ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರ ಪರಿಸರ ಜಾಗೃತಿ ಕಾರ್ಯಕ್ರಮ ಈ ರೀತಿ ನಿರಂತರವಾಗಿ ಪಕ್ಷದ ಕಾರ್ಯಕರ್ತರು ಸಮಾಜ ಸೇವಾ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳನ್ನು ನೀಡಿ ಇನ್ನೊಂದು ಕಡೆಯಿಂದ ಅಗತ್ಯ ವಸ್ತುಗಳ ಮತ್ತು ಅಗತ್ಯ ಸೇವೆಗಳ ದರಗಳನ್ನು ಏರಿಸುತ್ತಾ ಬಡವರಿಗೆ ಅನ್ಯಾಯ ಮಾಡುವ ಕೆಲಸ ಮಾಡಿದೆ. ಆದರೆ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ‘ಸಬ್ ಸಾತ್ ಸಬ್ ಕಾ ವಿಕಾಸ್’ ಮಾಡುತ್ತಾ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ, ಸ್ವಾವಲಂಬಿ ಭಾರತವಾಗಿ ವಿಶ್ವದ ಗಮನ ಸೆಳೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ನಗರಾಧ್ಯಕ್ಷ ಮೋಹನ್‌ರೆಡ್ಡಿ ಪ್ರಮುಖರಾದ ಮಾಲ್ತೇಶ್, ಮಂಜುನಾಥ್, ದೀನ್‌ದಯಾಳ್, ಪ್ರದೀಪ್ ಮತ್ತಿತರರಿದ್ದರು.