ಆರ್ಥಿಕತೆ ಕುಸಿಯದಂತೆ ಮೋದಿ ದಿಟ್ಟ ನಿರ್ಧಾರ: ಸಂಸದ ಯದುವೀರ್

KannadaprabhaNewsNetwork |  
Published : Jun 13, 2025, 05:16 AM IST
೧೨ಕೆಎಂಎನ್‌ಡಿ-೨ಮಂಡ್ಯ ಬಿಜೆಪಿ ಕಚೇರಿ ವಿಕಾಸ ಭವನದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ಕರಿಮೆಣಸು ಬೆಳೆಯನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದ್ದು ಇದರಿಂದ ಮೈಸೂರು, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ತಂಬಾಕು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೆಚ್ಚು ದರ ಸಿಗುವಂತೆ ಮಾಡಲಾಗಿದೆ. ಇವೆಲ್ಲವೂ ಕೇವಲ ಮೈಸೂರು-ಕೊಡಗು ಜಿಲ್ಲೆಗಳಿಗಷ್ಟೇ ಸೀಮಿತವಾಗದೆ ಇಡೀ ರಾಜ್ಯಾದ್ಯಂತ ಎಲ್ಲ ಬೆಳೆಗಾರರಿಗೂ ಅನ್ವಯವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು ೧೧ ವರ್ಷ ಪೂರೈಸಿದ್ದು, ಕೋಟ್ಯಂತರ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ, ಹಣದುಬ್ಬರ ನಿಯಂತ್ರಣ ಹಾಗೂ ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆಯನ್ನು ತಂದು ಪ್ರಮುಖ ಕ್ಷೇತ್ರಗಳಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ವಿಶೇಷವಾಗಿ ಜಾಗತಿಕ, ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕತೆ ಕುಸಿಯದಂತೆ ತಡೆಯುವಲ್ಲಿ ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಶ್ಲಾಘಿಸಿದರು.

೨೦೧೪ರಲ್ಲಿ ಭಾರತ ಅಸಮತೋಲಿತ ಆರ್ಥಿಕತೆ ಹೊಂದಿತ್ತು. ಈಗ ೫ ಪ್ರಬಲ ಆರ್ಥಿಕತೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೇಶದ ಜಿಡಿಪಿ ನಾಲ್ಕನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ನೀತಿ ನಿಯಮಗಳಿಂದಾಗಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಮೈಸೂರು-ಕೊಡಗು ಜಿಲ್ಲೆಗಳಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖವಾಗಿ ಮೈಸೂರಿನ ಕೆಂಪೇಗೌಡ ವೃತ್ತದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಫ್ಲೈಓವರ್ ರಸ್ತೆಯ ಯೋಜನೆ ರೂಪಿಸಲಾಗಿದೆ. ೧೨ ಹೊಸ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಇದರಿಂದ ರಸ್ತೆಗಳನ್ನೇ ಕಾಣದ ಹಾಡಿಗಳಿಗೆ ಅನುಕೂಲವಾಗಲಿದೆ. ಕರಿಮೆಣಸು ಬೆಳೆಯನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದ್ದು ಇದರಿಂದ ಮೈಸೂರು, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ತಂಬಾಕು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೆಚ್ಚು ದರ ಸಿಗುವಂತೆ ಮಾಡಲಾಗಿದೆ. ಇವೆಲ್ಲವೂ ಕೇವಲ ಮೈಸೂರು-ಕೊಡಗು ಜಿಲ್ಲೆಗಳಿಗಷ್ಟೇ ಸೀಮಿತವಾಗದೆ ಇಡೀ ರಾಜ್ಯಾದ್ಯಂತ ಎಲ್ಲ ಬೆಳೆಗಾರರಿಗೂ ಅನ್ವಯವಾಗಲಿದೆ ಎಂದರು.

ನಾಲ್ವಡಿಯವರ ಜಯಂತಿ ಸಂದರ್ಭದಲ್ಲಿ ಮೈಸೂರಿನಲ್ಲಿ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಗಿದೆ. ೫೦ ಸ್ಥಳಗಳಲ್ಲಿ ಅನ್ನಸಂತರ್ಪಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಕೊಡಗು ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರುವಂತೆ ಒತ್ತಾಯಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ನಿಲುವು ಪ್ರದರ್ಶಿಸಬೇಕಾಗಿದೆ. ಮಂಡ್ಯ ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಟ್ಟಿಗೆ ಚರ್ಚೆ ನಡೆಸಿ ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವಂತೆ ಮನವಿ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಸಚ್ಚಿದಾನಂದ, ಅಶೋಕ್ ಜಯರಾಂ, ಆನಂದ್, ಎಚ್.ಆರ್.ಅಶೋಕ್, ಡಾ.ಸದಾನಂದ ಇತರರು ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ