ಕರ್ನಾಟಕ ಪ್ರವಾಸೋದ್ಯಮಕ್ಕೆ ಮೋದಿ ಕೊಡುಗೆ ಶೂನ್ಯ

KannadaprabhaNewsNetwork | Published : Apr 16, 2024 1:03 AM

ಸಾರಾಂಶ

ಚುನಾವಣಾ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಇರಬೇಕು. ಅದರಲ್ಲೂ ದೊಡ್ಡ ನಾಯಕರು ನೀಡುವ ಹೇಳಿಕೆ ಕೀಳಮಟ್ಟದ್ದಾಗಿದ್ದರೆ ಶೋಭೆ ತರುವುದಿಲ್ಲ

ಗದಗ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯವಾಗಿದೆ. ಅದರಲ್ಲಿಯೂ ಕರ್ನಾಟಕದ ಪ್ರವಾಸೋದ್ಯಮಕ್ಕೆ ಸಾಕಷ್ಟು ಅನ್ಯಾಯ ಮಾಡಿದ್ದು, ಈಗ ಮೈಸೂರಿಗೆ ಬಂದು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಇರಬೇಕು. ಅದರಲ್ಲೂ ದೊಡ್ಡ ನಾಯಕರು ನೀಡುವ ಹೇಳಿಕೆ ಕೀಳಮಟ್ಟದ್ದಾಗಿದ್ದರೆ ಶೋಭೆ ತರುವುದಿಲ್ಲ. ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತುಗಳು ಅವರಿಗೆ ಶೋಭೆ ತರುವಂಥದ್ದಲ್ಲ. ಮೈಸೂರು, ಹಂಪಿ ಹಾಗೂ ಬಾದಾಮಿ ಕ್ಷೇತ್ರಗಳನ್ನು ಜಾಗತಿಕವಾಗಿ ಮಿನುಗುವಂತೆ ಮಾಡುತ್ತೇವೆ ಎಂದು ಹೇಳಿರುವುದು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಅವರಿಗೆ ಮಾಹಿತಿ ಇಲ್ಲ ಎಂಬುದಕ್ಕೆ ಸಾಕ್ಷಿ. ಈಗಾಗಲೇ ರಾಜ್ಯದ ಹಲವು ಪ್ರವಾಸಿ ತಾಣಗಳನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆ ಆಗಿವೆ ಎಂಬುದು ಅವರಿಗೆ ತಿಳಿದಿಲ್ಲವೇ? ಎಂದರು. ಕಳೆದ 10 ವರ್ಷಗಳಲ್ಲಿ ಪ್ರವಾಸಿ ತಾಣಗಳಿಗೆ ಕೇಂದ್ರ ಸರ್ಕಾರ ಕೇವಲ ₹225 ಕೋಟಿ ಬಿಡುಗಡೆ ಮಾಡಿದೆ, ಆದರೆ, ಈ ಯೋಜನೆಗಳೆಲ್ಲ ಹಳೆಯವು. ಹೊಸ ಯೋಜನೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರದಿಂದ ನೈಯಾ ಪೈಸಾ ಬಿಡುಗಡೆ ಮಾಡಲಿಲ್ಲ. ಕಡಲತೀರ ಯೋಜನೆಗಳಲ್ಲಿ 23 ಸ್ಥಳಗಳನ್ನು ಗುರುತಿಸಲಾಗಿತ್ತು. ಈ ಯೋಜನೆಗಳಿಗೆ ₹19 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಯೋಜನೆ ಸಂಪೂರ್ಣ ಸ್ಥಗಿತಗೊಳಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿ ಕಾಂಗ್ರೆಸ್ ಅಧಿಕಾರವಿದ್ದಾಗ ಹಲವಾರು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ, ದೇಶದ ಮೇಲೆ ತುರ್ತು ಪರಸ್ಥಿತಿ ಹೇರಿದ ಕಾಂಗ್ರೆಸ್ ನಾಯಕರು ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೇಂದ್ರ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ಮಾಡಿದರು. ಬಿಜೆಪಿ ಸಂಸದರೇ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಸಂವಿಧಾನ ಬಗ್ಗೆ ಬಿಜೆಪಿಗೆ ಗೌರವ ಇಲ್ಲ ಎಂದರು.

ಬಡತನ ನಿವಾರಣೆಗೆ 50ಕ್ಕೂ ಹೆಚ್ಚು ವರ್ಷ ದೇಶವಾಳಿದ ಕಾಂಗ್ರೆಸ್ ಏನು ಮಾಡಿದೆ ಎಂಬ ಮೋದಿ ಟೀಕಿಗೆ ಉತ್ತರಿಸಿದ ಅವರು, ನಾವು ದೇಶದ ಜನರಿಗೆ ವಿವಿಧ ವಸತಿ ಯೋಜನೆಗಳ ಮೂಲಕ ಮನೆಗಳನ್ನು ನಿರ್ಮಿಸಿದ್ದೇವೆ. ಅವರಿಗೆ ಗುಣಮಟ್ಟದ ಆಹಾರ ಧಾನ್ಯಗಳನ್ನು ನೀಡಿದ್ದೇವೆ. ಇದೆಲ್ಲ ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಯವರು 10 ವರ್ಷದಲ್ಲಿ ಶ್ರೀಮಂತರ ಸಾಲ ಮನ್ನಾ ಮಾಡಿ, ದೇಶದ ರೈಲು, ವಿಮಾನ ನಿಲ್ದಾಣ ಹೀಗೆ ಎಲ್ಲವನ್ನು ಅದಾನಿ, ಅಂಬಾನಿಗೆ ಮಾರಾಟ ಮಾಡಲು ಹೊರಟಿದ್ದಾರಲ್ಲ, ಇದು ಅಭಿವೃದ್ಧಿಯೇ? ಎಂದು ಕಾರವಾಗಿಯೇ ಮರು ಪ್ರಶ್ನಿಸಿದರು.

ಮಹಿಳೆಯರ ಕುರಿತು ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಅವರು, ಮಹಿಳೆಯರ ಬಗ್ಗೆ ಅಪಹಾಸ್ಯ ಬೇಡ. ಮಹಿಳೆಯರಿಗೆ ಕ್ಷಮೆ ಕೋರದೇ ಇದ್ದರೆ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ. ಕಳಂಕ ಮಾತುಗಳನ್ನು ಆಡುವ ಮೂಲಕ ಪ್ರಮಾದ ಎಸಗಿದ್ದಾರೆ. ಮಹಿಳೆಯರ ಚಾರಿತ್ರ್ಯ ವಧೆ ಮಾಡುವ ಹೇಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಚುನಾವಣಾ ಆಯೋಗ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಜಾತಾ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಬಿ.ಬಿ. ಅಸೂಟಿ, ಚೆನ್ನಪ್ಪ ಜಗಲಿ, ಬಸವರಾಜ ಸುಂಕಾಪುರ, ಬಸವರಾಜ ಕಡೇಮನಿ ಹಾಜರಿದ್ದರು.

Share this article