- ಮೈಸೂರು ಅರಸರ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಆಡಳಿತ, ಅಭಿವೃದ್ದಿ ಕಾರ್ಯ; ಶ್ಲಾಘನೆ
- ದುಗ್ಗಮ್ಮನ ದರ್ಶನ ಪಡೆದ ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ । ಗಾಯತ್ರಿ ಪರ ಮತಯಾಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ ಶ್ರೀಕಂಠದತ್ತ ಒಡೆಯರ್ ನಗರದ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶುಕ್ರವಾರ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಅನಂತರ ಭಗತ್ ಸಿಂಗ್ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸು ಮೂಲಕ ಮೂಲಕ ರೋಡ್ ಶೋ ಆರಂಭಿಸಿದರು. ಮೆರವಣಿಗೆ ಮೂಲಕ ಭಗತಸಿಂಗ್ ಆಟೋ ನಿಲ್ದಾಣ, ನಿಟುವಳ್ಳಿ ರಸ್ತೆ, ಕೆಟಿಜೆ ನಗರ 17ನೇ ಕ್ರಾಸ್, ಕೆಟಿಜೆ ನಗರ 2ನೇ ಮೇನ್ ಮಾರ್ಗವಾಗಿ ಶಿವಪ್ಪಯ್ಯ ವೃತ್ತ ತಲುಪಿದರು.
ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಯಧುವೀರ ಶ್ರೀಕಂಠದತ್ತ ಒಡೆಯರ್ ಮಾತನಾಡಿ, ಬೆಣ್ಣೆಯಂತಹ ಮನಸ್ಸಿನ ದಾವಣಗೆರೆ ಜನತೆಗೂ ಮೈಸೂರು ಸಂಸ್ಥಾನದ ಅರಸರಿಗೂ ಅವಿನಾಭಾವ ಸಂಬಂಧವಿದೆ. ಈ ಹಿಂದೆ ದಾವಣಗೆರೆ ಪ್ರದೇಶ ಮೈಸೂರು ಮಹಾಸಂಸ್ಥಾನದ ಪ್ರಮುಖ ಪ್ರದೇಶವಾಗಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಮೈಸೂರು ಮಹಾಸಂಸ್ಥಾನದ ಪ್ರತಿಧ್ವನಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದರು.ಈ ಹಿಂದೆ ಮೈಸೂರು ಅರಸರು ಮಾಡಿದ ಅಭಿವೃದ್ಧಿ ಕಾರ್ಯದಂತೆಯೇ ನರೇಂದ್ರ ಮೋದಿ ಅಭಿವೃದ್ಧಿ ಕೈಗೊಂಡಿದ್ದಾರೆ. ಮೈಸೂರು ಬ್ರಾಂಡ್ ಮೂಲಕ ವಿಶ್ವವಿಖ್ಯಾತಿಯನ್ನು ಅರಸರು ತಂದುಕೊಟ್ಟಿದ್ದರು. ಆಧುನಿಕತೆಯ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅದೇ ರೀತಿ ಈಗ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಮೂಲಕ ಸ್ವದೇಶೀ ಉತ್ಪನ್ನಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸೃಷ್ಟಿಸುವಂತಹ ಅವಕಾಶ ನೀಡುವ ಕೆಲಸ ಮೋದಿ ಮಾಡುತ್ತಿದ್ದಾರೆ. ಭಾರತೀಯ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಯೋಜನೆಗಳನ್ನು ರೂಪಿಸಿದ್ದಾರೆ. ಮೀಸಲಾತಿ, ಮಹಿಳಾ ಸಬಲೀಕರಣ ಸೇರಿದಂತೆ ಸಮಾಜಮುಖಿ ಕಾರ್ಯಗಳ ಮೂಲಕ ಸ್ಪಂದಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 56 ಯೋಜನೆಗಳ ಮೂಲಕ ದೇಶವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಿದರು.ಮಹಿಳೆಯರು, ಯುವಕರಿಗೆ ಸ್ಟಾರ್ಟ್ ಅಪ್ ಸೃಷ್ಟಿಸಲು ಉತ್ತೇಜನ ನೀಡಲಾಗಿದೆ. ಮೈಸೂರು ಅರಸರು ಹಿಂದು ಪರಂಪರೆಯನ್ನು ಉಳಿಸುವಲ್ಲಿ ಮೋದಿ ಸಹ ನಿರತರಾಗಿದ್ದಾರೆ. ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಬಾಲರಾಮನ ಪ್ರತಿಷ್ಠಾಪನೆ, ಕಾಶಿ ಶ್ರೀ ವಿಶ್ವನಾಥ ದೇಗುವ ಅಭಿವೃದ್ಧಿ ಮಾಡಿದ್ದಾರೆ. ಅಂದಿನ ಕಾಲದಲ್ಲಿ ಮೈಸೂರು ಮಹಾ ಸಂಸ್ಥಾನ ಕೈಗೊಂಡ ಜನಪರ ಯೋಜನೆಗಳನ್ನು ಮುಂದುವರಿಸಿದ್ದಾರೆ. ಇಡೀ ಭಾರತದ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.
ವಿಕಸಿತ ಭಾರತಕ್ಕಾಗಿ ಮೋದಿಯವರ ಕೈಗಳನ್ನು ಬಲಪಡಿಸೋಣ. ಅದಕ್ಕಾಗಿ ದಾವಣಗೆರೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರಿಗೆ ಪ್ರತಿಯೊಬ್ಬರೂ ಮತ ನೀಡುವ ಮೂಲಕ ಭಾರಿ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ದಾವಣಗೆರೆ ಸೇರಿದಂತೆ ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಯದುವೀರ ಶ್ರೀಕಂಠದತ್ತ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಮೇಯರ್ ಎಸ್.ಟಿ. ವೀರೇಶ, ಲೋಕಿಕೆರೆ ನಾಗರಾಜ, ಜಿ.ಎಸ್.ಅನಿತಕುಮಾರ, ಯಶವಂತ್ ರಾವ್ ಜಾಧವ್, ವಿಠಲ್, ಗಂಗಾಧರ, ಎಂ.ಹಾಲೇಶ, ವಿರೇಶ, ಬಿ.ಎಸ್.ಜಗದೀಶ್, ವಾಣಿ ನಾಗಭೂಷಣ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
ಮಾರ್ಗದುದ್ದಕ್ಕೂ ಮೈಸೂರು ಅರಸು ವಂಶದ ಯದುವೀರ ಒಡೆಯರ್ ಅವರ ದರ್ಶನ ಮಾಡಿ, ಕೈಮುಗಿಯುವ ಮೂಲಕ ಮೈಸೂರು ಅರಸು ಪರಂಪರೆಗೆ ದಾವಣಗೆರೆ ಜನತೆ ಗೌರವ ಸಮರ್ಪಿಸುತ್ತಿದ್ದುದು ವಿಶೇಷವಾಗಿ ಗಮನ ಸೆಳೆಯಿತು. ಭಗತ್ ಸಿಂಗ್ ನಗರದ ನಿಟ್ಟುವಳ್ಳಿ ರಸ್ತೆಯಿಂದ ಆರಂಭವಾದ ರ್ಯಾಲಿ ಕೆಟಿಜಿ ನಗರ 17ನೇ ಕ್ರಾಸ್, 12 ನೇ ಕ್ರಾಸ್, ಶಿವಪ್ಪ ಸರ್ಕಲ್ ನಲ್ಲಿ ಮುಕ್ತಾಯವಾಯಿತು. ಸಂಜೆ 4ಕ್ಕೆ 1ನೇ ವಾರ್ಡ್ ಗಾಂಧಿನಗರ ಹುಲಿಗೆಮ್ಮ ದೇವಸ್ಥಾನದಿಂದ ಪ್ರಾರಂಭವಾಗಿ ಪೊಲೀಸ್ ಸ್ಟೇಷನ್ ರಸ್ತೆ ವಿಠಲ್ ಮಂದಿರ ರಸ್ತೆ, ಚೌಕಿಪೇಟೆ, ಹಾಸಭಾವಿ ಸರ್ಕಲ್ ಬಲಗಡೆ, ಚಾಮರಾಜಪೇಟೆ ಸರ್ಕಲ್, ಮಂಡಿಪೇಟೆ ಬಲಭಾಗದಿಂದ ಆಗಮಿಸಿ ಗಡಿಯಾರ ಕಂಬದ ಬಳಿ ಮುಕ್ತಾಯಗೊಂಡಿತು.ಬೆಳಗ್ಗೆ ಯದುವೀರ್ ಅವರು ನಗರ ದೇವತೆ ದುಗ್ಗಮ್ಮ ದೇವಿ ದೇವಾಲಯಕ್ಕೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜೊತೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೊಟೇಲ್‌ನಲ್ಲಿ ಬೆಣ್ಣೆದೋಸೆ ಸವಿದು ಗಾಯತ್ರಿ ಸಿದ್ದೇಶ್ವರ ಪರ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ, ಮತಯಾಚಿಸಿದರು. ಬೆಣ್ಣೆದೋಸೆಯ ರುಚಿ ಸವಿದು, ಮೆಚ್ಚುಗೆ ವ್ಯಕ್ತಪಡಿಸಿದರು.
- - -ಬಾಕ್ಸ್ * ದಾವಣಗೆರೆ ಕ್ಷೇತ್ರ ಅಭಿವೃದ್ಧಿಗೆ ಸಿದ್ದೇಶ್ವರ ಪರಿಶ್ರಮ: ಯದುವೀರ ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಳೆದ 20 ವರ್ಷದಲ್ಲಿ ದಾವಣಗೆರೆ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದ್ದು, ಅದಕ್ಕೆ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಪರಿಶ್ರಮವಿದೆ ಎಂದು ಮೈಸೂರು ಮಹಾರಾಜ ಯದುವೀರ ಶ್ರೀಕಂಠದತ್ತ ಒಡೆಯರ್ ಅಭಿಪ್ರಾಯಪಟ್ಟರು.ನಗರದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಅನೇಕ ನಗರ ಸ್ಮಾರ್ಟ್ ಆಗಿದ್ದು, ಅದರಲ್ಲಿ ದಾವಣಗೆರೆ ಸಹ ಒಂದು ಎಂದರು.
ಮೋದಿ ಗ್ರಾಮೀಣ ಭಾಗಕ್ಕೆ ವಿದ್ಯುತ್, ಮನೆ ಮನೆಗೂ ಉಜ್ವಲ ಯೋಜನೆ ಅಡಿ ಸಿಲಿಂಡರ್, ರೈಲ್ವೆ ಉನ್ನತೀಕರಣ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಇಂತಹ ಪ್ರಧಾನಿ ನಮಗೆ ಬೇಕು. ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕೆಂದರೆ ನಾವು ಗೆಲ್ಲಬೇಕು. ನಾವು ಗೆಲ್ಲಬೇಕೆಂದರೆ ನೀವೆಲ್ಲರೂ ಕಮಲದ ಗುರುತಿಗೆ ತಪ್ಪದೇ ಮತ ಹಾಕಬೇಕು, ಎಲ್ಲರಿಂದಲೂ ಮತ ಹಾಕಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಮತದಾನಕ್ಕೆ ಇನ್ನೂ 3 ದಿನ ಬಾಕಿ ಇದೆ. ನಮ್ಮ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾನು ಈಗಾಗಲೇ ಇಡೀ ಕ್ಷೇತ್ರ ಒಂದು ಸುತ್ತು ಸುತ್ತಿದ್ದೇನೆ. ಸಿದ್ದೇಶ್ವರ ಇಲ್ಲಿ ನೋಡದ ಹಳ್ಳಿಗಳಿಲ್ಲ, ಹೋಗದ ರಸ್ತೆಗಳಿಲ್ಲ. ಇಡೀ ಕ್ಷೇತ್ರದ ಮತದಾರ ಪ್ರಭುಗಳು ನಮ್ಮನ್ನು 6 ಬಾರಿ ಆಶೀರ್ವದಿಸಿದ್ದಾರೆ. ಈ ಬಾರಿಯೂ ನಿಮ್ಮೆಲ್ಲರ ಆಶೀರ್ವಾದ ಸಿಗಲಿದೆ. ನಾನು ಗೆದ್ದು ಮೋದಿಯವರ ಕೈ ಬಲಪಡಿಸುತ್ತೇನೆಂಬ ವಿಶ್ವಾನ ಇದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿಯ ಪತಿ ಜಿಲ್ಲಾ ಸಚಿವರಾದರೂ ದಕ್ಷಿಣಕ್ಕೆ ಒಂದು ಸುಸಜ್ಜಿತ ಆಸ್ಪತ್ರೆ, ವಿದ್ಯಾಕೇಂದ್ರ, ಕೈಗಾರಿಕೆ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಅಧಿಕಾರವಿದ್ದಾಗ ಏನೂ ಮಾಡಲು ಆಗದವರು ಈಗ ಬಂದು ನಾನು ಅಭಿವೃದ್ಧಿ ಮಾಡುತ್ತೇನೆ, ಅಭಿವೃದ್ಧಿ ಮಾಡುತ್ತೇನೆನ್ನುತ್ತಿದ್ದಾರೆ. ಮನೆ, ಕಲ್ಲೇಶ್ವರ ಮಿಲ್ ಬಿಟ್ಟು ಹೊರಗೆ ಬಾರದವರಿಗೆ ಜಿಲ್ಲೆಯ ಸಮಸ್ಯೆ ಏನು ಗೊತ್ತು ಎಂದು ಅವರು ಪ್ರಶ್ನಿಸಿದರು.ನನ್ನ ಕ್ರಮ ಸಂಖ್ಯೆ 1, ಗುರುತು ಕಮಲದ ಗುರುತು, ನೀವು ನನಗೆ ಹಾಕುವ ಒಂದೊಂದು ಮತವೂ ದೇಶದ ಭವಿಷ್ಯ, ಸುರಕ್ಷೆ, ಸಮೃದ್ಧಿ, ಅಭಿವೃದ್ಧಿ, ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕಾಗಿ. ನಿಮ್ಮ ಅಮೂಲ್ಯ ಮತ ಬಿಜೆಪಿ ಹಾಕಿ, ದೇಶ ಉಳಿಸಿ ಎಂದು ಗಾಯತ್ರಿ ಸಿದ್ದೇಶ್ವರ ಕೋರಿದರು.
- - - ಬಾಕ್ಸ್ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು: ಯದುವೀರ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯಗಳು, ದೇಶದ ಸುಭದ್ರತೆಗೆ ಮೋದಿ ನೇತೃತ್ವದ ಎನ್‌ಡಿಎಂ ಮೈತ್ರಿಕೂಟಕ್ಕೆ ಮತದಾರರು ಮತ ನೀಡುವ ಮೂಲಕ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಯದುವೀರ್ ಕೋರಿದರು.
ಮೊದಲ ಹಂತದ 14 ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಮೇ 7ರಂದು ಎರಡನೇ ಹಂತದಲ್ಲಿ ನಡೆಯುವ ಚುನಾವಣೆಯ 14 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದಾರೆ. ದಾವಣಗೆರೆಯಲ್ಲೂ ಗಾಯತ್ರಿ ಸಿದ್ದೇಶ್ವರ್ ಗೆಲ್ಲುವ ನಿಚ್ಚಳವಾದ ವಾತಾವರಣ ಇದೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಗಾಯತ್ರಿ ಸಿದ್ದೇಶ್ವರರ ಪರ ಮತಯಾಚಿಸುತ್ತಿದ್ದೇನೆ ಎಂದರು.ಭಾರತೀಯರ ಪರಂಪರೆ ಉಳಿಸಲು ಪ್ರಧಾನಿ ಮೋದಿ ಬರಬೇಕಾಯಿತು. 500 ವರ್ಷ ಆಗದ ಶ್ರೀರಾಮ ಮಂದಿರ ಮೋದಿ ಬಂದ ಮೇಲೆ ನಿರ್ಮಾಣವಾಯಿತು. ಶ್ರೀರಾಮ ಮಂದಿರಕ್ಕೆ ಬಾಲರಾಮ ಮೂರ್ತಿ ನಮ್ಮ ಮೈಸೂರಿನಿಂದ, ನಮ್ಮ ರಾಜ್ಯದಿಂದ ಹೋಗಿರುವುದು ನಮ್ಮ ಹೆಮ್ಮೆ. ಹೀಗೆ ಕಾಶಿ ವಿಶ್ವನಾಥ, ಉಜೈನಿ ಮಹಾಕಾಳಿ ಜೀರ್ಣೋದ್ಧಾರ ಮಾಡಿದ್ದಾರೆ. ದೇಶದ ಪರಂಪರೆ ಉಳಿಸುವ ಜೊತೆಗೆ ಅಭಿವೃದ್ಧಿ ಕೂಡ ಮಾಡಿದ್ದಾರೆ ಎಂದು ಕೊಂಡಾಡಿದರು.
- - - -3ಕೆಡಿವಿಜಿ8, 9, 10, 11, 12, 13:ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮೈಸೂರು ಅರಸ, ಮೈಸೂರು-ಕೊಡಗು ಅಭ್ಯರ್ಥಿ ಯದುವೀರ ಒಡೆಯರ್ ಶುಕ್ರವಾರ ಮತಯಾಚಿಸಿದರು.