ವಿಶ್ವಾದ್ಯಂತ ಯೋಗಕಲೆ ವಿಸ್ತರಿಸಿದ ಮೋದಿ: ಹರೀಶ್

KannadaprabhaNewsNetwork | Published : Jun 22, 2024 12:50 AM

ಸಾರಾಂಶ

ಭಾರತಕ್ಕೆ ಸೀಮಿತವಾಗಿದ್ದ ಯೋಗವನ್ನು ವಿಶ್ವದಾದ್ಯಂತ ವಿಸ್ತರಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.

- ಹರಿಹರ ಪಟ್ಟಣದಲ್ಲಿ ವಿಶ್ವ ಯೋಗ ದಿನ ಕಾರ್ಯಕ್ರಮ ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಭಾರತಕ್ಕೆ ಸೀಮಿತವಾಗಿದ್ದ ಯೋಗವನ್ನು ವಿಶ್ವದಾದ್ಯಂತ ವಿಸ್ತರಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಗಿರಿಯಮ್ಮ ಆರ್.ಕಾಂತಪ್ಪ ಕಾಲೇಜು, ಎನ್‌ಎಸ್‌ಎಸ್ ಘಟಕಗಳು ಮತ್ತು ಧನ್ವಂತರಿ ಪತಂಜಲಿ ಯೋಗ ಕೇಂದ್ರದಿಂದ ಶುಕ್ರವಾರ ಆಯೋಜಿಸಿ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಪುರಾತನ ಕಾಲದಿಂದಲೂ ಋಷಿ ಮುನಿಗಳು ಆವಿಷ್ಕರಿಸಿದ ಯೋಗ ಅಭ್ಯಾಸ ನಡೆದುಬಂದಿದೆ. ಆದರೆ, ಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯ ಪ್ರಭಾವದಿಂದ ಯೋಗದ ಮಹತ್ವ ಕಡಿಮೆ ಆಗತೊಡಗಿತ್ತು. ಮೋದಿಗಿಂತ ಮುಂಚಿನ ಪ್ರಧಾನಿಗಳು ಯೋಗಕ್ಕೆ ಮಹತ್ವ ಕೊಟ್ಟಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ೧೦ ವರ್ಷಗಳ ಹಿಂದೆ ವಿಶ್ವಕ್ಕೆ ಭಾರತದ ಯೋಗಕಲೆ ಮಹತ್ವವನ್ನು ಪರಿಚಯಿಸಿ, ಭಾರತೀಯರು ಹೆಮ್ಮೆ ಪಡುವಂತೆ ಮಾಡಿದರು ಎಂದರು.

ವಿಶ್ವಾದ್ಯಂತ ಇಂದು ಭಾರತೀಯ ಯೋಗಕಲೆ ರಾರಾಜಿಸುತ್ತಿದೆ. ಇದರಿಂದಾಗಿ ವಿಶ್ವಕ್ಕೆ ಭಾರತದ ಸಂಸ್ಕಾರ, ಪರಂಪರೆಯ ಶಕ್ತಿ ಎಷ್ಟರಮಟ್ಟಿಗಿದೆ ಎಂಬುದು ಕೂಡ ಸಾಬೀತುಪಡಿಸಿದಂತಾಗಿದೆ. ನಿತ್ಯ ಯೋಗ ಮಾಡುವುದರಿಂದ ಮನಸ್ಸು ಲವಲವಿಕೆಯಿಂದ ಇರುತ್ತದೆ. ಕಾಯಿಲೆಗಳು ದೂರವಾಗಿ ದೈಹಿಕ ಆರೋಗ್ಯವೂ ಸುಧಾರಣೆ ಆಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಕನಿಷ್ಠ ಅರ್ಧ ಗಂಟೆ ಕಾಲ ಯೋಗಾಭ್ಯಾಸಕ್ಕೆ ಮೀಸಲಿಡಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಲ್ಲಿ, ವಾರದಲ್ಲಿ ಒಂದೆರಡು ಪಿರಿಯಡ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಲು ನಿರ್ದೇಶನ ನೀಡಬೇಕು ಎಂದರು.

ಪುಟ್ಟ ಬಾಲಕಿ ಸಾನ್ವಿ ಎನ್. ನೀಡಿದ ಯೋಗ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್, ಪ್ರಾಚಾರ್ಯರಾದ ಗಂಗಾಧೃಪ್ಪ, ಸುಜಾತ, ಎನ್‌ಎಸ್‌ಎಸ್ ಘಟಕದ ಗುರುಬಸವರಾಜಯ್ಯ, ಧನ್ವಂತರಿ ಯೋಗ ಕೇಂದ್ರದ ಎನ್.ನಿರಂಜನ್ ಇತರರಿದ್ದರು.

- - - -೨೧ಎಚ್‌ಆರ್‌ಆರ್೪:

ಹರಿಹರದ ಗಿರಿಯಮ್ಮ ಆರ್. ಕಾಂತಪ್ಪ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಯೋಗ ದಿನ ಕಾರ್ಯಕ್ರಮವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು.

Share this article