ಗದಗ: ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಶುಕ್ರವಾರ ಗದಗ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಕೆಲವೆಡೆ ರೋಡ್ ಇನ್ನು ಕೆಲವೆಡೆ ಸಭೆಗಳನ್ನು ನಡೆಸಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಮತಯಾಚನೆ ನಡೆಸಿದರು.
ಮೊದಲು ಕುರ್ತಕೋಟಿ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಸೊರಟೂರ ಗ್ರಾಮದಲ್ಲಿ ಮತಯಾಚನೆ ಮಾಡಿದರು. ಈ ಸಂಧರ್ಭದಲ್ಲಿ ನರಗುಂದ ಶಾಸಕ ಸಿ.ಸಿ.ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು. ತದ ನಂತರ ಗ್ರಾಮದ ಕಾಲಭೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.ಮತದಾರರನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಹಳ್ಳಿ-ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ. ನನ್ನಷ್ಟು ಹಳ್ಳಿ ತಿರುಗುವವರು ಯಾರೂ ಇಲ್ಲ.ನನಗೆ ಹಳ್ಳಿಗಳ ಸಂಪರ್ಕ ಇದೆ.ಜನರ ಪ್ರೀತಿ ವಿಶ್ವಾಸ ಮೇಲೆ ನನಗೂ ಪ್ರೀತಿ ಇದೆ. ಯಾವುದೇ ಸಮಯ ವ್ಯರ್ಥ ಮಾಡದೇ ಪ್ರಚಾರ ಮಾಡುತ್ತಿದ್ದೇನೆ. ಪ್ರತಿಯೊಂದು ಗ್ರಾಪಂ ಮಟ್ಟಕ್ಕೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಹಳ್ಳಿಹಳ್ಳಿಗಳಲ್ಲಿ ಪ್ರಚಾರವಾಗುತ್ತಿದೆ. ಡೊಳ್ಳು ಬಾರಿಸುವ ಮೂಲಕ ಗದಗ ಕ್ಷೇತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದೇನೆ ಇದೊಂದು ಶುಭ ಸಂಕೇತವಾಗಿದೆ. ಹಾವೇರಿ-ಗದಗ ಕ್ಷೇತ್ರದಲ್ಲಿ ಮೋದಿ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಬಗ್ಗೆ ಕೇಂದ್ರ ಪ್ರಚಾರ ಸಮಿತಿಯವರು ತೀರ್ಮಾನ ಮಾಡುತ್ತಾರೆ ಎಂದರು.
ಡೊಳ್ಳು ಬಾರಿಸಿದ ಬೊಮ್ಮಾಯಿ:ಗದಗನ ಕುರ್ತಕೋಟಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಬಸವರಾಜ ಬೊಮ್ಮಾಯಿಯವರು ಮೆರವಣಿಗೆಯಲ್ಲಿ ಜಾನಪದ ಕಲಾವಿದರೊಂದಿಗೆ ಡೊಳ್ಳು ಬಾರಿಸಿ ಸಂಭ್ರಮ ಪಟ್ಟರು. ಪ್ರಚಾರ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಸಿ.ಪಾಟೀಲ ಸೇರಿದಂತೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಮುಖಂಡರು ಹಾಜರಿದ್ದರು.ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ನಿವಾಸಿ, ಗದಗ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ಕುರ್ತಕೋಟಿ ಶುಕ್ರವಾರ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಸೈಕ್ಲಿಂಗ್ ಮಾಡಲು ಕ್ರೀಡಾ ಇಲಾಖೆಯಿಂದ ₹ 8.50 ಲಕ್ಷದ ಸೈಕಲ್ ಕೊಡಿಸಿದ್ದರಿಂದ ತಾನು ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದು ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದೆ ಅದಕ್ಕಾಗಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತನ್ನ ಸಾಧನೆಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಪವಿತ್ರಾ ಕೋಚ್ ಆನಂದ ದೇಸಾಯಿ, ನರಗುಂದ ಶಾಸಕ ಸಿ.ಸಿ. ಪಾಟೀಲ ಹಾಜರಿದ್ದರು.