ಮೋದಿ ಮತ್ತೆ ಪ್ರಧಾನಿಯಾಗೋದು ತಪ್ಪಿಸಲಾಗದು: ದೇವೇಗೌಡ

KannadaprabhaNewsNetwork | Published : Dec 28, 2023 1:46 AM

ಸಾರಾಂಶ

ದಶಕಗಳ ಕಾಲ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರೇ ಈ ಮೈತ್ರಿಯ ಪೌರೋಹಿತ್ಯ ವಹಿಸಿರುವುದು ಅಚ್ಚರಿಯ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ದೇವೇಗೌಡರೊಂದಿಗೆ ಮುಖಾಮುಖಿಯಾದಾಗ...

ಮುಖಾಮುಖಿ ಸಂದರ್ಶನ

ವಿಜಯ್ ಮಲಗಿಹಾಳ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಲೋಕಸಭಾ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಕ್ಕೆ ನಾಂದಿ ಹಾಡಲಿದೆ. ಆಡಳಿತಾರೂಢ ಬಲಾಢ್ಯ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ಉದ್ದೇಶದಿಂದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕೃತವಾಗಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ನಿರ್ಧರಿಸಿವೆ. ಹಿಂದೆ ಸ್ಥಳೀಯ ಲೆಕ್ಕಾಚಾರ ಆಧರಿಸಿ ತೆರೆಮರೆಯಲ್ಲಿ ಹೊಂದಾಣಿಕೆ ಆಗುತ್ತಿರುವಾಗಲೇ ಕಾಂಗ್ರೆಸ್ ಪಕ್ಷ ಜೆಡಿಎಸ್‌ ಅನ್ನು ಬಿಜೆಪಿಯ ಬಿ ಟೀಮ್ ಎಂದು ಟೀಕಿಸುತ್ತಿತ್ತು. ಈಗ ಬಿ ಟೀಮ್ ಅಲ್ಲ. ಎರಡೂ ಪಕ್ಷಗಳು ಒಂದೇ ಟೀಮ್ ಆಗಿ ಕಾಂಗ್ರೆಸ್‌ ಪಕ್ಷವನ್ನು ಎದುರಿಸಲಿವೆ. ದಶಕಗಳ ಕಾಲ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರೇ ಈ ಮೈತ್ರಿಯ ಪೌರೋಹಿತ್ಯ ವಹಿಸಿರುವುದು ಅಚ್ಚರಿಯ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ದೇವೇಗೌಡರೊಂದಿಗೆ ‘ಮುಖಾಮುಖಿ’ಯಾದಾಗ...ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಇನ್ನೂ ಗೊಂದಲಗಳೇನಾದರೂ ಇವೆಯೇ?ಯಾವ ಗೊಂದಲಗಳೂ ಇಲ್ಲ. ಕುಮಾರಸ್ವಾಮಿ ಬಿಜೆಪಿ ಜತೆ ಕೈಜೋಡಿಸಿ ಮುಂದೆ ಲೋಕಸಭೆ, ವಿಧಾನಸಭೆ ಮತ್ತಿತರ ಚುನಾವಣೆಗಳನ್ನು ಎದುರಿಸಬೇಕು ಎಂಬ ತೀರ್ಮಾನ ಮಾಡಿದ್ದೇನೆ. ನನ್ನ ಅನುಭವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಆದ ಧೋಖಾ (ಮೋಸ), ಕುಮಾರಸ್ವಾಮಿ ಸರ್ಕಾರವನ್ನು ಹೇಗೆ ತೆಗೆದರು ಎಂಬುದೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ಈ ದೇಶದ ಹಿತದೃಷ್ಟಿಯಿಂದ ಮೋದಿ ಅವರ ನಾಯಕತ್ವಕ್ಕೆ ನಾವು ಬೆಂಬಲ ನೀಡಬೇಕು ಎಂಬ ತೀರ್ಮಾನ ಮಾಡಿದ್ದೇವೆ.ಬಿಜೆಪಿ ನೇತೃತ್ವದ ಎನ್‌ಡಿಎ ಬದಲು ಕಾಂಗ್ರೆಸ್ ಮತ್ತಿತರ ಹಲವು ರಾಜಕೀಯ ಪಕ್ಷಗಳ ಐಎನ್‌ಡಿಐಎ (ಇಂಡಿಯಾ) ಮೈತ್ರಿ ಕೂಟವೂ ನಿಮ್ಮೆದುರು ಇತ್ತಲ್ಲವೇ?ರಾಷ್ಟ್ರದಲ್ಲಿ ಈಗ ಎರಡು ಬಣಗಳಿವೆ. ಒಂದು ಎನ್‌ಡಿಎ. ಅದರ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ. ಇನ್ನೊಂದು ಐಎನ್‌ಡಿಐಎ ಬಣ. ಅದಕ್ಕೆ ಇನ್ನೂ ಯಾರು ಮುಖ್ಯಸ್ಥರು ಎನ್ನುವುದು ಗೊಂದಲವಿದೆ. ಹೀಗಾಗಿ, ಈ ಎರಡೂ ಬಣಗಳ ಮಧ್ಯದಲ್ಲಿ ಹೋರಾಟ ಮಾಡುವಂಥ ವರ್ಚಸ್ಸು ಇವತ್ತು ಮೋದಿ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಜೆಡಿಎಸ್‌ ಮೇಲೂ ಭಾರಿ ಪರಿಣಾಮ ಬೀರಿದೆ ಎಂದಾಯಿತು?ನನ್ನ ಅನುಭವದಲ್ಲಿ ಹೇಳುವುದಾದರೆ ನರೇಂದ್ರ ಮೋದಿ ಅವರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕರು ಯಾರೂ ಇಲ್ಲ. ಈಗಲೂ ಪ್ರಯತ್ನ ಮಾಡಬಹುದು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಪ್ರಧಾನಿಯಾಗುವುದನ್ನು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಯಾರೂ ಏನು ಮಾಡುವುದಕ್ಕೆ ಆಗುವುದಿಲ್ಲ. ಇದು ನನ್ನ ಪ್ರಾಮಾಣಿಕ ಅನಿಸಿಕೆ. ಅವರು ಸಾಕಷ್ಟು ಕೆಲಸಗಳನ್ನೂ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ನಾಯಕತ್ವ ಬೆಳೆಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಥ ಪ್ರತಿಭೆ ಇರುವವರು ಯಾರಿದ್ದಾರೆ ಹೇಳಿ.

ಐಎನ್‌ಡಿಐಎ ಬಣದಲ್ಲಿ ದೇಶ ಮುನ್ನಡೆಸಬಲ್ಲ ಪ್ರಬಲ ನಾಯಕತ್ವ ಇಲ್ಲವೇ?ಐಎನ್‌ಡಿಐಎ ಬಣದಲ್ಲಿ ನಮಗೆ ಗೊತ್ತಾಗುವಂಥ ಮೂರ್ನಾಲ್ಕು ಜನ ಮುಖಂಡರಿದ್ದಾರೆ. ಶರದ್ ಪವಾರ್‌, ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಅಷ್ಟೇ. ಐಎನ್‌ಡಿಐಎ ಬಣದಲ್ಲಿ 48 ಸಣ್ಣ ಸಣ್ಣ ರಾಜಕೀಯ ಪಕ್ಷಗಳಿವೆ. ಆದರೆ, ನಾಯಕರಾಗುವ ಸಾಮರ್ಥ್ಯ ಮೂರ್ನಾಲ್ಕು ಮಂದಿ ಬಿಟ್ಟರೆ ಬೇರಾರಿಗೂ ಇಲ್ಲ. ಮೇಲ್ನೋಟಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಶರದ್ ಪವಾರ್ ಅವರು ಈಗ ಈ ವಿಷಯ ಚರ್ಚೆಯೇ ಮಾಡಬಾರದು ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ನಾಯಕರು ಬಹಳ ವಿಭಿನ್ನವಾದಂಥ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸಂಸದ ದಯಾನಿಧಿ ಮಾರನ್ ಅವರು ನೀಡಿದ ಒಂದು ಹೇಳಿಕೆಯಿಂದ ಉತ್ತರ ಹಿಂದೂಸ್ಥಾನದಲ್ಲಿ ತುಂಬಾ ಆಕ್ರೋಶ ಉಂಟಾಗಿದೆ.ರಾಜ್ಯದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಮರ್ಥರು ಇದ್ದಾರಲ್ಲ?ನಿತೀಶ್ ಕುಮಾರ್ ಒಂದು ಪ್ರದೇಶಕ್ಕೆ ಸೀಮಿತವಾದವರು. ಅದೇ ರೀತಿ ಮಮತಾ ಬ್ಯಾನರ್ಜಿ ಕೂಡ. ಮಲ್ಲಿಕಾರ್ಜುನ ಖರ್ಗೆ ಅವರು ಒಂದು ರಾಷ್ಟ್ರೀಯ ಪಕ್ಷದ, ಈ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಆದರೆ, ವಾಸ್ತವಾಂಶವನ್ನು ಮರೆಮಾಚುವುದಕ್ಕೆ ಆಗುವುದಿಲ್ಲ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದಾರೆ. ಸೋನಿಯಾ ಗಾಂಧಿ ಹತ್ತಾರು ವರ್ಷದಿಂದ ಮಗನನ್ನು ಬಿಂಬಿಸಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಎಲ್ಲ ಮಾಡಿದ್ದಾರೆ. ಅದರಿಂದ ಕಾಂಗ್ರೆಸ್ ಶಕ್ತಿ ಒಂದು ಕಾಲದಲ್ಲಿ ಈ ದೇಶ ಆಳಿ ಈಗ ಕರ್ನಾಟಕ, ತೆಲಂಗಾಣ ಇಷ್ಟಕ್ಕೆ ಬಂದು ನಿಂತಿದೆ.ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ತಕ್ಕಮಟ್ಟಿಗೆ ಸಾಧನೆ ಮಾಡಿದೆಯಲ್ಲ?ಅಸೆಂಬ್ಲಿ ಚುನಾವಣೆಯ ಫಲಿತಾಂಶದ ಮೇಲೆ ನಾವು ಒಂದು ತೀರ್ಮಾನಕ್ಕೆ ಬರುವುದಕ್ಕೆ ಆಗುವುದಿಲ್ಲ. ಯಾಕೆಂದರೆ, ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಏನಾಯಿತು ಆ ಹಿನ್ನೆಲೆಯಿಂದ ನಾವು ತುಲನೆ ಮಾಡಿದರೆ ಹಿಂದೆ ಹಲವು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಳಿಕ ಲೋಕಸಭಾ ಚುನಾವಣೆಯಲ್ಲಿ ಸೋತ ಉದಾಹರಣೆಗಳಿವೆ. ದೇಶದಲ್ಲಿ ಒಟ್ಟು 140 ಕೋಟಿ ಜನಸಂಖ್ಯೆ ಇದೆ. ಒಂದೊಂದು ರಾಜ್ಯದಲ್ಲಿ ಒಂದು ಸನ್ನಿವೇಶ ಇದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಜತೆಗೆ ಜೆಡಿಎಸ್‌ನ ಸಖ್ಯ ಮುಗಿದಂತಾಯಿತಲ್ಲವೇ?ಕುಮಾರಸ್ವಾಮಿ ಅವರೇನು ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಅವರ ಬಳಿ ಹೋಗಿರಲಿಲ್ಲ. ಗುಲಾಂ ನಬಿ ಆಜಾದ್, ಗೆಹ್ಲೋಟ್‌ ಅವರು ಬಂದು ಹಟ ಮಾಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಮುಂದೆ ಅವರೇ ಹೇಗೆ ತೆಗೆದು ಹಾಕಿದರು ಎಂಬುದು ಜಗಜ್ಜಾಹೀರಾಗಿರುವ ಸಂಗತಿ. ಅದರಿಂದ ಇವತ್ತು ನಾವು ಕರ್ನಾಟಕದಲ್ಲಿ ಬಿಜೆಪಿ ಜತೆ ಸಂಬಂಧ ಮಾಡಲು ತೀರ್ಮಾನಕ್ಕೆ ಬಂದಿದ್ದೇವೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ ಪಕ್ಷ ಬಿಜೆಪಿಯಿಂದ ಎಷ್ಟು ಸ್ಥಾನ ನಿರೀಕ್ಷೆ ಮಾಡುತ್ತಿದೆ?

ಅದೆಲ್ಲ ಮುಂದೆ ನೋಡೋಣ. ಕರ್ನಾಟಕದಲ್ಲಿ ನಮಗೆ ಎಷ್ಟು ಕ್ಷೇತ್ರ ಬಿಟ್ಟು ಕೊಡುತ್ತಾರೆ ಎಂಬುದು ಇನ್ನೂ ಚರ್ಚೆಯಾಗಿಲ್ಲ. ಬಹುಶಃ ಮುಂದಿನ ತಿಂಗಳು ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕುಮಾರಸ್ವಾಮಿ, ಯಡಿಯೂರಪ್ಪ ಅವರು ಸಮಾಲೋಚನೆ ಮಾಡಿ ಒಂದು ತೀರ್ಮಾನ ಮಾಡಬಹುದು.ಬಿಜೆಪಿ ಜತೆಗಿನ ಜೆಡಿಎಸ್‌ ಮೈತ್ರಿ ಈಗ ಅಧಿಕೃತ ಎಂದು ಹೇಳಬಹುದಲ್ಲವೇ?ನಾವು ಬಿಜೆಪಿ ಜತೆ ಹೋಗುವುದರಲ್ಲಿ ಈಗ ಯಾವ ಸಂಶಯವೂ ಉಳಿದಿಲ್ಲ. ಮೋದಿ ಮತ್ತು ಅಮಿತ್ ಶಾ ಹಾಗೂ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ. ಕ್ಷೇತ್ರಗಳ ಹಂಚಿಕೆ ಬಗ್ಗೆ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿಯೇ ನಿರ್ಧಾರ ಮಾಡುತ್ತಾರೆ. ಅದರ ಬಗ್ಗೆ ಅಪನಂಬಿಕೆ ಇಲ್ಲವೇ ಇಲ್ಲ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿರುವುದು ಲೋಕಸಭಾ ಚುನಾವಣೆಗೆ ಅನುಕೂಲಕರವಾಗಿದೆ.ಹಿಂದೆ 2006ರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಕೈಜೋಡಿಸಿ ಅಧಿಕಾರದ ಗದ್ದುಗೆ ಏರಿದ್ದಕ್ಕೆ ಆಗ ನೀವು ತುಂಬಾ ಬೇಸರ ಮಾಡಿಕೊಂಡಿದ್ದರಲ್ಲವೇ?ಅದಾದ ನಂತರ ಕಾಂಗ್ರೆಸ್‌ನವರು ಸರ್ಕಾರ ಮಾಡಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಮಾಡಿದರು. ಆದರೆ, ಅದೇ ಕುಮಾರಸ್ವಾಮಿ ಅವರನ್ನು ಸಂಪೂರ್ಣವಾಗಿ ರಾಜಕೀಯವಾಗಿ ಮುಗಿಸಬೇಕು ಎಂದು ಪ್ರಯತ್ನಿಸಿದರು. ಹದಿನೆಂಟು ಶಾಸಕರನ್ನು ಕಳಿಸಿದ್ದು ಯಾರು? ಜನಕ್ಕೆ ಗೊತ್ತಿದೆ. ಇಲ್ಲಿಂದ ಹೋದ ಶಾಸಕರೇ ಎಲ್ಲವನ್ನೂ ಹೇಳಿದ್ದಾರೆ. ಜನಕ್ಕೆ ಎಲ್ಲವನ್ನೂ ತಿಳಿದುಕೊಳ್ಳುವ ಶಕ್ತಿಯಿದೆ.ಈ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಬಹುದೇ?ಬದಲಾವಣೆ ಅಂತ ಏನೂ ಇಲ್ಲ. ಹಿಂದೆ ಸಣ್ಣ ಪುಟ್ಟ ವ್ಯತ್ಯಾಸಗಳಾಗಿವೆ. ಅವುಗಳನ್ನು ಮರೆತು ಮುಂದೆ ಹೋಗುವಂಥ ಒಂದು ಕಠಿಣ ತೀರ್ಮಾನ ನಮ್ಮ 19 ಮಂದಿ ವಿಧಾನಸಭಾ ಸದಸ್ಯರು ಮತ್ತು ಎಂಟು ಮಂದಿ ವಿಧಾನಪರಿಷತ್ ಸದಸ್ಯರು ಎಲ್ಲ ಸೇರಿ ಮಾಡಿದ್ದಾರೆ. ಕಾಂಗ್ರೆಸ್ ಮಾಡಿದ ಒಂದು ದ್ರೋಹಕ್ಕೆ ನಾವು ಬಿಜೆಪಿ ಜತೆ ಕೈಜೋಡಿಸಬೇಕು ಎಂಬ ಒಗ್ಗಟ್ಟಿನ ತೀರ್ಮಾನ ಕೈಗೊಂಡಿದ್ದಾರೆ. ಅದಕ್ಕೆ ಎಲ್ಲ ಜಿಲ್ಲಾ ಘಟಕಗಳೂ ಸಮ್ಮತಿ ನೀಡಿವೆ.ಕರ್ನಾಟಕದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದೆ ಎಂಬ ಕಾರಣಕ್ಕಾಗಿ ಬಿಜೆಪಿ ಜತೆ ಕೈಜೋಡಿಸುವ ನಿರ್ಧಾರಕ್ಕೆ ಬಂದಿರಾ?ಕಾಂಗ್ರೆಸ್‌ನವರು ನಮ್ಮನ್ನು ತುಳಿಯಲೇ ಬೇಕು ಎಂದು ಪ್ರಯತ್ನ ಮಾಡಿದರು. ಕರ್ನಾಟಕದಲ್ಲಿ ಐಎನ್‌ಡಿಐಎ ಅಂದರೆ ಕಾಂಗ್ರೆಸ್‌ ಮಾತ್ರ. ಮೋದಿ ಅವರೊಂದಿಗೆ ನಮ್ಮ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಹತ್ತು ವರ್ಷಗಳಿಂದ ಯಾವುದೇ ಸಂದರ್ಭದಲ್ಲಿ ನಮ್ಮಲ್ಲಿ ಪರಸ್ಪರ ಐಕ್ಯತೆಯ ಮನೋಭಾವ ಇದೆ. ಹೀಗಾಗಿ, ನಾನೇ ಇದರಲ್ಲಿ ಕಠಿಣವಾದ ತೀರ್ಮಾನಕ್ಕೆ ಬಂದೆ. ಕುಮಾರಸ್ವಾಮಿ ನೀನು ಮೋದಿ ಜತೆ ಹೋಗಪ್ಪ ಎಂದೆ. ನನಗೆ ವಯಸ್ಸಾಯಿತು. 91 ವರ್ಷ ಈಗ. ಕುಮಾರಸ್ವಾಮಿ ಪಕ್ಷ ಮುನ್ನಡೆಸುತ್ತಿದ್ದಾರೆ.ಲೋಕಸಭಾ ಚುನಾವಣೆಗೆ ಮಾತ್ರ ಈ ಮೈತ್ರಿ ಸೀಮಿತವೇ ಅಥವಾ ನಂತರವೂ ಮುಂದುವರೆಯಲಿದೆಯೇ?

ಲೋಕಸಭಾ ಚುನಾವಣೆ ನಂತರವೂ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಈ ಹೊಂದಾಣಿಕೆ ಬ್ರೇಕ್ ಮಾಡಲು ನಾನು ಅವಕಾಶ ನೀಡುವುದಿಲ್ಲ. ಮೈತ್ರಿ ಆಗಿದ್ದರಿಂದ ಲೋಕಸಭಾ ಚುನಾವಣೆ ಬಳಿಕ ಮುಂಬರುವ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂದು ಕುಳಿತು ಮಾತನಾಡುತ್ತಾರೆ. ಸೌಹಾರ್ದ ವಾತಾವರಣವಿದೆ. ಯಾವುದೇ ತರ ತೊಂದರೆ ಇಲ್ಲ. ಐಕ್ಯತೆಗೆ ಭಂಗ ತರುವ ಯಾವುದೇ ಸನ್ನಿವೇಶ ಇಲ್ಲ. ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ.ಜೆಡಿಎಸ್ ಪಕ್ಷ ತನ್ನೊಂದಿಗೆ ಇರುವ ಜಾತ್ಯತೀತ ಎಂಬ ಪದವನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಟಾಂಗ್ ನೀಡಿದೆ?ಕಾಂಗ್ರೆಸ್ ಪಕ್ಷದ ಹೇಳಿಕೆಗೆ ಅಷ್ಟು ಮಹತ್ವ ನೀಡುವ ಅಗತ್ಯವಿಲ್ಲ. ನೋಡಿ, ಜಾತ್ಯತೀತತೆ ಬಗ್ಗೆ ಮಾತನಾಡುವುದಾದರೆ ತುಂಬಾ ಮಾತನಾಡಬಹುದು. ಹಿಂದೆ ಕರುಣಾನಿಧಿ ಬಿಜೆಪಿ ಜತೆ ತುಂಬಾ ವರ್ಷಗಳ ಕಾಲ ಇದ್ದರು. ಆಗ ಅವರು ಬಿಜೆಪಿಯವರ ಮನೆ ಬಾಗಿಲಿಗೆ ಹೋಗಿ ನಿಂತು ಎಂಟೋ ಹತ್ತೋ ಸ್ಥಾನ ಕೊಡಿ ಎಂದು ಕೈಚಾಚುತ್ತಿರಲಿಲ್ಲವೇ. ಈ ದೇಶದ ಜನ ದಡ್ಡರಲ್ಲ. ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಅಲ್ಲಿ ಹೋಗಿ ಶಿವಸೇನೆ ಜತೆ ಸರ್ಕಾರ ಮಾಡಿಲ್ಲವೇ. ಅದೆಲ್ಲ ಮುಗಿದು ಹೋದ ವಿಷಯ.ನಿಮ್ಮ ಮೈತ್ರಿ ಪಕ್ಷ ಬಿಜೆಪಿ ಹಿಂದುತ್ವದ ಮಂತ್ರ ಪಠಿಸುತ್ತದೆ. ಹಿಂದುತ್ವದ ಬಗ್ಗೆ ನಿಮ್ಮ ನಿಲುವೇನು?ಹಿಂದುತ್ವ ಎಂಬುದರ ಬಗ್ಗೆ ಬಹಳ ವಿವರಣೆ ನೀಡುವ ಅಗತ್ಯವಿಲ್ಲ. ನಮ್ಮ ಮನಸ್ಸಿಗೆ ಪ್ರಶ್ನೆ ಮಾಡಿಕೊಂಡಾಗ ನಾನು ಹಿಂದು ಎಂದು ಹೇಳಿಕೊಳ್ಳುವುದಕ್ಕೆ ಮನಸ್ಸಿನಲ್ಲಿ ಸಂಕೋಚ ಇದೆಯೇ? ಆದರೆ, ಆಡಳಿತ ನಡೆಸುವಾಗ ಎಲ್ಲ ಕಡೆ ಹೋಗುತ್ತೇವೆ. ನಾನು ಆಡಳಿತ ನಡೆಸುವಾಗ ಅಮೃತಸರ್‌ನ ಸ್ವರ್ಣಮಂದಿರಕ್ಕೆ ಹೋಗಿದ್ದೆ. ಅಜ್ಮೇರ್‌ನ ದರ್ಗಾಕ್ಕೂ ಹೋಗಿದ್ದೆ. ಆಚರಣೆಗೆ ಹಿಂದುಗಳಾಗಿ ನಾವು ನಡೆಸಿಕೊಂಡು ಹೋಗುತ್ತೇವೆ. ಆದರೆ, ಆಡಳಿತ ನಡೆಸುವಾಗ ಸ್ವಾಭಾವಿಕವಾಗಿ ಎಲ್ಲ ಧರ್ಮಕ್ಕೂ ಗೌರವ ಕೊಡುತ್ತೇವೆ. ಮೋದಿ ಅವರ ಜತೆ ಈಗ ಎಷ್ಟು ಜನ ಮುಸ್ಲಿಂ ರಾಷ್ಟ್ರಗಳ ನಾಯಕರು ಸ್ನೇಹ ಬೆಳೆಸಿಕೊಂಡಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಈಗ ಮೋದಿ ಅವರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಹೀಗಾಗಿ, ಮೋದಿ ಅವರ ಬಗ್ಗೆ ಅಸೂಯೆಪಟ್ಟರೆ ಪ್ರಯೋಜನವಿಲ್ಲ.ಮೋದಿ ಅವರ ನಾಯಕತ್ವ ಕಾರಣಕ್ಕಾಗಿಯೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಯಿತೇ?ಹಾಗಲ್ಲ. ಹಿಂದೆ ಕೇಂದ್ರದಲ್ಲಿ ನನ್ನ ಸರ್ಕಾರ ತೆಗೆದವರು ಯಾರು? ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರವನ್ನು ತೆಗೆದವರು ಯಾರು? ಇದರ ಬಗ್ಗೆ ಡಿಬೇಟ್ ಮಾಡುವ ಅಗತ್ಯವಿಲ್ಲ. ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಬಿಜೆಪಿ ಜತೆ ಹೋಗುತ್ತೇವೆ ಅಷ್ಟೇ.ಬಿಜೆಪಿ ಕೋಮುವಾದಿ ಎಂಬ ಹಣೆಪಟ್ಟಿ ಹೊತ್ತಿರುವುದು ಜೆಡಿಎಸ್‌ಗೆ ತೊಂದರೆ ಆಗುವುದಿಲ್ಲವೇ?ಸುಮ್ಮನೆ ಏನೇನೋ ಪ್ರಶ್ನೆ ಹಾಕಿದರೂ ಉಪಯೋಗವಿಲ್ಲ. ರಾಮನ ದೇವಸ್ಥಾನ ಕಟ್ಟಿಸಿದರು. ಎಲ್ಲರಿಗೂ ಆಹ್ವಾನ ನೀಡಿದರು. ನನಗೂ ಆಹ್ವಾನಿಸಿದರು. ಸೋನಿಯಾ ಗಾಂಧಿ ಅವರಿಗೂ ಆಹ್ವಾನ ಪತ್ರಿಕೆ ನೀಡಿದರು. ಕೆಲವರು ಕಮ್ಯುನಿಸ್ಟರು ಆ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಹೇಳಿದರು. ಆದರೆ, ತಾವು ಆ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದಷ್ಟೇ ಸೋನಿಯಾ ಗಾಂಧಿ ಹೇಳಿದ್ದಾರೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಆ ಕಾರ್ಯಕ್ರಮಕ್ಕೆ ಹೋಗುವುದನ್ನು ನೀವು ನೋಡುತ್ತೀರಿ.ನೀವು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವಿರಾ?ನನ್ನ ಆರೋಗ್ಯದ ಮೇಲೆ ನಿರ್ಧಾರವಾಗಲಿದೆ. ನಾನು ಹೋಗದಿದ್ದರೂ ಕುಮಾರಸ್ವಾಮಿ ನೂರಕ್ಕೆ ನೂರರಷ್ಟು ಹೋಗುತ್ತಾರೆ.ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ನಿಮ್ಮ ಪಕ್ಷದ ಮುಸ್ಲಿಂ ಸಮುದಾಯದ ಮುಖಂಡರು ಬೇಸರ ಮಾಡಿಕೊಂಡಿದ್ದಾರಲ್ಲ?ಮೈತ್ರಿ ಬಗ್ಗೆ ಪಕ್ಷದ ಮುಸ್ಲಿಂ ಸಮುದಾಯದ ಮುಖಂಡರಾದ ಜಫ್ರುಲ್ಲಾ ಖಾನ್‌, ಫಾರೂಕ್ ಮೊದಲಾದವರನ್ನು ಕೇಳಿಯೇ ತೀರ್ಮಾನ ಕೈಗೊಂಡಿದ್ದೇವೆ. ಅವರನ್ನು ಬಿಟ್ಟು ನಿರ್ಧಾರ ಮಾಡಿಲ್ಲ.ಇಬ್ರಾಹಿಂ ಅವರನ್ನು ಬಿಟ್ಟು ಮೈತ್ರಿ ತೀರ್ಮಾನ ಮಾಡಿದ್ದೀರಲ್ಲವೇ?ಅವರು ಈಗ ಏನೋ ಆಟ ಆಡಲು ಹೋಗಿದ್ದಾರೆ. ಅದರ ಬಗ್ಗೆ ಬಿಡಿ. ನಾನು ಚರ್ಚೆ ಮಾಡಲು ಬಯಸುವುದಿಲ್ಲ. ಅವರ ಬಗ್ಗೆ ಮಾತನಾಡಬಾರದು. ಅವರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ.ನೀವು ಹಿಂದೆ ಮುಸ್ಲಿಂ ಸಮುದಾಯದ ಬಗ್ಗೆ ಅತೀವ ಕಾಳಜಿ ಮತ್ತು ಪ್ರೀತಿ ಹೊಂದಿದ್ದರಲ್ಲ?ನೋಡಿ, ಮುಸ್ಲಿಂರ ಬಗ್ಗೆ ನಾನು ಮುಖ್ಯಮಂತ್ರಿಯಾಗಿ ಅವರಿಗೆ ನ್ಯಾಯ ದೊರಕಿಸಿಕೊಡಲು ಕೆಲಸ ಮಾಡಿದ್ದೇನೆ ಹೊರತು ಮತಗಳ ಆಸೆಯಿಂದ ಅಲ್ಲ. ಈದ್ಗಾ ಮೈದಾನ ವಿಷಯ ಬಂತು. ನನ್ನ ಕರ್ತವ್ಯ ಮಾಡಿದೆ. ಮುಸ್ಲಿಂರಿಗೆ ಮೀಸಲಾತಿ ವಿಷಯ ಬಂತು. ನನ್ನ ಕರ್ತವ್ಯ ಮಾಡಿದೆ. ವಸತಿ ಶಾಲೆ ಮಾಡಬೇಕು ಎಂಬ ವಿಷಯ ಬಂತು. ಮಾಡಿದೆ. ಒಬ್ಬ ಮುಖ್ಯಮಂತ್ರಿಯಾಗಿ ಪ್ರತಿಯೊಂದು ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವುದು ಧರ್ಮ. ನಾನು ಆ ಕೆಲಸ ಮಾಡಿದ್ದೇನೆ.ಬಿಜೆಪಿ ಜತೆ ಕೈಜೋಡಿಸಿದ ಬಳಿಕ ಮುಸ್ಲಿಂ ಸಮುದಾಯಕ್ಕೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆಯೇ?ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಮಿತ್ರ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ಸದಾನಂದಗೌಡರು ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತೇವೆ ಎಂದರು. ಕುಮಾರಸ್ವಾಮಿ ಅವರು ಬಂಧಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದರು. ಎಲ್ಲಿ ಅನ್ಯಾಯ ಆಗುತ್ತದೆಯೋ ಆಗ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆ ಮಾಡುತ್ತದೆ. ಈ ದೇಶವನ್ನು ಬಿಜೆಪಿಯ ಮೋದಿ ಅವರು ಆಳುತ್ತಿದ್ದಾರೆ. ಮುಸ್ಲಿಂರು 35ರಿಂದ 40 ಕೋಟಿಯಷ್ಟು ಇರಬಹುದು. ಅವರೇನು ದೇಶ ಬಿಟ್ಟು ಹೋಗುತ್ತಾರೆಯೇ? ಇಲ್ಲವಲ್ಲ. ಸುಮ್ಮನೆ ಈ ಭಾವನೆ ಎಲ್ಲ.ಜೆಡಿಎಸ್‌ಗೆ ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸುವಷ್ಟು ಸಾಮರ್ಥ್ಯ ಇಲ್ಲವೇ?ನೀವು ಆ ಬಗ್ಗೆ ಪದೇ ಪದೇ ಕೇಳಬಾರದು. ಅದನ್ನು ಬಿಡಿ. ನಾವು ಬಿಜೆಪಿಯೊಂದಿಗೆ ಇದ್ದೇವೆ. ಬಿಜೆಪಿಯೊಂದಿಗೆ ಹೋಗುತ್ತೇವೆ. ಬಿಜೆಪಿಯೊಂದಿಗೆ ಸೇರಿ ಹೋರಾಟ ಮಾಡುತ್ತೇವೆ.ನೀವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆಯೇ?ಇಲ್ಲವೇ ಇಲ್ಲ.ಪ್ರಜ್ವಲ್ ರೇವಣ್ಣ ಹೊರತುಪಡಿಸಿ ನಿಮ್ಮ ಕುಟುಂಬದಿಂದ ಬೇರೆ ಯಾರಾದರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದೇ?ಇಲ್ಲ. ಪ್ರಜ್ವಲ್ ಹಾಲಿ ಸಂಸದರಾಗಿದ್ದಾರೆ. ಅಷ್ಟೇ.ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮಾತು ಕೇಳಿಬರುತ್ತಿದೆ?ಇದೆಲ್ಲ ಕೇವಲ ಊಹಾಪೋಹ. ಈ ರೀತಿಯ ಚರ್ಚೆ ನಡೆದಿದೆ ಎಂದು ಯಾರಾದರೂ ಹೇಳಿದ್ದಾರೆಯೇ? ಆ ರೀತಿಯ ಯಾವ ಚರ್ಚೆಯೂ ನಡೆದಿಲ್ಲ.ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವುದನ್ನು ಒಕ್ಕಲಿಗ ಸಮುದಾಯದ ನಾಯಕರು ತೀವ್ರವಾಗಿ ವಿರೋಧಿಸಿದ್ದಾರಲ್ಲ?ನಮ್ಮ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂದು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಎಲ್ಲ ಪಕ್ಷಗಳ ನಾಯಕರು, ಸಮುದಾಯದ ಸ್ವಾಮೀಜಿಗಳು ಸೇರಿ ಎಲ್ಲರೂ ವಿರೋಧ ಮಾಡಿದ್ದೇವೆ. ಇದರಲ್ಲಿ ಸಂಕೋಚ ಏನೂ ಇಲ್ಲ. ರಾಜ್ಯಸಭೆಯಲ್ಲಿ ಈ ವಿಷಯವಾಗಿ ಚರ್ಚೆ ಮಾಡಲು ನೋಟಿಸ್ ನೀಡಿದ್ದೆ. ಆದರೆ, ಅಧಿವೇಶನ ಹಠಾತ್ತನೇ ಮುಂದೂಡಲ್ಪಟ್ಟಿತು. ಹೀಗಾಗಿ, ಮಾತನಾಡಲು ಸಮಯಾವಕಾಶ ಸಿಗಲಿಲ್ಲ.ಬಿಜೆಪಿಯ ಮಾತೃ ಸಂಸ್ಥೆ ಎಂದೇ ಕರೆಸಿಕೊಳ್ಳುವ ಆರ್‌ಎಸ್‌ಎಸ್‌ ಬಗ್ಗೆ ಏನು ಹೇಳುವಿರಿ?ಯಾರ ಬಗ್ಗೆಯೂ ಮಾತನಾಡುವುದಿಲ್ಲ.

Share this article