ಕನ್ನಡಪ್ರಭ ವಾರ್ತೆ ರಾಮನಗರ
ಈ ಹಿಂದೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಫೈರೋಜ್‌ಪಾಷರವರು ಅಧಿಕಾರ ಹಂಚಿಕೆ ಸೂತ್ರದನ್ವಯ ಅವಧಿ ಮುಕ್ತಾಯವಾದ ಹಿನ್ನೆಲೆ ರಾಜೀನಾಮೆ ಸಲ್ಲಿಸಿದ್ದರು. ಉಳಿದ ಅವಧಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 18ನೇ ವಾರ್ಡಿನ ಸದಸ್ಯ ಮಹಮ್ಮದ್ ಆರೀಫ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಪೌರಾಯುಕ್ತ ಡಾ.ಜಯಣ್ಣರವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಮಹಮ್ಮದ್ ಆರೀಫ್ ಅವರನ್ನು ಅಭಿನಂದಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) , ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡು ಹಿಂದೂಗಳಿಗೆ ಅವಕಾಶ ಸಿಕ್ಕಿರುವುದರಿಂದ ಸಾಮಾಜಿಕ ನ್ಯಾಯ ಮತ್ತು ಯುವಕರಿಗೆ ರಾಜಕೀಯ ಪ್ರಾತಿನಿಧ್ಯ ಕೊಡುವ ಉದ್ದೇಶವಾಗಿದೆ. ಅಲ್ಪಸಂಖ್ಯಾತ ವರ್ಗದಿಂದ ಸದಸ್ಯರಾಗಿರುವ ಮಹಮದ್ ಆರೀಫ್ ಅವರಿಗೆ ನಗರಸಭೆಯ ಎಲ್ಲ ಸದಸ್ಯರ ಸಹಕಾರದೊಂದಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. ಎಲ್ಲರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಮಾದರಿಯಾಗುವಂತಹ ಗುರುತರ ಕೆಲಸವನ್ನು ಆರೀಫ್ ಮಾಡಲಿ ಎಂದು ಶುಭ ಕೋರಿದರು.ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಮಹಮ್ಮದ್ ಆರೀಫ್ ಮಾತನಾಡಿ, ನಗರಸಭೆ ಸ್ಥಾಯಿ ಸಮಿತಿಗೆ ನನ್ನನ್ನು ಅವಿರೋಧ ಆಯ್ಕೆ ಮಾಡಿದ ನಗರಸಭೆ ಸದಸ್ಯರು ಮತ್ತು ಎಲ್ಲ ಮುಖಂಡರಿಗೂ ಕೃತಜ್ಙತೆ ಸಲ್ಲಿಸುತ್ತೇನೆ. ನನಗೆ ಸಿಕ್ಕಿರುವ ಸ್ಥಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಗರಸಭೆಯ 31 ವಾರ್ಡ್ ಗಳನ್ನು ಅಭಿವೃದ್ದಿ ಮಾಡುವ ಹಂಬಲ ನನ್ನಲ್ಲಿದೆ. ಅಧ್ಯಕ್ಷರಾದ ಕೆ.ಶೇಷಾದ್ರಿ ಅವರ ಕನಸಾಗಿರುವ ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ, ಸುಂದರ ನಗರ ನಿರ್ಮಾಣಕ್ಕೆ ಅವರ ಜೊತೆ ಕೈಜೋಡಿಸಿ ಶ್ರಮಿಸುತ್ತೇನೆ ಎಂದು ಹೇಳಿದರು.
ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಮಹಮ್ಮದ್ ಆರೀಫ್ ಆಯ್ಕೆ ಘೋಷಣೆಯಾಗುತ್ತಿದ್ದಂತೆ ನಗರಸಭೆ ಮುಂಭಾಗ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕೆ.ಶೇಷಾದ್ರಿ ಮಾತಿಗೆ ಮಣಿದ ನರಸಿಂಹ
ರಾಮನಗರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಸದಸ್ಯರಾದ ಫೈರೋಜ್ ಪಾಷ ಮತ್ತು ನರಸಿಂಹ ಅವರಿಗೆ ಹಂಚಿಕೆ ಮಾಡಲಾಗಿತ್ತು. ಮೊದಲು ಫೈರೋಜ್ ಪಾಷ ಅಧ್ಯಕ್ಷರಾಗಿ ಅಧಿಕಾರ ನಡೆಸಿ ರಾಜೀನಾಮೆ ಸಲ್ಲಿಸಿದ್ದರು. ಉಳಿದ ಅವಧಿಗೆ 26ನೇ ವಾರ್ಡಿನ ಸದಸ್ಯ ನರಸಿಂಹ (ಗ್ಯಾಸ್ ನರಸಿಂಹ) ಅವರಿಗೆ ಅವಕಾಶ ಕಲ್ಪಿಸುವ ಮಾತುಕತೆ ನಡೆದಿತ್ತು. ಆದರೆ, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಹಿಂದೂಗಳ ಪಾಲಾಗಿರುವುದರಿಂದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸದಸ್ಯರೊಬ್ಬರಿಗೆ ಹಂಚಿಕೆ ಮಾಡುವ ಅನಿವಾರ್ಯತೆ ಬದಲಾದ ರಾಜಕೀಯದಲ್ಲಿ ಸೃಷ್ಟಿಯಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನರಸಿಂಹರವರು ತಮ್ಮ ರಾಜಕೀಯ ಗುರುಗಳಾದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರ ಮಾತಿಗೆ ಮನ್ನಣೆ ನೀಡಿ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದರು ಎನ್ನಲಾಗಿದೆ. ಉಳಿದ ಪೂರ್ಣಾವಧಿವರೆಗೆ ಮಹಮ್ಮದ್ ಆರೀಫ್ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.