ಹಿರಿಯೂರಿಗೆ 67 ಸಾವಿರ ಹೆಕ್ಚೇರು ನೀರಾವರಿ, ಮೊಳಕಾಲ್ಮುರುವಿಗೆ ಒಂದು ಗುಂಟೆ ಇಲ್ಲ. 20 ಕೆರೆಗಳಿಗೆ ಅರ್ಧದಷ್ಟು ಭರ್ತಿ ಮಾಡುವ ಅವಕಾಶ ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಇರಾದೆ ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳಲ್ಲಿ ಭೂಮಿ ತೋಯಿಸುತ್ತಿರುವ ಪ್ರಮಾಣ ಗಮನಿಸಿದರೆ ಸಹಜವಾಗಿಯೇ ಒಡಲುಗಳಲ್ಲಿ ತಾರತಮ್ಯದ ಹೊಗೆಯಾಡುತ್ತದೆ.
ಹಿರಿಯೂರು ತಾಲೂಕಿಗೆ ಬರೋಬ್ಬರಿ 67 ಸಾವಿರ ಹೆಕ್ಟೇರ್‌ಗೆ ಮೈಕ್ರೋ ಇರಿಗೇಷನ್ ಹಾಗೂ 32 ಕೆರೆ ತುಂಬಿಸುವ ಅವಕಾಶ ಕಲ್ಪಿಸಿ ಸಮೃದ್ಧಿತನಗಳ ಪಸರಿಸಲಾಗಿದೆ. ಅಚ್ಚರಿ ಎಂದರೆ ಮೊಳಕಾಲ್ಮೂರು ತಾಲೂಕಿಗೆ ಭದ್ರಾ ಮೇಲ್ದಂಡೆಯಡಿ ಒಂದು ಗುಂಟೆಗೂ ನೀರಾವರಿ ಸೌಲಭ್ಯಗಳಿಲ್ಲ. 20 ಕೆರೆಗಳಿಗೆ ನೀರು ತುಂಬಿಸಿ ಎತ್ತು, ಎಮ್ಮೆ ಮೈ ತೊಳ್ಕಳ್ಳಿ ಎಂಬ ಷರಾ ಬರೆಯಲಾಗಿದೆ.ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಹೋರಾಟ ಆರಂಭವಾದಾಗ ಜಗಳೂರು (ಆಗ ಚಿತ್ರದುರ್ಗ ಜಿಲ್ಲೆಯಲ್ಲಿತ್ತು), ಮೊಳಕಾಲ್ಮುರು, ಚಳ್ಳಕೆರೆ ಈ ಮೂರು ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಅಂಶವ ಪ್ರಧಾನವಾಗಿ ಇರಿಸಿಕೊಳ್ಳಲಾಗಿತ್ತು. ಹೊಳಲ್ಕೆರೆ ತಾಲೂಕು ಮಲೆನಾಡಿನ ಸೆರಗು ಅನ್ನಿಸಿಕೊಂಡಿದ್ದರೆ, ಹೊಸದುರ್ಗ ಕಲ್ಪತರು ನಾಡು(ತೆಂಗು ಕಾರಣಕ್ಕೆ) ಎಂಬ ಖ್ಯಾತಿ ಪಡೆದಿತ್ತು. ಆದರೆ ಮೊಳಕಾಲ್ಮುರು, ಚಳ್ಳಕೆರೆ ತಾಲೂಕುಗಳು ಇಂದಿಗೂ ಬರ, ಬವಣೆ ಎಂದರೆ ಏನು ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿವೆ. ಇಂತಹ ಪ್ರದೇಶಗಳ ಅಭಿವೃದ್ದಿಗೆ, ಇಲ್ಲಿನ ಜನಸಮುದಾಯಗಳ ಏಳಿಗೆಗೆ ಕಟಿ ಬದ್ದರಾಗಬೇಕಾದ ಸರ್ಕಾರ ನೀರು ಕೊಡದೆ ತಾರತಮ್ಯ ಎಸಗಿದೆ ಎಂಬ ಮಾತುಗಳು ವ್ಯಾಪಕಗೊಂಡಿವೆ.
ಮೊಳಕಾಲ್ಮೂರು ತಾಲೂಕಿನಲ್ಲಿರುವ ಏಕಮಾತ್ರ ಜಲಪಾತ್ರೆ ರಂಗಯ್ಯನದುರ್ಗ ಜಲಾಶಯ ತುಂಬಿದ್ದೇ ಅಪರೂಪ. ಈ ಜಲಾಶಯಕ್ಕೆ ಪೂರ್ಣ ಪ್ರಮಾಣದಲ್ಲಿ ಭದ್ರಾ ಮೇಲ್ದಂಡೆಯಡಿ ನೀರು ಒದಗಿಸುವ ಕಾರ್ಯ ನೆರವೇರಿಸಬಹುದಿತ್ತು. ಸಂಗೇನಹಳ್ಳಿ ಕೆರೆ ಮೂಲಕ ಇಂತಹದ್ದೊಂದು ಅವಕಾಶ ಇತ್ತು. ಆದರೆ ಆ ಭಾಗದ ರೈತ ಸಮುದಾಯದ ಉದಾಸೀನ ಹಾಗೂ ಜನಪ್ರತಿನಿಧಿಗಳ ರಾಜಕೀಯ ಇಚ್ಚಾಶಕ್ತಿ ಕೊರತೆ ಕಾರಣಕ್ಕೆ ಸಾಧ್ಯವಾಗದೇ ಹೋಗಿದೆ. ತೀರಾ ಹಿಂದುಳಿದ ಪ್ರದೇಶವಾದ ಮೊಳಕಾಲ್ಮೂರಿಗೆ ಕಣ್ಣೊರೆಸುವ ತಂತ್ರಗಳ ಮಾತ್ರ ಮಾಡಲಾಗಿದ್ದು 20 ಕೆರೆಗಳ ತುಂಬಿಸಿ ಯೋಜನಾ ವ್ಯಾಪ್ತಿಯಲ್ಲಿ ನೀವೂ ಇದ್ದೀರ ಎಂಬ ಸಂದೇಶ ರವಾನೆ ಮಾಡಲಾಗಿದೆ.ಸರ್ಕಾರಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಮೊಳಕಾಲ್ಮುರು ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಬಿತ್ತನೆ ಭೂಮಿ ಇದೆ. 28 ಸಾವಿರ ಹೆಕ್ಟೇರ್ ವಾರ್ಷಿಕ ಬಿತ್ತನೆ ಗುರಿ ನಿಗಧಿಪಡಿಸಲಾಗಿದ್ದು ಮಳೆಯಾಶ್ರಿತದಲ್ಲಿ 24 ಸಾವಿರ ಹೆಕ್ಟೇರ್, ನೀರಾವರಿ 4 ಸಾವಿರ ಹೆಕ್ಟೇರ್‌ವಿನಲ್ಲಿ ಬಿತ್ತನೆಯಾಗುತ್ತಿದೆ. ನದಿ, ಇಲ್ಲವೇ ಜಲಾಶಯದ ಮೂಲದ ಯಾವುದೇ ನೀರಾವರಿ ಸೌಲಭ್ಯ ಇಲ್ಲದ ಕಾರಣ 2504 ಕೊಳವೆ ಬಾವಿಗಳ ಮೂಲಕ ರೈತರು ಕೃಷಿ ತೋಟಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಉಳಿದಂತೆ ರೇಷ್ಮೆ ಸೀರೆ ನೇಯ್ಕಂಡು ಒಂದಿಷ್ಟು ಮಂದಿ ನೇಕಾರರು, ಗುಡ್ಡದಲ್ಲಿಸಿಗುವ ಸೀತಾಫಲ ಮಾರಿಕೊಂಡು ಹಲವು ಜನ ಜೀವನ ಸಾಗಿಸುತ್ತಿದ್ದಾರೆ.
ಭದ್ರಾ ಮೇಲ್ದಂಡೆಯಡಿ ಶೇ.50 ರಷ್ಟು ನೀರಿನ ಪಾಲು ಧಕ್ಕಿಸಿಕೊಂಡಿದ್ದರೂ ಹಿರಿಯೂರಿನ ಜನತೆಗೆ ಮತ್ತೆ ಹೆಚ್ಚುವರಿಯಾಗಿ ನೀರು ಬೇಕು. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. 67 ಸಾವಿರ ಹೆಕ್ಟೇರ್ ನೀರಾವರಿ ಪಡೆದ ಹಿರಿಯೂರಿನ ಸಮೃದ್ದಿ, ಒಂದು ಗುಂಟೆ ಜಮೀನು ತೋಯಿಸಿಕೊಳ್ಳಲು ಸಾಧ್ಯವಾಗದ ಮೊಳಕಾಲ್ಮೂರಿನ ದೌರ್ಭಾಗ್ಯ ತಾಳೆಯಾಗಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ ಜನ.