ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಟಿಎಪಿಸಿಎಂಎಸ್ ಸ್ವಾಧೀನದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಾಗಿರುವ ವ್ಯತ್ಯಾಸದ ಹಣವನ್ನು ನಿಯಮ ಮೀರಿ ಡಿಗ್ರೂಪ್ ನೌಕರರೊಬ್ಬರಿಂದ 90 ಸಾವಿರ ಕಟ್ಟಿಸಿಕೊಳ್ಳಲು ಇಲ್ಲಿನ ಪ್ರಭಾರಿ ಕಾರ್ಯದರ್ಶಿ ಒತ್ತಡ ಹೇರುತ್ತಿದ್ದಾರೆ. ನಿಯಮ ಮೀರಿ ವಾಮಮಾರ್ಗ ಅನುಸರಿಸಿ ನೌಕರನನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ ಕಳೆದ 9 ದಿನಗಳಿಂದಲೂ ದೂರವಿಟ್ಟು ಒತ್ತಡ ತಂತ್ರ ಹೇರಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕೊಳ್ಳೇಗಾಲ ಟಿಎಪಿಸಿಎಂಎಸ್ ಸ್ವಾಧೀನದಲ್ಲಿರುವ ಹನೂರು ಪೆಟ್ರೋಲ್ ಬಂಕ್‌ನಲ್ಲಿ ಕಳೆದ 20 ವರುಷಗಳಿಂದಲೂ ಕೆಲಸ ನಿವರ್ವಹಿಸುತ್ತಿರುವ ಬಿ.ಗುಂಡಾಪುರದ ಚಿನ್ನಸ್ವಾಮಿಯನ್ನು ಈಗ ಕೆಲಸಕ್ಕೂ ಸೇರಿಸಿಕೊಳ್ಳದೆ ಹಾಜರಾತಿ ಪುಸ್ತಕವನ್ನು ನೀಡದೇ 2021ರ ವ್ಯತ್ಯಾಸದ ಹಣವನ್ನು ನೀನು ಕಟ್ಟು ಎಂದು ಮೌಖಿಕವಾಗಿ ಸೂಚಿಸಿದ್ದು ಕೆಲಸಕ್ಕೆ ಬರಬೇಡ ಎಂದು ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ಬಂಕ್‌ನಲ್ಲಿನ 90 ಸಾವಿರ ವ್ಯತ್ಯಾಸಕ್ಕೂ ಚಿನ್ನಸ್ವಾಮಿ ಎಂಬ ಡಿ ಗ್ರೂಪ್ ನೌಕರನಿಗೂ ಏನು ಸಂಬಂಧ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿದ್ದು ನಿಜಕ್ಕೂ ಆತ ತಪ್ಪು ಮಾಡಿದ್ದರೆ ನೋಟಿಸ್ ನೀಡಿ ಹಣ ಪಾವತಿಸಲು ಸೂಚಿಸಬಹುದಿತ್ತು. ಈ ರೀತಿ ಏಕೆ ಪ್ರಭಾರಿ ಕಾರ್ಯದರ್ಶಿ ನಿಯಮ ಮೀರಿ ವರ್ತಿಸುತ್ತಿದ್ದಾರೆ ಎಂಬುದು ಕೆಲ ಸದಸ್ಯರಲ್ಲೆ ಗೊಂದಲ ಹಾಗೂ ಸಂಶಯಕ್ಕೂ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಪ್ರಭಾರಿ ಕಾರ್ಯದರ್ಶಿಗಳೇ ಬಂಕ್ ಉಸ್ತುವಾರಿ ವ್ಯವಸ್ಥಾಪಕರಾಗಿದ್ದು ಇಲ್ಲಿನ ವ್ಯತ್ಯಾಸಕ್ಕೆ ಡಿಗ್ರೂಪ್ ನೌಕರನನ್ನು ಹೊಣೆಗಾರರನ್ನಾಗಿಸಲು ಹೊರಟಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬಂದಿವೆ.ಡಿಗ್ರೂಪ್ ಸಿಬ್ಬಂದಿ ಗೋಗರೆದರೂ ಮನಕರಗಲಿಲ್ಲ!:ಡಿಗ್ರೂಪ್ ನೌಕರ ಚಿನ್ನಸ್ವಾಮಿ ನಾನು ತಪ್ಪು ಮಾಡಿಲ್ಲ, 90 ಸಾವಿರ ನಾನೇಕೆ ಪಾವತಿಸಲಿ, ಯಾರೋ ದುರ್ಬಳಕೆ ಮಾಡಿಕೊಂಡ 2021ರ ಹಣ ನಾನು ಪಾವತಿಸಲು ಸಾಧ್ಯವಿಲ್ಲ. 9 ಸಾವಿರ ಸಂಬಳದಲ್ಲಿ ಅಷ್ಟು ಹಣ ಪಾವತಿ ಸಾಧ್ಯವಿಲ್ಲ ಎಂದು ಮನವಿ ಮಾಡಿದರೂ ಆತನನ್ನು ಏ.1ರಿಂದ ಕೆಲಸಕ್ಕೆ ಸೇರಿಸುತ್ತಿಲ್ಲ, ಹಾಜರಾತಿ ಪುಸ್ತಕ ನೀಡಿಲ್ಲ ಎಂದು ಹೇಳಲಾಗಿದ್ದು ಇದರಿಂದ ಬೇಸತ್ತ ನೌಕರ ಟಿಎಪಿಸಿಎಂಎಸ್ ಅಧ್ಯಕ್ಷ, ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಅಧ್ಯಕ್ಷರು, ಕೆಲ ಸದಸ್ಯರ ಬಳಿ ಈತ ನೋವು ತೋಡಿಕೊಂಡರೂ ಕೆಲವರ ಮನ ಕರಗಿಲ್ಲ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಅಷ್ಟಕ್ಕೂ ಅಲ್ಲಿನ ವ್ಯತ್ಯಾಸದ ಹಣ 2021ರಲ್ಲಿನ ಆಡಿಟ್ ನಡೆಸಿದ ವೇಳೆ ಕಂಡು ಬಂದಿಲ್ಲ, ಹಾಗಿದ್ದರೂ ಈಗ ಯಾವ ರೀತಿ ವ್ಯತ್ಯಾಸವಾಗಿದೆ ಎಂಬುದು ನಾನಾ ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದು ನೌಕರ ಚಿನ್ನಸ್ವಾಮಿಯನ್ನು ನಿಯಮಾನುಸಾರ ಕಾಯಂ ಮಾಡಲು ಇಷ್ಟವಿಲ್ಲದ ಕಾರಣ, ತಮಗಿಷ್ಟ ಬಂದವರನ್ನು ಬೋರ್ಡ್ ನೇಮಿಸಿಕೊಳ್ಳಲು ಈ ತಂತ್ರ ಅನುಸರಿಸುತ್ತಿರಬಹುದು ಎಂದು ಸಾಕಷ್ಟು ಚರ್ಚೆಯಾಗುತ್ತಿದ್ದು ಮುಂದಾಗುವ ಬೆಳವಣಿಗೆಗೆ ಕಾದು ನೋಡಬೇಕಿದೆ.ಕೊಳ್ಳೇಗಾಲ ಟಿಎಪಿಸಿಎಂಎಸ್ ವಶದಲ್ಲಿರುವ ಬಂಕ್‌ನಲ್ಲಿ 2021ರಲ್ಲಿ ನಡೆದಿರುವ ವ್ಯತ್ಯಾಸದ ಪ್ರಕರಣಕ್ಕೆ ಹೇಗೆ ಡಿಗ್ರೂಪ್ ನೌಕರನ್ನು ಹೊಣೆಗಾರನ್ನಾಗಿಸಲು ಮುಂದಾಗಿರುವುದು ಸರಿಯಲ್ಲ. ಏಕೆ ಆತನನ್ನು ಕೆಲಸಕ್ಕೆ ಸೇರಿಸುತ್ತಿಲ್ಲ ಎಂದು ಪ್ರಭಾರ ಕಾರ್ಯದರ್ಶಿಗಳಿಂದ ಸಮಜಾಯಿಸಿ ಕೋರುತ್ತೇನೆ. -ಜ್ಯೋತಿ ರಾಜೇ ಅರಸ್, ಉಪನಿಬಂಧಕರು, ಸಹಕಾರಿ ಇಲಾಖೆ ಚಾ.ನಗರ 2021ರಲ್ಲಿನ ವ್ಯತ್ಯಾಸಕ್ಕೂ ಡಿಗ್ರೂಪ್ ನೌಕರ ಚಿನ್ನಸ್ವಾಮಿಗೂ ಸಂಬಂಧವಿಲ್ಲ, ಒಂದು ವೇಳೆ ಆತನಿಂದಲೇ ವ್ಯತ್ಯಾಸವಾಗಿದೆ ಎಂಬುದಕ್ಕೆ ದಾಖಲೆಗಳ ಸಮೇತ ಪ್ರಭಾರಿ ಕಾರ್ಯದರ್ಶಿ ನೋಟಿಸ್ ನೀಡಬೇಕು, ಅದನ್ನು ಬಿಟ್ಟು ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ, ಹಾಜರಾತಿ ಪುಸ್ತಕ ನೀಡದೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ, ಈ ಬೆಳವಣಿಗೆ ಮುಂದುವರೆದರೆ ಪ್ರತಿಭಟನೆ ನಡೆಸಬೇಕಾಗುತ್ತದೆ -ಪರಶಿವ. ಟಿಎಪಿಸಿಎಂಎಸ್ ಸೊಸೈಟಿಯ ಸದಸ್ಯ, ಹೋರಾಟಗಾರ
ನೌಕರ ಚಿನ್ನಸ್ವಾಮಿ ಕೆಲಸಕ್ಕೆ ಸೇರಿಸುತ್ತಿಲ್ಲ. ಬಂಕ್‌ನಲ್ಲಿ ವ್ಯತ್ಸಾಸವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಪೆಟ್ರೋಲ್ ಬಂಕ್‌ನಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಈಗಿನ ಪ್ರಭಾರಿ ಕಾರ್ಯದರ್ಶಿ ಲಿಂಗರಾಜು. ಹಾಗಾಗಿ ಅಲ್ಲಿನ ವ್ಯತ್ಯಾಸಕ್ಕೆ ಲಿಂಗರಾಜು ಅವರೇ ಹೊಣೆ, ಹಾಗಾಗಿ ಅವರನ್ನೇ ಹೊಣೆಗಾರರನ್ನಾಗಿಸಿ ಕ್ರಮಕೈಗೊಳ್ಳಬೇಕಾಗುತ್ತದೆ. ಈ ಸಂಬಂಧ ಇನ್ನು ಹೆಚ್ಚಿನ ಮಾಹಿತಿ ಪಡೆದು ಈ ಸಂಬಂಧ ಪ್ರತಿಕ್ರಿಯಿಸುವೆ. -ಚಾಮರಾಜು. ಟಿಎಪಿಸಿಎಂಎಸ್ ನಿರ್ದೇಶಕ