ಗುಡಿಬಂಡೆ ಡಿಸಿಸಿ ಬ್ಯಾಂಕ್ ನಲ್ಲಿ ₹1.5 ಕೋಟಿ ನಾಪತ್ತೆ

KannadaprabhaNewsNetwork | Published : Feb 16, 2024 1:51 AM

ಸಾರಾಂಶ

ಬ್ಯಾಂಕ್‌ನ ಸಿಇಒ ಪ್ರಕಾರ, ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ.ಪೂರ್ಣ ಪ್ರಮಾಣದ ಅಂಕಿಅಂಶಗಳನ್ನು ಪರಿಶೀಲನೆ ಮುಗಿದ ಕೂಡಲೇ ಮಾಹಿತಿ ಬಹಿರಂಗಪಡಿಸಲಾಗುವುದು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಪಟ್ಟಣದಲ್ಲಿರುವ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಲ್ಲಿ ಸುಮಾರು ಒಂದೂವರೆ ಕೋಟಿ ರುಪಾಯಿ ನಾಪತ್ತೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ಯಾಂಕ್ ನ ಸಿಇಒ ಡಾ.ಶಂಕರ್ ರವರು ಬ್ಯಾಂಕ್ ಗೆ ಗುರುವಾರ ಆಗಮಿಸಿ ಪರಿಶೀಲನೆ ನಡೆಸಿದರು.

ಗುಡಿಬಂಡೆ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದನ್ನು ಅರಿತ ಅಧಿಕಾರಿಗಳು ಬ್ಯಾಂಕ್ಗೆ ಆಗಮಿಸಿ ಹಣದ ಎಣಿಕೆ ನಡೆಸಿದ್ದಾರೆ.

ಕ್ಯಾಶಿಯರ್‌ ವಿರುದ್ಧ ಅಧಿಕಾರಿಗಳಿಗೆ ಪತ್ರ

ಈ ಕುರಿತು ಡಿಸಿಸಿ ಬ್ಯಾಂಕ್ ಸಿಇಒ ಡಾ.ಶಂಕರ್ ಮಾತನಾಡಿ, ಪ್ರಕರಣ ಕುರಿತು ಫೆ.13 ರಂದು ಗುಡಿಬಂಡೆ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಪತ್ರ ಬರೆದಿದ್ದರು. ಅದರಲ್ಲಿ ಕ್ಯಾಶಿಯರ್ ಅನಿಲ್ ಎಂಬುವವರು ಫೆ.7 ರ ಮಧ್ಯಾಹ್ನ ವೈಯುಕ್ತಿಕ ಕೆಲಸದ ನಿಮಿತ್ತ ಹೋಗುತ್ತೇನೆ ಎಂದು ಹೋದವರು ಫೆ.12 ಆದರೂ ಸಹ ಬಂದಿರುವುದಿಲ್ಲ. ಲಾಕರ್ ಕೀ ಸಹ ತೆಗೆದುಕೊಂಡು ಹೋಗಿದ್ದಾರೆ. ಹಣಕಾಸಿನ ದುರುಪಯೋಗ ಆಗಿರುವ ಬಗ್ಗೆ ಅನುಮಾನ ಇದೆ ಎಂದು ಪತ್ರದಲ್ಲಿ ವಿವಿರಿಸಿದ್ದಾರೆ ಎಂದರು.

ಈ ಪತ್ರದ ಮೇರೆಗೆ ನಾವು ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದು, ಮೇಲಧಿಕಾರಿಗಳ ಸೂಚನೆ ಮೇರೆಗೆ ಕಾನೂನು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ. ಪೂರ್ಣ ಪ್ರಮಾಣದ ಅಂಕಿಅಂಶಗಳನ್ನು ಪರಿಶೀಲನೆ ಮುಗಿದ ಕೂಡಲೇ ಮಾಹಿತಿ ಬಹಿರಂಗಪಡಿಸಲಾಗುವುದು. ಜೊತೆಗೆ ಖಾತೆದಾರರು, ಷೇರುದಾರರು ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಇಂದು ರೈತಸಂಘದ ಪ್ರತಿಭಟನೆ

ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ಡಿಸಿಸಿ ಬ್ಯಾಂಕ್‌ನಲ್ಲಿ ಹಣ ದುರುಪಯೋಗ ಮಾಡಿದವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ಹೂಡಿ, ಅವರಿಂದ ಹಣ ವಸೂಲಿ ಮಾಡಬೇಕು. ಈ ಕುರಿತು ಒತ್ತಾಯಿಸಲು ರೈತ ಸಂಘದ ವತಿಯಿಂದ ಫೆ.16 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

.

Share this article