ಬ್ಯಾಕೋಡು ನಾರಾಯಣ ಗುರು ಸಹಕಾರಿ ಬ್ಯಾಂಕ್‌ನಲ್ಲಿ ಹಣ ಕಳವು

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಸಾಗರದ ಕರೂರು ಹೋಬಳಿಯಲ್ಲಿ ದಿನೇದಿನೆ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಬ್ಯಾಕೋಡು ಗ್ರಾಮದ ನಾರಾಯಣಗುರು ಸಹಕಾರಿ ಬ್ಯಾಂಕಿನಲ್ಲಿ ಭಾನುವಾರ ತಡರಾತ್ರಿ ಕಳ್ಳರು ಕೈ ಚಳಕ ಮೆರೆದು, ₹1 ಲಕ್ಷಕ್ಕೂ ಅಧಿಕ ಮೊತ್ತದ ನಗದು ದೋಚಿದ್ದಾರೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಕರೂರು ಹೋಬಳಿಯಲ್ಲಿ ದಿನೇದಿನೆ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಸ್ಥಳೀಯ ನಾರಾಯಣಗುರು ಸಹಕಾರಿ ಬ್ಯಾಂಕಿನಲ್ಲಿ ಭಾನುವಾರ ತಡರಾತ್ರಿ ಕಳ್ಳರು ₹1 ಲಕ್ಷಕ್ಕೂ ಅಧಿಕ ಮೊತ್ತದ ನಗದು ದೋಚಿರುವ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಸಾಗರ ಉಪ ಪೊಲೀಸ್ ವರಿಷ್ಠಾಧಿಕಾರಿ, ಗೋಪಾಲಕೃಷ್ಣ ಟಿ. ನಾಯಕ್, ಕಾರ್ಗಲ್ ಸಬ್ ಇನ್‌ಸ್ಪೆಕ್ಟರ್‌ ಹೊಳಿಬಸಪ್ಪ ಹೋಳಿ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಓಂಕಾರ್ ಕಾನುಗೊಡು, ಸಿಇಒ ನಾಗರಾಜ್ ಹುರುಳಿ, ಮತ್ತು ಕೆಲವು ಷೇರುದಾರರು ಹಾಜರಿದ್ದರು. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವ್ಯಾಪ್ತಿಯಲ್ಲಿ ಹಿಂದೆ ಸರಣಿ ಕಳವು ಪ್ರಕರಣ ನಡೆದಾಗ ಸಸಿಗೊಳ್ಳಿ, ತುಮರಿ, ಹಿನ್ಸೋಡಿ ಇನ್ನಿತರ ಕಡೆಗಳಲ್ಲಿ ಪೊಲೀಸ್ ಇಲಾಖೆಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಹಲವು ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಸುಮಾರು ಐದು ವರ್ಷಗಳಲ್ಲಿ ಜೋಡಿ ಕೊಲೆ, ಕಳವು ಪ್ರಕರಣ ಸೇರಿದಂತೆ ಹತ್ತಾರು ಪ್ರಕರಣಗಳು ನಡೆದಿವೆ. ಪೊಲೀಸ್ ಇಲಾಖೆ ಪ್ರಕರಣಗಳನ್ನು ಬೇಧಿಸುವಲ್ಲಿ ವಿಫಲವಾಗಿದೆ. ಈಗ ಬ್ಯಾಂಕ್‌ನಲ್ಲಿ ನಗದು ಕಳವು ಘಟನೆಯಿಂದ ಷೇರುದಾರರು ಸೇರಿದಂತೆ ಸ್ಥಳೀಯರಲ್ಲಿ ತೀವ್ರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ಬ್ಯಾಕೋಡಿನ ಸುಂದರ್ ಶೇಟ್ ದಂಪತಿ ಕೊಲೆಯಾದ ಸಂದರ್ಭ ಪೊಲೀಸ್ ಇಲಾಖೆ ಬ್ಯಾಕೋಡ್‌ಗೆ ಗಸ್ತುವಾಹನ ನೀಡಿತ್ತು. ಆದರೆ, ಕೆಲ ದಿನಗಳ ನಂತರ ಗಸ್ತು ವಾಹನವನ್ನು ಹಿಂಪಡೆದುಕೊಳ್ಳಲಾಗಿದೆ. ಈಗ ಬ್ಯಾಂಕ್‌ನಲ್ಲಿ ನಗದು ಕಳವು ಘಟನೆ ನಡೆದಿದ್ದು, ಇಲಾಖೆ ಗಸ್ತು ವಾಹನವನ್ನು ಮರಳಿಸಿ, ಭದ್ರತಾ ವ್ಯವಸ್ಥೆ ಚುರುಕುಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

- - -

ಟಾಪ್‌ ಕೋಟ್‌ ಮೂನಾಲ್ಕು ತಿಂಗಳಿನಿಂದ ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಅನುಮಾನಾಸ್ಪದ ವ್ಯಕ್ತಿಗಳನ್ನು, ಮೊಬೈಲ್ ಟವರ್ ಹಾಗೂ ಇನ್ನಿತರ ಸೌಲಭ್ಯಗಳ ಆದರಗಳ ಮೇಲೆ ತನಿಖೆ ನಡೆಸಲಾಗುವುದು. ಜೋಡಿ ಕೊಲೆ ಸೇರಿದಂತೆ ಹಲವು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು

- ಗೋಪಾಲಕೃಷ್ಣ ಟಿ ನಾಯಕ್. ಡಿವೈಎಸ್‌ಪಿ, ಸಾಗರ.

- - - -18ಬ್ಯಾಕೋಡು01:

Share this article