ದುಪ್ಪಟ್ಟು ಹಣ ಕೊಟ್ಟರಷ್ಟೇ ಟ್ಯಾಂಕರ್ ನೀರು!

KannadaprabhaNewsNetwork | Published : Mar 10, 2024 1:31 AM

ಸಾರಾಂಶ

ಬರ ಪರಿಸ್ಥಿತಿಯಿಂದ ನಗರದಲ್ಲಿನ ಲಕ್ಷಾಂತರ ಸಂಖ್ಯೆಯ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬತ್ತಿ ಹೋಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಟ್ಯಾಂಕರ್‌ ಮಾಲೀಕರು ಇದೀಗ ಸಾರ್ವಜನಿಕ ರಿಂದ ಬೇಕಾಬಿಟ್ಟಿ ಹಣ ವಸೂಲಿಗಿಳಿದಿದ್ದಾರೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್‌ಗಳಿಗೆ ದರ ನಿಗದಿ ಪಡಿಸಿ ಆದೇಶಿಸಿದರೂ, ಸಾರ್ವಜನಿಕರ ಸುಲಿಗೆ ನಿಂತಿಲ್ಲ. ದುಪ್ಪಟ್ಟು ಹಣ ಕೊಟ್ಟರೆ ಮಾತ್ರ ಜೀವಜಲ ಎಂಬ ದಾರುಣ ಸ್ಥಿತಿ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ.

ಬರ ಪರಿಸ್ಥಿತಿಯಿಂದ ನಗರದಲ್ಲಿನ ಲಕ್ಷಾಂತರ ಸಂಖ್ಯೆಯ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬತ್ತಿ ಹೋಗಿವೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಟ್ಯಾಂಕರ್‌ ಮಾಲೀಕರು ಸಾರ್ವಜನಿಕರಿಂದ ಬೇಕಾ ಬಿಟ್ಟಿ ಹಣ ವಸೂಲಿಗಿಳಿದಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ನೀರಿನ ಟ್ಯಾಂಕರ್‌ ಗಳಿಗೆ ದರ ನಿಗದಿಪಡಿಸಿ ಆದೇಶಿಸಿದೆ. ಆದರೆ, ಈ ಆದೇಶವು ಕಾಗದಕ್ಕೆ ಸೀಮಿತವಾಗಿದ್ದು, ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಟ್ಯಾಂಕರ್‌ ನೀರಿನ ದರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಆಯಾ ಬಡಾವಣೆ, ಪ್ರದೇಶದಲ್ಲಿನ ನೀರಿನ ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ಟ್ಯಾಂಕರ್‌ ಮಾಲೀಕರು ಹಣ ವಸೂಲಿ ಮಾಡುತ್ತಿದ್ದಾರೆ. ಕೆಲವು ಕಡೆ 6 ಸಾವಿರ ಲೀಟರ್‌ಗೆ ಒಂದು ಸಾವಿರ ರು. ವಸೂಲಿ ಮಾಡಿದರೆ, ಸಮಸ್ಯೆ ಹೆಚ್ಚಾಗಿರುವ ಕಡೆ 2 ರಿಂದ 3 ಸಾವಿರ ರು.ವರೆಗೆ ಇಂದಿಗೂ ರಾಜಾರೋಷವಾಗಿ ವಸೂಲಿ ಮಾಡಲಾಗುತ್ತಿದೆ.ಸರ್ಕಾರದ ದರಕ್ಕೆ ನೀರಿಲ್ಲ:

ಬೆಂಗಳೂರು ನಗರ ಜಿಲ್ಲಾಡಳಿವು 6 ಸಾವಿರ ಲೀಟರ್‌ ಟ್ಯಾಂಕರ್‌ಗೆ 600 ರಿಂದ 750 ರು. ದರ ನಿಗದಿ ಪಡಿಸಿದೆ. ಈ ದರಕ್ಕೆ ನೀರು ಪೂರೈಕೆ ಮಾಡುವಂತೆ ಸಾರ್ವಜನಿಕರು ಕೇಳಿದರೆ, ಆ ದರಕ್ಕೆ ನಮ್ಮ ಬಳಿ ನೀರು ಇಲ್ಲ. ಟ್ಯಾಂಕರ್‌ ಸಹ ಇಲ್ಲ ಎಂದು ಟ್ಯಾಂಕರ್ ಮಾಲೀಕರು ಹೇಳುತ್ತಿದ್ದಾರೆ.

ವಾರಗಟ್ಟಲೇ ಕಾಯಬೇಕು: ಟ್ಯಾಂಕರ್‌ ಮಾಲೀಕರು ನಿಗದಿ ಪಡಿಸಿದ ದುಪಟ್ಟು ದರ ಕೊಟ್ಟರೂ ಗ್ರಾಹಕರಿಗೆ ತಕ್ಷಣ ನೀರು ಪೂರೈಕೆ ಮಾಡುತ್ತಿಲ್ಲ. ಕೆಲವು ಕಡೆ ಕನಿಷ್ಠ 2 ರಿಂದ ಒಂದು ವಾರದ ವರೆಗೆ ಕಾಯಬೇಕಾದ ಸ್ಥಿತಿ ಇದೆ. ತಕ್ಷಣ ನೀರು ಬೇಕಾದರೆ ಅದಕ್ಕೆ ಬೇರೆ ಮೊತ್ತದ ಹಣವನ್ನು ನೀಡಬೇಕಾಗಿದೆ.ಆದೇಶದಲ್ಲಿ ಷರತ್ತುಗಳಿಲ್ಲ, ಕ್ರಮದ ಬಗ್ಗೆ ಎಚ್ಚರಿಕೆ ಇಲ್ಲ: ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ನೀರಿನ ಟ್ಯಾಂಕರ್‌ ದರ ನಿಗದಿ ಪಡಿಸಿ ಹೊರಡಿಸಿರುವ ಆದೇಶದಲ್ಲಿ ಟ್ಯಾಂಕರ್‌ ಮಾಲೀಕರಿಗೆ ಕಡ್ಡಾಯವಾಗಿ ಅನುಸರಿಸುವ ಷರತ್ತು ವಿಧಿಸಿಲ್ಲ. ಜತೆಗೆ, ಹೆಚ್ಚಿನ ಹಣ ವಸೂಲಿ ಮಾಡುವ ಟ್ಯಾಂಕರ್ ಮಾಲೀಕರ ವಿರುದ್ಧ ಕೈಗೊಳ್ಳಬೇಕಾದ ಕ್ರಮಕ್ಕೆ ಉಲ್ಲೇಖಿಸಿಲ್ಲ. ಇನ್ನು ದುಪಟ್ಟು ದರ ವಸೂಲಿ ಮಾಡುವ ಟ್ಯಾಂಕರ್‌ ಮಾಲೀಕರ ವಿರುದ್ಧ ಯಾರಿಗೆ ದೂರು ನೀಡಬೇಕು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಈ ಆದೇಶದಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗಿಲ್ಲ ಎಂಬುದಂತು ಸ್ಪಷ್ಟವಾಗಿದೆ.ಎಸಿ ರೂಂನಲ್ಲಿ ದರ ನಿಗದಿ: ನೀರಿನ ಟ್ಯಾಂಕರ್‌ ದರ ನಿಗದಿ ಪಡಿಸುವುದಕ್ಕೆ ಬಿಬಿಎಂಪಿ, ಜಲಮಂಡಳಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮೂರು ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಟ್ಯಾಂಕರ್ ಮಾಲಿಕರು ತಮ್ಮ ದರ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದರು. ಆದರೆ, ಅದನ್ನು ಪರಿಗಣಿಸದೇ ಎಸಿ ರೂಂನಲ್ಲಿ ಕುಳಿತು ದರ ನಿಗದಿ ಪಡಿಸಿ ಆದೇಶಿಸಿದ್ದಾರೆ. ಅಧಿಕಾರಿಗಳು ನಿಗದಿ ಪಡಿಸಿದ ದರಕ್ಕೆ ನೀರು ಪೂರೈಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನೀರಿನ ಟ್ಯಾಂಕರ್ ಮಾಲಿಕರ ಸಂಘದ ಪ್ರತಿನಿದಿಗಳು ಮಾಹಿತಿ ನೀಡಿದ್ದಾರೆ.

ನೀರಿನ ಸಮಸ್ಯೆ ಹೆಚ್ಚಾದ ಮೇಲೆ 20 ನಿಮಿಷಕ್ಕೆ ಭರ್ತಿಯಾಗುತ್ತಿದ್ದ ಟ್ಯಾಂಕರ್ ಈಗ 60 ರಿಂದ 90 ನಿಮಿಷ ವಾಗುತ್ತಿದೆ. ಕೊಳವೆ ಬಾವಿ ಮಾಲೀಕರಿಗೆ ಪ್ರತಿ ಟ್ಯಾಂಕರ್‌ಗೆ ₹300 ರಿಂದ 350 ನೀಡಬೇಕಿದೆ. ಸರ್ಕಾರ ನಿಗದಿ ಪಡಿಸಿದ ದರಕ್ಕೆ ಹೇಗೆ ನೀರು ಪೂರೈಕೆ ಮಾಡಬೇಕು ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ್ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದಪ್ಪಾಜಿ ಹೇಳಿದರು.

Share this article