ಕನ್ನಡಪ್ರಭ ವಾರ್ತೆ ಮೂಡಲಗಿ
ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿಯ ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವವಾಗದಂತೆ ಕೆಲಸ ಮಾಡುವಂತೆ ಸೂಚಿಸಿದರು. ಈಗಾಗಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸಿರುವುದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೂ ಸಹ ಮೂಡಲಗಿ ಪುರಸಭೆಯ ವ್ಯಾಪ್ತಿಯ ಸಾರ್ವಜನಿಕರಿಗೆ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚಿಸಿದರು.
ಕುಡಿವ ನೀರಿನ ಸಮಸ್ಯೆ ಕುರಿತು ಪ್ರತಿ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಇ- ಖಾತಾ ಅಭಿಯಾನವೂ ಚಾಲನೆಯಲ್ಲಿದೆ. ಇಲ್ಲಿಯತನಕ ಸುಮಾರು ೫೩೮ ಅರ್ಜಿಗಳು ನೋಂದಣಿಯಾಗಿವೆ. ಇದರಿಂದ ಸುಮಾರು ₹೨.೫೦ ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ಸರಕಾರದ ಅನುದಾನವು ಬಿಡುಗಡೆಯಾದರೆ ಮೂಡಲಗಿ ಪಟ್ಟಣದಲ್ಲಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗುತ್ತಿದೆ. ಅಂದಾಜು ₹೫ ಕೋಟಿ ವೆಚ್ಚದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸುಧಾರಿಸಲಾಗುವುದು ಎಂದರು.ಕಳೆದ ಎರಡು ವರ್ಷಗಳಿಂದ ಪುರಸಭೆಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಯಾವ ಅನುದಾನವೂ ಬಂದಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ರಸ್ತೆಗಳ ಸುಧಾರಣೆಗೆ ಅನುದಾನ ನೀಡುವಂತೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮೂಡಲಗಿ ಪಟ್ಟಣವು ದಿನೇ ದಿನೇ ಬೆಳೆಯುತ್ತಿದೆ. ಹೀಗಾಗಿ ಜನದಟ್ಟಣೆಯಾಗುತ್ತಿದೆ. ಕೂಡಲೇ ಪೊಲೀಸ್ ಅಧಿಕಾರಿಗಳು ಸಂಚಾರ ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಮೂಡಲಗಿ ತಹಸೀಲ್ದಾರ್ ಶಿವಾನಂದ ಬಬಲಿ, ಪುರಸಭೆಯ ಮುಖ್ಯಾಧಿಕಾರಿ ತುಕಾರಾಂ ಮಾದರ, ತಾಪಂ ಇಒ ಚಿನ್ನನ್ನವರ, ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.