ಬ್ಯಾಡಗಿ: ಸನಾತನ ಪರಂಪರೆ ಹಾಗೂ ಧಾರ್ಮಿಕ ಇತಿಹಾಸ ಹೊಂದಿರುವ ರಾಷ್ಟ್ರದಲ್ಲಿ ಮಠಾಧೀಶರು ಹಾಗೂ ಸಾಧು ಸಂತರು ತ್ಯಾಗದ ಮೂಲಕ ವಿಶಿಷ್ಟ ಕೊಡುಗೆ ನೀಡಿದ್ದಾರೆ. ನಾವೆಲ್ಲರೂ ಅವರನ್ನು ಸ್ಮರಿಸುವ ಮೂಲಕ ಮಾರ್ಗದರ್ಶನ ಪಡೆಯಬೇಕಿದೆ ಎಂದು ಬಾಳೆಹೊನ್ನೂರು ರಂಭಾಪುರಿಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯಶ್ರೀಗಳು ತಿಳಿಸಿದರು.
ಪಟ್ಟಣದ ಶ್ರೀ ಶನೀಶ್ವರಸ್ವಾಮಿ ಮಂದಿರದಲ್ಲಿ ಮಂಗಳವಾರ ಜರುಗಿದ ಆರನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮ ಅಂಗವಾಗಿ ಕಳಸಾರೋಹಣ ಹಾಗೂ ಧರ್ಮಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ದೇಶ, ನಾಡು ವಿಶ್ವದಲ್ಲೆಡೆದ ದೊಡ್ಡ ಪರಂಪರೆ ಮತ್ತು ಸಂಸ್ಕೃತಿಯಿಂದ ಪ್ರಸಿದ್ಧಿ ಪಡೆದಿದ್ದು, ಮಹಾನ ಸಾಧಕರು ಜನ್ಮ ತಾಳಿದ್ದಾರೆ, ಇಲ್ಲಿ ಮಠ, ಮಂದಿರ ಹಾಗೂ ಋಷಿಕೇಂದ್ರಗಳು ನಾಡಿನ ಜನರಿಗೆ ಸಂಸ್ಕೃತಿ, ಸಂಸ್ಕಾರ ಬಿತ್ತಿವೆ, ಪರಿಣಾಮ ಸಾಮಾಜಿಕ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಇಂತಹ ಧಾರ್ಮಿಕ ಪರಂಪರೆಗೆ ಅಳಿವುಉಳಿವು ಕುರಿತು ಸಮಗ್ರ ಚಿಂತನೆ ಜರುಗಬೇಕಿದೆ. ವಾಸ್ತವ ಧರ್ಮ ಸ್ಥಿತಿಗತಿ ಕುರಿತು ನಾವೆಲ್ಲರೂ ಚಿಂತನೆ ಮಾಡದಿದ್ದಲ್ಲಿ ನಾವು ಗಂಡಾಂತರ ಎದುರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಗೃತಿ ಹಾಗೂ ಧರ್ಮ ಕಾರ್ಯಗಳನ್ನು ಆಯೋಜಿಸಬೇಕಿದೆ ಎಂದರು.
ರಾಷ್ಟ್ರಿಯ ಮಟ್ಟದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಬ್ಯಾಡಗಿ ಖ್ಯಾತಿಯಾದಂತೆ ಇಲ್ಲಿ ಧರ್ಮರಕ್ಷಣೆಗೆ ಕೂಡ ವಿಶೇಷ ಒತ್ತು ನೀಡಲಾಗಿದೆ. ಕುಮಾರೇಶ್ವರ ಧಾರ್ಮಿಕ ಪಾಠಶಾಲೆ, ಮಂದಿರಗಳು, ದೇವಸ್ಥಾನಗಳು ಹಾಗೂ ವಿವಿಧ ಧರ್ಮ ಕೇಂದ್ರಗಳು ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ. ವಿವಿಧ ಕಾರ್ಯಕ್ರಮಗಳಲ್ಲಿ ಮಠಾಧೀಶರು ಆಗಾಗ ಧರ್ಮ ಜಾಗೃತಿ, ಸಂಸ್ಕೃತಿಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ಶನೀಶ್ವರ ದೇವಮಂದಿರ ನಿರ್ಮಿಸಿ, ಕಳಸಾರೋಹಣ ಮೂಲಕ ದೇವಸ್ಥಾನ ವ್ಯವಸ್ಥಾಪಕರು ದಾನಿಗಳು ದೊಡ್ಡ ಕಾರ್ಯಕ್ರಮ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಿತ್ಯವೂ ಇಲ್ಲಿ ಭಗವಂತನ ಆರಾಧನೆ ನಡೆಯಲಿ ಎಂದು ಆಶೀರ್ವಚನದಲ್ಲಿ ತಿಳಿಸಿದರು.ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಪಂಚಪೀಠಗಳು ದೇಶದಲ್ಲಿ ಹಿಂದೂ ಪರಂಪರೆಯನ್ನು ಮುನ್ನೆಡೆಸಿಕೊಂಡು ಸರ್ವಧರ್ಮಿಯರಿಗೆ ಧಾರ್ಮಿಕ ಸೇವೆ ನೀಡುತ್ತಿವೆ ಎಂದರು.
ಧರ್ಮಸಭೆಯಲ್ಲಿ ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯರು, ಮಡ್ಲೂರಿನ ಮುರುಘರಾಜೇಂದ್ರಶ್ರೀಗಳು, ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನಶ್ರೀಗಳು, ರಾಚಯ್ಯಸ್ವಾಮಿಗಳು ಓದಿಸೋಮಠ, ಮಂಜಯ್ಯಶಾಸ್ತ್ರಿ ಸಾನಿಧ್ಯ ವಹಿಸಿದ್ದರು. ಶನೀಶ್ವರಮಂದಿರ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಕಾರಗಿ ಅಧ್ಯಕತೆ ವಹಿಸಿದ್ದರು. ಅರಣ್ಯ ಅಭಿವೃದ್ಧಿ ನಿಗಮ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ನ್ಯಾಯಾಧೀಶರಾದ ಶಂಕರ ಕಲ್ಕಣಿ, ಎಸ್.ಟಿ.ಸತೀಶ, ವರ್ತಕ ಲಕ್ಷ್ಮಿನಾರಾಯಣ ಮೇಲಗಿರಿ, ದುರಗಪ್ಪ ಪಾದ್ರೆ, ಡಾ.ಪ್ರೇಮಾನಂದ ಲಕ್ಕಣ್ಣನವರ ಇತರರಿದ್ದರು.