ವಿಪಕ್ಷ ನಾಯಕರು, ಸಂಸದರ ಮೈಕ್ರೋಫೋನ್‌ಗಳನ್ನು ಆಫ್ ಮಾಡಿಸುವ ಮೂಲಕ ಕೇಂದ್ರ ಸರ್ಕಾರ ಏಕಸ್ವಾಮ್ಯದ ಅಧಿಕಾರ ಚಲಾಯಿಸುತ್ತಿದೆ ಎಂದು ದಾವಣಗೆರೆ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ದಾವಣಗೆರೆ : ಲೋಕಸಭೆಯಲ್ಲಿ ಉಪ ಸಭಾಪತಿ ನೇಮಿಸದೇ, ವಿಪಕ್ಷ ನಾಯಕರಿಗೆ ಸದನದಲ್ಲಿ ಚರ್ಚಿಸಲು, ಮಾತನಾಡಲು ಅವಕಾಶವನ್ನೇ ಕೊಡದೇ, ವಿಪಕ್ಷ ನಾಯಕರು, ಸಂಸದರ ಮೈಕ್ರೋಫೋನ್‌ಗಳನ್ನು ಆಫ್ ಮಾಡಿಸುವ ಮೂಲಕ ಕೇಂದ್ರ ಸರ್ಕಾರ ಏಕಸ್ವಾಮ್ಯದ ಅಧಿಕಾರ ಚಲಾಯಿಸುತ್ತಿದೆ ಎಂದು ದಾವಣಗೆರೆ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೀಯ ಕಾರ್ಯವಿಧಾನಗಳು, ಪ್ರಜಾಪ್ರಭುತ್ವದ ನಿಯಮಗಳ ನಿರ್ಲಕ್ಷ್ಯಿಸುವ ಮೂಲಕ ವಿಪಕ್ಷ ನಾಯಕರು, ವಿಪಕ್ಷ ಸದಸ್ಯರನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಡೆಗಣನೆ ಪ್ರಜಾಪ್ರಭುತ್ವ ವಿರೋಧಿ ನಡೆ. ಇದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ಮೈಕ್ರೋಫೋನ್ ಬಂದ್:
ಮೋದಿ ಸರ್ಕಾರ ಸಂಸದೀಯ ಕಾರ್ಯವಿಧಾನ ಮತ್ತು ಪ್ರಜಾಪ್ರಭುತ್ವದ ನಿಯಮಗಳನ್ನೇ ಗಾಳಿಗೆ ತೂರುತ್ತಿದೆ. ಉಪ ಸಭಾಪತಿ ನೇಮಿಸಬೇಕೆಂಬುದು ಕಡ್ಡಾಯ. ಆದರೆ, 2019ರಿಂದಲೂ ಉಪ ಸಭಾಪತಿ ಸ್ಥಾನವನ್ನು ಕೇಂದ್ರ ಸರ್ಕಾರ ಖಾಲಿ ಬಿಟ್ಟಿದೆ. ವಿಪಕ್ಷ ನಾಯಕರು, ಸಂಸದರು ಕೇಂದ್ರದ ಆದೇಶದ ವಿಷಯವನ್ನು ಪ್ರಸ್ತಾಪಿಸಿದಾಗಲೆಲ್ಲಾ ವಿಪಕ್ಷದವರ ಕಡೆಯ ಮೈಕ್ರೋಫೋನ್ ಆಫ್ ಮಾಡಲಾಗುತ್ತಿದೆ. ಇಂತಹ ನಡೆ ಗಂಭೀರವಾಗಿ ಖಂಡಿಸುತ್ತೇವೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಸದನದಲ್ಲಿ ಏಕಪಕ್ಷೀಯವಾಗಿ ವ್ಯವಹಾರ ಪರಿಚಯಿಸುತ್ತಿದೆ. ಚರ್ಚೆ ಹತ್ತಿಕ್ಕುತ್ತಿದೆ. ವಿಪಕ್ಷದೊಂದಿಗೆ ಯಾವುದೇ ಚರ್ಚೆ, ಸಮಾಲೋಚನೆ ನಡೆಸದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಕೇಂದ್ರದ ನಡೆ ಖಂಡನೀಯ. ಈಗಾಗಲೇ ವಿಪಕ್ಷದಿಂದ ಸಾಕಷ್ಟು ಸಲ ಸದನದ ಹೊರಗೆ ಧ್ವನಿ ಎತ್ತಿ, ಸಭಾಪತಿಗೂ ಮನವಿ ಮಾಡಲಾಗಿದೆ ಎಂದು ಡಾ.ಪ್ರಭಾ ತಿಳಿಸಿದರು.
ಹಿಂದಿ ಹೇರಿಕೆಗೆ ಆಕ್ಷೇಪ:
ಕುಂಭಮೇಳದ ವೇಳೆಯ ಕಾಲ್ತುಳಿತದ ಸಾವು ನೋವು, ರೈಲ್ವೆ ಪ್ರಯಾಣದ ವೇಳೆ ಉಂಟಾದ ಸಾವು-ನೋವಿನ ಬಗ್ಗೆ ಪ್ರಶ್ನಿಸಿದರೆ, ಕೇಂದ್ರ ಸರ್ಕಾರ ಅದರ ಬಗ್ಗೆ ನಿಖರ ಮಾಹಿತಿ ನೀಡದೇ, ನಿರ್ಲಕ್ಷ್ಯ ವಹಿಸಿದೆ. ಎನ್‌ಡಿಎ ಸರ್ಕಾರವು ಮೂರು ಭಾಷೆಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಅನಿವಾರ್ಯವಾಗಿ ಹಿಂದಿ ಹೇರಿಕೆಯನ್ನು ಇತರೆ ರಾಜ್ಯಗಳು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ, 100 ಜನ ಕಾಂಗ್ರೆಸ್ ಸಂಸದರು ಸೇರಿದಂತೆ ವಿಪಕ್ಷಗಳ ಸದಸ್ಯರು ಎರಡು ಭಾಷೆಗೆ ಮಾತ್ರ ಅವಕಾಶಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ತುದಿಗಾಲ ಮೇಲೆ ನಿಂತಿದೆ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಬಾತಿ ಶಿವಕುಮಾರ ಇತರರು ಇದ್ದರು.
* ಆರೋಪಗಳೇನು?
- ವ್ಯವಹಾರ ಸಲಹಾ ಸಮಿತಿ (ಬಿಎಸಿ) ನಿರ್ಧಾರವನ್ನು ಕೇಂದ್ರ ನಿರ್ಲಕ್ಷಿಸುತ್ತಿದೆ.
- ಬಜೆಟ್ ಮತ್ತು ಅನುದಾನ ಬೇಡಿಕೆ ಚರ್ಚೆಗಳಲ್ಲಿ ಪ್ರಮುಖ ಸಚಿವಾಲಯಗಳನ್ನೇ ಹೊರಗಿಡುತ್ತಿದೆ.
- ನಿಯಮ 193ರಡಿ ಚರ್ಚೆಗಳ ಕೊರತೆ ಆಗುವಂತೆ ಮಾಡಿದೆ, ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ.
- ಶೂನ್ಯವೇಳೆ ಸಾಂಪ್ರದಾಯಿಕವಾಗಿ ಓದಿ ಚರ್ಚೆಗೆ ಅವಕಾಶ ನೀಡಲಾಗುತ್ತಿದ್ದ ಮುಂದೂಡಿಕೆ ಸೂಚನೆಗಳನ್ನು ಕಡೆಗಣಿಸಲಾಗುತ್ತಿದೆ.
- ಸಂಸತ್ತು ಟಿ.ವಿ.ಯಲ್ಲಿ ವಿಪಕ್ಷ ನಾಯಕರು, ಸಂಸದರು ಮಾತನಾಡಿದಾಗಲೆಲ್ಲಾ ಸಂಸತ್ತು ಟಿವಿ ಕ್ಯಾಮೆರಾ ತನ್ನ ಕೋನ ಬದಲಿಸುತ್ತದೆ, ವಿಪಕ್ಷದವರನ್ನು ತೋರಿಸುವುದೇ ಇಲ್ಲ
- ಸಮಾಲೋಚನಾ ಸಮಿತಿ ಸಭೆಗಳನ್ನು ನಿಯಮಿತವಾಗಿ ಕರೆಯಲುದ್ದೇಶಿಸಲಾಗಿದೆ. ಆದರೂ, ಅನೇಕ ಸಮಿತಿಗಳು ನಿಯಮಿತವಾಗಿ ಸಭೆ ನಡೆಸುತ್ತಿಲ್ಲ.
- ಸದನ ಸಮಿತಿಗಳ ಸಂಯೋಜನೆಮತ್ತು ಅದ್ಯಕ್ಷತೆಯ ಕುರಿತಂತೆ ವಿಪಕ್ಷಗಳ ಜೊತೆಗೆ ಚರ್ಚಿಸುತ್ತಿಲ್ಲ. ಕೃಷಿ ಬಗ್ಗೆ, ರೈತ ಹೋರಾಟದ ಬಗ್ಗೆ ಚರ್ಚೆಗೆ ಅವಕಾಶ ನೀಡದೇ, ಕನಿಷ್ಟ ಸಮಯ ನಿಗದಿಪಡಿಸಲಾಗುತ್ತಿದೆ. ವೈಯನಾಡಿನ ಪ್ರಕೃತಿ ವಿಕೋಪದ ತುರ್ತು ಪರಿಸ್ಥಿತಿ ಬಗ್ಗೆ ಚರ್ಚೆಗೂ ಅವಕಾಶ ನೀಡಲಿಲ್ಲ. ಒಟ್ಟಾರೆ, ನರೇಂದ್ರ ಮೋದಿ ಸರ್ಕಾರವು ಎಲ್ಲವನ್ನೂ ತಮ್ಮ ಹತೋಟಿಯಲ್ಲಿಟ್ಟುಕೊಂಡು ಅಧಿಕಾರ ನಡೆಸುತ್ತಿದೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಆರೋಪಿಸಿದರು.
- ಕೃಷಿ, ರೈತ ಹೋರಾಟಕ್ಕೆ ನೀಡಬೇಕಾದ ಮಹತ್ವ ಕೇಂದ್ರ ನೀಡುತ್ತಿಲ್ಲ.
- ಆಳುವ ಸರ್ಕಾರದ ಆಪ್ತರಾದ ಅದಾನಿ, ಅಂಬಾನಿ ಬಗ್ಗೆ ಮಾತನಾಡಿದರೆ ಅಂತಹ ಮಾತುಗಳನ್ನೇ ಬಂದ್ ಮಾಡಲಾಗುತ್ತದೆ.
- ಮಹಿಳಾ ಮೀಸಲಾತಿ ಚರ್ಚೆಯಾಗದೇ ಜಾರಿಗೆ ತರಲಾಗಿದೆ.
- ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ವಿಪಕ್ಷದ ಜೊತೆಗೆ ಚರ್ಚೆ ಮಾಡುತ್ತಿಲ್ಲ.
- ಕರ್ನಾಟಕ, ತಮಿಳನಾಡು, ಕೇರಳ, ಪಶ್ಚಿಮ ಬಂಗಾಳಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಕ ಅನುದಾನ ಹಂಚಿಕೆ ಮಾಡಿಲ್ಲ.