ಚಂದ್ರು ಕೊಂಚಿಗೇರಿ ಕನ್ನಡಪ್ರಭ ವಾರ್ತೆ ಹೂವಿನಹಡಗಲಿ: ರೈತರು ಮುಂಗಾರಿನ ಮಳೆ ಇಲ್ಲದೇ ಬೆಳೆ ನಷ್ಟದಿಂದ ಕಂಗಾಲಾಗಿದ್ದು, ಹಿಂಗಾರಿನ ಆರಂಭದಲ್ಲೇ ಮಳೆ ಕೊರತೆ ಕಾಡುತ್ತಿದೆ. ತಾಲೂಕಿನಲ್ಲಿ ಮುಂಗಾರು ಮಳೆ ಸಕಾಲದಲ್ಲಿ ಬರಲಿಲ್ಲ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. 47114 ಹೆಕ್ಟೇರ್ ಮೆಕ್ಕೆಜೋಳ, 827 ಹೆ. ಹತ್ತಿ, 978 ಹೆ. ಸೂರ್ಯಕಾಂತಿ, 8790 ಹೆ. ಶೇಂಗಾ, 984 ಹೆ. ಹೈಬ್ರೀಡ್ ಜೋಳ, 350 ಹೆ. ಸಜ್ಜೆ, 600 ಹೆ. ತೊಗರಿ ಸೇರಿದಂತೆ ಒಟ್ಟು 52914 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಜತೆಗೆ ತೋಟಗಾರಿಕೆ ಬೆಳೆಗಳಾದ ಈರುಳ್ಳಿ 606 ಹೆ. ಮೆಣಸಿನಕಾಯಿ 194 ಹೆ. ಟೊಮೇಟೊ 39 ಹೆ. ಬೆಳೆನಾಶವಾಗಿದೆ. ಬೆಳೆಹಾನಿಯಿಂದಾಗಿ ತತ್ತರಿಸುವ ರೈತರು ಅಲ್ಪಸ್ವಲ್ಪ ಬೆಳೆಗೆ ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಮಾರಾಟಗಾರರು ಧಾನ್ಯಗಳನ್ನು ಬಾಯಿಗೆ ಬಂದಷ್ಟು ಬೆಲೆಗೆ ಕೇಳುತ್ತಿದ್ದಾರೆ. ವಿಧಿ ಇಲ್ಲದೇ ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲೇ ಹಿಂಗಾರಿಗೆ ಹಿನ್ನಡೆ?: ಮುಂಗಾರು ಮಳೆ ಇಲ್ಲದೇ ಅರೆಬರೆಯಾಗಿದ್ದ ಬೆಳೆಗಳನ್ನು ನಾಶ ಮಾಡಿರುವ ರೈತರು ಹಿಂಗಾರು ಮಳೆ ಬಂದರೆ ಬಿತ್ತನೆಗೆ ಜಮೀನುಗಳನ್ನು ಸಿದ್ಧತೆ ಮಾಡಿಕೊಂಡಿದ್ದಾರೆ. ಜೂ. 1ರಿಂದ ಸೆ. 30ರ ವರೆಗೂ 369 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಇದರಲ್ಲಿ 204 ಮಿಮೀ ಮಳೆಯಾಗಿ ಶೇ. 45ರಷ್ಟು ಮಳೆ ಕೊರತೆ ಉಂಟಾಗಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ 30 ಮಿಮೀ ಮಳೆಯಾಗಬೇಕಿತ್ತು. ಇದರಲ್ಲಿ ಕೇವಲ 2 ಮಿಮೀ ಮಾತ್ರ ಮಳೆಯಾಗಿದ್ದು, ಶೇ. 28ರಷ್ಟು ಹಿಂಗಾರು ಮಳೆ ಆರಂಭದಲ್ಲೇ ಕೊರತೆ ಉಂಟಾಗಿದೆ. ಇದರಿಂದ ರೈತರು ಮತ್ತಷ್ಟು ಚಿಂತೆಗೀಡಾಗಿದ್ದಾರೆ. ಈ ಬಾರಿ ಹಿಂಗಾರು ಮಳೆಗೆ ಕೃಷಿ ಇಲಾಖೆಯು 13850 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ನಿಗದಿಯಾಗಿದೆ. 5717 ಹೆಕ್ಟೇರ್ ಪ್ರದೇಶದಲ್ಲಿ ಕರೆಕಡ್ಲಿ, ಬಿಳಿಜೋಳ 1780 ಹೆ. ಸೂರ್ಯಕಾಂತಿ 1 ಸಾವಿರ ಹೆ. ರಾಗಿ 350 ಹೆ. ಮೆಕ್ಕೆಜೋಳ 625 ಹೆ. ಅಲಸಂದೆ ಸೇರಿದಂತೆ ದ್ವಿದಳ ಧಾನ್ಯ 660 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇದೆ. ಹಿಂಗಾರು ಬಿತ್ತನೆಗೆ ಈಗಾಗಲೇ ರೈತರಿಗೆ ವಿತರಣೆ ಮಾಡಲು 1500 ಕ್ವಿಂಟಲ್ ಕರೆಕಡ್ಲಿ, ರಾಗಿ 40 ಕ್ವಿಂ. ಬಿಳಿಜೋಳ 10 ಕ್ವಿಂ. ಬಿತ್ತನೆ ಬೀಜಗಳನ್ನು ಸಂಗ್ರಹಿಸಿದ್ದಾರೆ. ಅವುಗಳನ್ನು ತಾಲೂಕಿನ ಹೂವಿನಹಡಗಲಿ ಪಟ್ಟಣ, ಇಟ್ಟಗಿ ಮತ್ತು ಹಿರೇಹಡಗಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಹುತೇಕ ಕಡೆ ಜಮೀನುಗಳನ್ನು ಉಳುಮೆ ಮಾಡಿಕೊಂಡು ಬಿತ್ತನೆಗೆ ಸಿದ್ಧಗೊಳಿಸಲಾಗಿದೆ. ಆದರೆ ಈವರೆಗೂ ವರುಣ ಮಾತ್ರ ಕೃಪೆ ತೋರುತ್ತಿಲ್ಲ. 5 ತಾಸು ಕರೆಂಟ್ ಆದೇಶ ಹಿಂಪಡೆ ಜೆಸ್ಕಾಂ: ಬರದಲ್ಲಿ ರೈತರಿಗೆ ಅತ್ತ ಮಳೆ ಇಲ್ಲದೇ ಬಿತ್ತನೆ ಮಾಡಿದ್ದ ಬೆಳೆಗಳೆಲ್ಲಾ ಹಾನಿಯಾಗಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಜೆಸ್ಕಾಂ ಈವರೆಗೂ ರೈತರಿಗೆ 7 ತಾಸು ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿತ್ತು. ಬುಧವಾರ ಜೆಸ್ಕಾಂ ಇಲಾಖೆಯು ರೈತರಿಗೆ 7 ತಾಸು ಬದಲು ಕೇವಲ 5 ತಾಸು ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತೇವೆಂಬ ಆದೇಶ ನೀಡಿದ್ದರು. ಇದಕ್ಕೆ ರೈತರಿಂದ ತೀವ್ರವಾದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಧವಾರ ಸಂಜೆ ವೇಳೆಗೆ ಆದೇಶ ಹಿಂಪಡೆದು, ಮೊದಲಿನ ರೀತಿಯಲ್ಲೇ ರೈತರ ಪಂಪ್‌ಸೆಟ್‌ಗಳಿಗೆ 7 ತಾಸು ವಿದ್ಯುತ್ ನೀಡಲು ಮುಂದಾಗಿದ್ದಾರೆ. ಹಿಂಗಾರಿನಲ್ಲಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದೇವೆ. ಇದರಿಂದ 13850 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲು ಗುರಿ ನಿಗದಿಯಾಗಿದ್ದು, ಇದಕ್ಕಾಗಿ ರೈತರಿಗೆ ಕರೆಕಡ್ಲಿ, ರಾಗಿ ಮತ್ತು ಬಿಳಿ ಜೋಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ, ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೂವಿನಹಡಗಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಮದ್ ಅಶ್ರಫ್ ತಿಳಿಸಿದರು.