ಜೂ. 1ರಿಂದ ಆ. 31ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಮಳೆಯ ಪ್ರಮಾಣ ಹಾಗೂ ವಾಡಿಕೆ ಮಳೆಯ ಸರಾಸರಿಯನ್ನು ಆಧಾರವಾಗಿಟ್ಟುಕೊಂಡು ಈ ಅಂಕಿ ಅಂಶಗಳನ್ನು ಸಿದ್ಧಪಡಿಸಲಾಗಿದೆ.
ರಾಘು ಕಾಕರಮಠ
ಅಂಕೋಲಾ: ಮುಂಗಾರು ಮಳೆಯ ಪ್ರಮಾಣದಲ್ಲಿ ಕೊರತೆ ಕಂಡುಬಂದಿದ್ದರೂ, ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ದಾಖಲಾದ ಜಿಲ್ಲೆಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ ಪಡೆದುಕೊಂಡಿದೆ. ಕರಾವಳಿ ಭಾಗದ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ.
ಜೂ. 1ರಿಂದ ಆ. 31ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಮಳೆಯ ಪ್ರಮಾಣ ಹಾಗೂ ವಾಡಿಕೆ ಮಳೆಯ ಸರಾಸರಿಯನ್ನು ಆಧಾರವಾಗಿಟ್ಟುಕೊಂಡು ಈ ಅಂಕಿ ಅಂಶಗಳನ್ನು ಸಿದ್ಧಪಡಿಸಲಾಗಿದೆ. ಮುಂಗಾರು ಆರಂಭದಿಂದಲೇ ಮಳೆಯ ಕೊರತೆ ಎದುರಾದರೂ, ಉತ್ತರ ಕನ್ನಡ ಜಿಲ್ಲೆ ತನ್ನ ಸ್ಥಾನವನ್ನು ಉಳಿಸಿಕೊಂಡಿರುವುದು ಗಮನಾರ್ಹವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್‌ನಿಂದ ಆಗಸ್ಟ್ ಅಂತ್ಯದವರೆಗೆ ಒಟ್ಟು 2392 ಮಿಮೀ ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಈ ಅವಧಿಯಲ್ಲಿ ಸುಮಾರು 1892 ಮಿಮೀ ಮಳೆ ದಾಖಲಾಗಿದೆ. ಹೀಗಾಗಿ ವಾಡಿಕೆ ಮಳೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ. 21ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದೆ.
ಸಾಮಾನ್ಯವಾಗಿ ರಾಜ್ಯದ ಅತ್ಯಧಿಕ ಮಳೆ ಬೀಳುವ ಜಿಲ್ಲೆಗಳ ಪೈಕಿ ಉತ್ತರ ಕನ್ನಡವೂ ಪ್ರಮುಖವಾಗಿದೆ. ಜಿಲ್ಲೆಯ ಪಶ್ಚಿಮಘಟ್ಟ, ಕರಾವಳಿ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳಲ್ಲಿ ಮುಂಗಾರು ಮಳೆಯ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಕೆಲವೆಡೆ ಉತ್ತಮ ಮಳೆಯಾದರೆ, ಇನ್ನೂ ಕೆಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿರುವುದು ಕಂಡುಬಂದಿದೆ.
ಈ ಬಾರಿ ಮುಂಗಾರು ಆರಂಭದಲ್ಲಿ ಮಳೆಯ ಅಬ್ಬರ ನಿರೀಕ್ಷಿತ ಮಟ್ಟದಲ್ಲಿ ಕಂಡುಬರದಿದ್ದರೂ, ಆಗಸ್ಟ್ ಅಂತ್ಯದವರೆಗಿನ ಒಟ್ಟು ಮಳೆ ಪ್ರಮಾಣದ ಆಧಾರದಲ್ಲಿ ಉತ್ತರ ಕನ್ನಡ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಿಂದಾಗಿ ಕರಾವಳಿ ಜಿಲ್ಲೆಗಳೇ ರಾಜ್ಯದ ಮಳೆ ಪ್ರಮಾಣದ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ.
ಒಟ್ಟಾರೆ, ವಾಡಿಕೆ ಮಳೆಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಮಳೆಯ ಕೊರತೆ ಕಂಡುಬಂದಿದ್ದರೂ, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯ ಒಟ್ಟು ಮುಂಗಾರು ಮಳೆ ಪ್ರಮಾಣ ಗಮನಾರ್ಹವಾಗಿದ್ದು, ಮಳೆ ಪ್ರಮಾಣದ ಆಧಾರದಲ್ಲಿ ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದಿದೆ.
ತೊಂದರೆ ಆಗಿಲ್ಲ: ಉಕ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಆದರೆ ಇಲ್ಲಿದ ಬೆಳೆಯಾದ ಭತ್ತ ಬೆಳೆಯಲು ಯಾವುದೇ ತೊಂದರೆ ಆಗಿಲ್ಲ. ಮಳೆಯಲ್ಲಿ ರಾಜ್ಯದಲ್ಲಿಯೇ ಉಕ ಜಿಲ್ಲೆ ತೃತೀಯ ಸ್ಥಾನ ದಾಖಲಿಸಿರುವುದು ಹರ್ಷ ತಂದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಂಕೋಲಾ ಶ್ರೀಧರ ನಾಯ್ಕ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.