10ಕ್ಕೂಹೆಚ್ಚು ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರ

KannadaprabhaNewsNetwork |  
Published : Jun 09, 2026, 02:00 AM IST
Rain

ಸಾರಾಂಶ

ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ರಾಮನಗರ ತಾಲೂಕಿನ ಹುಣಸನಹಳ್ಳಿಯಲ್ಲಿ ಗಾಳಿ- ಮಳೆಗೆ ಮರ ಬಿದ್ದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಮೃತಪಟ್ಟಿದ್ದರೆ, ವಿಜಯಪುರ ಜಿಲ್ಲೆಯ ಮಮದಾಪೂರ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ.

  ಬೆಂಗಳೂರು:  ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ರಾಮನಗರ ತಾಲೂಕಿನ ಹುಣಸನಹಳ್ಳಿಯಲ್ಲಿ ಗಾಳಿ- ಮಳೆಗೆ ಮರ ಬಿದ್ದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಮೃತಪಟ್ಟಿದ್ದರೆ, ವಿಜಯಪುರ ಜಿಲ್ಲೆಯ ಮಮದಾಪೂರ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನೆರೆ ನೀರಿಗೆ ಬೈಕ್‌ಗಳು ಕೊಚ್ಚಿಹೋದವು. ಈ ಮಧ್ಯೆ, ಗೋಕರ್ಣದಲ್ಲಿ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದ್ದರಿಂದ ಭಕ್ತರಿಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿರಲಿಲ್ಲ.

ರಾಮನಗರ ಸುತ್ತಮುತ್ತ ಮಳೆ

ರಾಮನಗರ ಸುತ್ತಮುತ್ತ ಮಳೆಯಾಗಿದ್ದು, ತಾಲೂಕಿನ ಹುಣಸನಹಳ್ಳಿ ಗ್ರಾಮದ ಬಳಿ ಗಾಳಿ-ಮಳೆಗೆ ಮರ ಬಿದ್ದು ಬೈಕ್‌ ಸವಾರ, ನಾಗೋಹಳ್ಳಿ ಗ್ರಾಮದ ಪ್ರಶಾಂತ್ (19) ಎಂಬುವರು ಮೃತಪಟ್ಟಿದ್ದಾರೆ. ಪ್ರಶಾಂತ್, ಕೆಲಸಕ್ಕೆಂದು ಮುಂಜಾನೆ ಮನೆಯಿಂದ ರಾಮನಗರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಾತ್ರಿ ಸುರಿದ ಮಳೆಗೆ ಬುಡ ಸಮೇತ ಬೃಹತ್ ಮರ ಬೈಕ್ ಮೇಲೆ ಏಕಾಏಕಿ ಬಿತ್ತು. ಮರ ಬಿದ್ದ ರಭಸಕ್ಕೆ ಪ್ರಶಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಗೋಕರ್ಣದಲ್ಲಿ ಮಹಾಬಲೇಶ್ವರ ಮಂದಿರದ ಗರ್ಭಗುಡಿಗೆ ನೀರು ನುಗ್ಗಿತ್ತು. ಸಂಗಮ ನಾಲಾ ಸಮುದ್ರ ಸೇರುವ ಸ್ಥಳದಲ್ಲಿ ಮರಳು ತುಂಬಿ ದಿಬ್ಬವಾದ ಪರಿಣಾಮ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಮುಂದೆ ಹೋಗದೆ ಸೋಮಸೂತ್ರದ ಮೂಲಕ ಮಹಾಬಲೇಶ್ವರ ಮಂದಿರದ ಗರ್ಭಗುಡಿಗೆ ನೀರು ನುಗ್ಗಿತ್ತು. ಮಧ್ಯಾಹ್ನ ನೀರು ಒಳ ಪ್ರವೇಶಿಸಲು ಪ್ರಾರಂಭವಾಗಿದ್ದರಿಂದ ಭಕ್ತರಿಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿರಲಿಲ್ಲ.  

ನಂದಿ ಮಂಟಪದಿಂದ ಹೊರಗಡೆ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಮಧ್ಯಾಹ್ನದ ಮಹಾಪೂಜೆ ಸಹ ನಿತ್ಯ ಸಮಯಕ್ಕಿಂತ ವಿಳಂಬವಾಗಿ ನಡೆಯಿತು. ಸಂಜೆ ಭಕ್ತರಿಗೆ ಪೂಜಾ ಸೇವೆಗಳನ್ನು ಬಂದ್ ಮಾಡಲಾಗಿತ್ತು. ಬಳಿಕ, ದೇವಾಲಯದವರೇ ಜೆಸಿಬಿ ತಂದು ಸಂಗಮ ನಾಲಾ ಸಮುದ್ರ ಸೇರುವ ಜಾಗದಲ್ಲಿ ಮರಳು ದಿಬ್ಬವನ್ನು ಬಿಡಿಸಿಕೊಟ್ಟು, ನೀರು ಸರಾಗವಾಗಿ ಹೋಗುವಂತೆ ಮಾಡಿಕೊಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದ ಜೋಡು ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನಗಳು, ಕಾರುಗಳು ಅರ್ಧದಷ್ಟು ನೀರಿನಲ್ಲಿ ಮುಳುಗಿದವು. ಕೇಂದ್ರ ಬಸ್ ನಿಲ್ದಾಣ, ಇಂಚಲ ಕ್ರಾಸ್, ಚನ್ನಮ್ಮ ವೃತ್ತದ ರಸ್ತೆಗಳಲ್ಲಿ ಕೆಲವು ದ್ವಿಚಕ್ರ ವಾಹನಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಬೈಕ್ ಗಳನ್ನು ರಕ್ಷಿಸಿಕೊಳ್ಳಲು ಮಾಲೀಕರು ಪರದಾಡಿದರು. ಸೋಮವಾರ ಪೇಟೆಯಲ್ಲಿ ಅಂಗಡಿಯಲ್ಲಿದ್ದ ತರಕಾರಿಗಳು ಮಳೆಗೆ ಕೊಚ್ಚಿ ಹೋದವು. ಸವದತ್ತಿ, ಯಲ್ಲಮ್ಮನ ಗುಡ್ಡದಲ್ಲಿಯೂ ಭಾರಿ ಮಳೆಯಾಗಿದೆ.

ಶೃಂಗೇರಿ ಸೇರಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ತುಂಗಾ ನದಿಯಲ್ಲಿ ನೀರಿನ ಮಟ್ಟ ಕೊಂಚ ಹೆಚ್ಚಳವಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಸಿಡಿಲು ಬಡಿದು ಪಾನ್‌ ಶಾಪ್‌ ವೊಂದರ ಬಳಿ ನಿಂತಿದ್ದ ಮೂವರು ಗಾಯಗೊಂಡಿದ್ದಾರೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ವೇಳೆ, ಬೆಂಗಳೂರು ನಗರ, ಗದಗ, ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಳ ಅಭ್ಯರ್ಥಿ ಗೋವಿಂದರಾಜು ಆಸ್ತಿ ₹173 ಕೋಟಿ!
ನಗರದಲ್ಲಿ ಕಂಡ ಕಂಡಲ್ಲಿ ಕಸದ ರಾಶಿ : ವಿಲೇವಾರಿ ಮಾಡದಕ್ಕೆ ಜನಾಕ್ರೋಶ