ರಾಜ್ಯದಲ್ಲಿ ಮುಂಗಾರು ಬಿರುಸು, ಹಲವೆಡೆ ಭೂಕುಸಿತಮಲೆನಾಡಿಗೀಗ ಗುಡ್ಡದ ಭೂತ

KannadaprabhaNewsNetwork |  
Published : Jun 16, 2025, 03:20 AM ISTUpdated : Jun 16, 2025, 03:21 AM IST
ಭಾರೀ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕವಿಕಲ್‌ ಗಂಡಿ ಬಳಿ ಪ್ರವಾಸಿಗರ ಕಾರ್‌ ಪಲ್ಟಿಯಾಗಿರುವುದು. | Kannada Prabha

ಸಾರಾಂಶ

ರಾಜ್ಯದಲ್ಲಿ ಮುಂಗಾರು ಬಿರುಸಾಗಿದ್ದು, ಧಾರಾಕಾರ ಮಳೆಗೆ ಮಲೆನಾಡು ಭಾಗದ ವಿವಿಧೆಡೆ ಗುಡ್ಡ ಕುಸಿತ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ದೇವಿಮನೆ, ಶೃಂಗೇರಿ ತಾಲೂಕಿನ ನೆಮ್ಮಾರ್‌, ಮಂಗಳೂರಿನ ಕದ್ರಿ, ಕಂಕನಾಡಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಕರಾವಳಿ ಭಾಗದಲ್ಲೂ ಮಳೆ ಅಬ್ಬರಿಸುತ್ತಿದ್ದು, ಭಟ್ಕಳದಲ್ಲಿ 50 ವರ್ಷದ ವೃದ್ಧ ಹಾಗೂ 2 ವರ್ಷದ ಚಿಕ್ಕ ಮಗು ನೀರಲ್ಲಿ ಕೊಚ್ಚಿಹೋಗಿದ್ದಾರೆ. ಬೆಳ್ತಂಗಡಿ ಸಮೀಪ ಮರ ಬಿದ್ದು, ಇಬ್ಬರು ಬೈಕ್‌ ಸವಾರರು ಗಾಯಗೊಂಡಿದ್ದಾರೆ.

3 ಜಿಲ್ಲೆಗಳಲ್ಲಿ ಗುಡ್ಡ ಕುಸಿತ, ಭಾರೀ ಆತಂಕ । ರಸ್ತೆ ಸಂಚಾರ ಬಂದ್‌

ಭಟ್ಕಳದಲ್ಲಿ 50ರ ವೃದ್ಧ ಮಳೆಗೆ ಬಲಿ, 2 ವರ್ಷದ ಮಗು ನೀರು ಪಾಲುಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಶಾಲೆಗೆ ರಜೆ

==

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮುಂಗಾರು ಬಿರುಸಾಗಿದ್ದು, ಧಾರಾಕಾರ ಮಳೆಗೆ ಮಲೆನಾಡು ಭಾಗದ ವಿವಿಧೆಡೆ ಗುಡ್ಡ ಕುಸಿತ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ದೇವಿಮನೆ, ಶೃಂಗೇರಿ ತಾಲೂಕಿನ ನೆಮ್ಮಾರ್‌, ಮಂಗಳೂರಿನ ಕದ್ರಿ, ಕಂಕನಾಡಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಕರಾವಳಿ ಭಾಗದಲ್ಲೂ ಮಳೆ ಅಬ್ಬರಿಸುತ್ತಿದ್ದು, ಭಟ್ಕಳದಲ್ಲಿ 50 ವರ್ಷದ ವೃದ್ಧ ಹಾಗೂ 2 ವರ್ಷದ ಚಿಕ್ಕ ಮಗು ನೀರಲ್ಲಿ ಕೊಚ್ಚಿಹೋಗಿದ್ದಾರೆ. ಬೆಳ್ತಂಗಡಿ ಸಮೀಪ ಮರ ಬಿದ್ದು, ಇಬ್ಬರು ಬೈಕ್‌ ಸವಾರರು ಗಾಯಗೊಂಡಿದ್ದಾರೆ. ಇದೇ ವೇಳೆ, ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ 6, ಮಂಗಳೂರಿನ 5, ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಇಬ್ಬರು ಬಲಿ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಹಳ್ಳ-ಕೊಳ್ಳಗಳಲ್ಲಿ ಪ್ರವಾಹ ಬಂದಿದೆ. ಭಟ್ಕಳದ ಬೆಳಲಖಂಡ ಗ್ರಾಮದಲ್ಲಿ ಭಾನುವಾರ ಹಳ್ಳದ ಪ್ರವಾಹದಲ್ಲಿ ಮಹಾದೇವ ನಾರಾಯಣ ದೇವಾಡಿಗ (50) ಎಂಬುವರು ಕೊಚ್ಚಿಹೋಗಿದ್ದಾರೆ. ಇದೇ ವೇಳೆ, ಆಜಾದ್‌ ನಗರದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದಾಗ ತುಂಬಿ ಹರಿಯುತ್ತಿರುವ ಕಾಲುವೆಗೆ ಬಿದ್ದು, 2 ವರ್ಷದ ಮಗು ಮೃತಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುಕ್ಕಾವಿನ ಕೊಪ್ಪದಗಂಡಿಯಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದು ಇಬ್ಬರು ಗಾಯ‌ಗೊಂಡಿದ್ದಾರೆ. ಸಕಲೇಶಪುರದ ಕಾಫಿ ಎಸ್ಟೇಟ್‌ನಲ್ಲಿ ಗಾಳಿ-ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಹೆಣ್ಣು ಕಾಡಾನೆಯೊಂದು ತನ್ನ ಮರಿಯೊಂದಿಗೆ ಮೃತಪಟ್ಟಿದೆ.

ಅಲ್ಲಲ್ಲಿ ಗುಡ್ಡ ಕುಸಿತ:

ಮಳೆಗೆ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ಶಿರಸಿ ಸಮೀಪ ದೇವಿಮನೆ ಘಟ್ಟದಲ್ಲಿ ಭಾನುವಾರ ಮತ್ತೆ ಗುಡ್ಡ ಕುಸಿದಿದ್ದು, ಕುಮಟಾ-ಶಿರಸಿ ಹೆದ್ದಾರಿ ಕೆಲ ಕಾಲ ಬಂದ್‌ ಆಗಿತ್ತು. ಕಾಸರಕೋಡಿನ ಅಪ್ಸರಕೊಂಡ ಸಮೀಪದ ವಿಘ್ನೇಶ್ವರ ಆಯಿಲ್ ಮಿಲ್ ಸಮೀಪವೂ ಗುಡ್ಡ ಕುಸಿತವಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರ್‌ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಗುಡ್ಡ ಕುಸಿದಿದ್ದು, ಶಿವಮೊಗ್ಗ-ಮಂಗಳೂರು ಹೆದ್ದಾರಿ ಬಂದ್‌ ಆಗಿದೆ. ದತ್ತಪೀಠ ರಸ್ತೆಯ ಕವಿಕಲ್‌ ಗಂಡಿ ಬಳಿ ಐವರು ಪ್ರವಾಸಿಗರಿದ್ದ ಕಾರೊಂದು ಪಲ್ಟಿಯಾಗಿದ್ದು, ಅದರಲ್ಲಿದ್ದವರು ಚಿಕ್ಕಪುಟ್ಟ ಗಾಯಗಳಿಂದ ಬಚಾವಾಗಿದ್ದಾರೆ. ತುಂಗಾ ನದಿಗೂ ಪ್ರವಾಹ ಬಂದಿದ್ದು, ಶೃಂಗೇರಿ ಮಠದ ಬಳಿಯ ಕಪ್ಪೆಶಂಕರ ದೇವಾಲಯ ಜಲಾವೃತಗೊಂಡಿದೆ.

ಮಂಗಳೂರಿನ ಕದ್ರಿ ಶಿವಭಾಗ್‌ ಹಾಗೂ ಕಂಕನಾಡಿಯಲ್ಲಿ ಭಾರೀ ಮಳೆಗೆ ಬೃಹತ್ ತಡೆಗೋಡೆಗಳು ಉರುಳಿ ಬಿದ್ದು, ಹತ್ತಾರು ಮನೆಗಳಿಗೆ ಹಾನಿ ಉಂಟಾಗಿದೆ. ಶಿವಭಾಗ್‌ ಬಳಿಯ ಅಪಾರ್ಟ್‌ಮೆಂಟ್‌ ಹಿಂಬದಿಯ ಬೃಹತ್‌ ಕಾಂಕ್ರಿಟ್‌ ತಡೆಗೋಡೆ ಕುಸಿದು ಅಪಾರ್ಟ್‌ಮೆಂಟ್‌ನ 2 ಮನೆಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದ 7 ಮಂದಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಈ ಗುಡ್ಡ ಮತ್ತಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದ್ದು, ತಡೆಗೋಡೆಯ ಮೇಲ್ಭಾಗದಲ್ಲಿರುವ ಮನೆ ಕೂಡ ಅಪಾಯಕ್ಕೆ ಸಿಲುಕಿದೆ.

ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು-ಗುರುಪುರ ನಡುವಿನ ಕೆತ್ತಿಕಲ್‌ ಗುಡ್ಡ ಕೂಡ ಕುಸಿಯುತ್ತಿದ್ದು, ಮೇಲ್ಭಾಗದಲ್ಲಿರುವ 9 ಮನೆಗಳು ನೆಲಸಮವಾಗುವ ಭೀತಿ ಎದುರಾಗಿದೆ.

ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ:

ಮಲಪ್ರಭಾ ನದಿಗೆ ಪ್ರವಾಹ ಬಂದಿದ್ದು, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ತಾತ್ಕಾಲಿಕ ಸೇತುವೆ ನೀರಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ಬೆಳಗಾವಿ-ಗೋವಾ ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಈ ಸೇತುವೆ ಕುಸಿಯುವುದಕ್ಕೂ ಕೆಲವೇ ಸೆಕೆಂಡ್​​ ಮುಂಚೆ ಬಸ್ಸೊಂದು ಪಾಸ್ ಆಗಿದ್ದು, ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ.

ಜಲಾಶಯಗಳು ಭರ್ತಿ:

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದೆ. (ಶೇ.83). ಹೀಗಾಗಿ, ಜಲಾಶಯದ ಕ್ರಸ್ಟಗೇಟ್‌ಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, 8 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ನದಿ ತೀರದ ಗ್ರಾಮಗಳ ಜನರಿಗೆ ನದಿ ಬಳಿ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಳೆಯಿಂದಾಗಿ ಬಳ್ಳಾರಿ‌ ಜಿಲ್ಲೆ ಸಂಡೂರು ಸಮೀಪದ ನಾರಿಹಳ್ಳ ಜಲಾಶಯ ಕೂಡ ಭರ್ತಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ