ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಶಾಂತವ್ವ ತಳವಾರ (55) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಕೊಡಗಿನ ಮಾಲ್ದಾರೆ ಗ್ರಾಮದಲ್ಲಿ ಮರದ ಕೊಂಬೆ ಬಿದ್ದು ಕಾಫಿ ಬೆಳೆಗಾರ ಪೊನ್ನಚಂಡ ವಿಷ್ಣು ಬೆಳ್ಳಿಯಪ್ಪ( 64) ಎಂಬುವರು ಮೃತಪಟ್ಟಿದ್ದಾರೆ. ಮನೆಯ ಅಂಗಳದಲ್ಲಿ ನಿಂತಿದ್ದಾಗ ಮನೆ ಪಕ್ಕದ ಮಾವಿನ ಮರದ ಕೊಂಬೆ ಮುರಿದು ಅವರ ಮೇಲೆ ಬಿತ್ತು. ಇದೇ ವೇಳೆ, ಊರುಗುಪ್ಪೆಯಲ್ಲಿ ಮನೆ ಮೇಲೆ ಭಾರೀ ಗಾತ್ರದ ಮರ ಮುರಿದು ಬಿದ್ದಿದ್ದು, ಮನೆಯಲ್ಲಿದ್ದ ವೃದ್ಧೆ, ಮಹಿಳೆ ಹಾಗೂ ಚಿಕ್ಕ ಮಗು ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾಗಮಂಡಲ-ಕರಿಕೆ ನಡುವೆ ಎಳ್ಳುಕೊಚ್ಚಿ ಬಳಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಬೀದರ್ ಜಿಲ್ಲೆ ಬಸವಕಲ್ಯಾಣದ ಯದಲಾಪುರ ರಸ್ತೆಯಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಧರ್ಮಣ್ಣ ಬರಿಗಾಲೆ (48) ಎಂಬುವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದಲ್ಲಿ ಹಳ್ಳದಲ್ಲಿ ಎತ್ತಿನಗಾಡಿ ಮಗುಚಿ ಬಿದ್ದು ಗಣೇಶ ಸಂಜು ಕಾಂಬಳೆ (9) ಹಾಗೂ ದೀಪಕ್ ಸಂಜು ಕಾಂಬಳೆ (11) ಎಂಬ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ನರಳಾಪುರ ಗ್ರಾಮದಲ್ಲಿ ಬೃಹತ್ ಮರ ಉರುಳಿ ಬಿದ್ದು ಆಟೋ ರಿಕ್ಷಾ ಜಖಂಗೊಂಡಿದೆ. ಚಾಲಕ ಗಿರೀಶ್ (38) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆಯಿಂದಾಗಿ ಮಂಗಳೂರಿನ ಜಲ್ಲಿಗುಡ್ಡೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಚಾರ್ಮಾಡಿ ಘಾಟ್‌ನಲ್ಲಿ ಭೂಕುಸಿತದ ಭೀತಿ ಎದುರಾಗಿದೆ.ಡ್ಯಾಮ್‌ಗೆ ಒಳಹರಿವು ಹೆಚ್ಚಳ:ಕಳೆದೆರಡು ದಿನಗಳ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಕಾವೇರಿಯ ಉಗಮ ಸ್ಥಾನ ಕೊಡಗಿನಲ್ಲಿ ಭಾನುವಾರ ಒಂದೇ ದಿನ 100 ಮಿ.ಮೀ.ನಷ್ಟು ಮಳೆ ಸುರಿದ ಪರಿಣಾಮ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಿದೆ. ಕೆಆರ್‌ಎಸ್‌ಗೆ ಒಂದೇ ದಿನ 3 ಅಡಿ ನೀರು ಬಂದಿದ್ದು, ನೀರಿನ ಮಟ್ಟ 92 (ಗರಿಷ್ಠ 124.80 )ಅಡಿಗಳಿಗೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಬಿಡಲಾಗುತ್ತಿದ್ದು, ಭೀಮಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದಾಗಿ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ 8 ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ.ಕೃಷ್ಣಾ ನದಿಯ ಒಳಹರಿವು ಹೆಚ್ಚಿದ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು 48 ಸಾವಿರ ಕ್ಯೂಸೆಕ್‌ಗೆ ಏರಿದೆ. ಕೇರಳದ ವೈನಾಡಿನಲ್ಲಿ ಮಳೆಯಾಗುತ್ತಿದ್ದು, ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳಹರಿವು 21,940 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ ಜಲಾಶಯದಲ್ಲಿ 10.61 ಟಿಎಂಸಿ ನೀರು ಸಂಗ್ರಹವಾಗಿದೆ.
ಕರಾವಳಿಯಲ್ಲಿ ಮತ್ತೆ ಒಂದು ವಾರ ಭಾರೀ ಮಳೆ ಸಾಧ್ಯತೆಕರಾವಳಿಯಲ್ಲಿ ಒಂದು ವಾರ, ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಹಾಗೂ ಉತ್ತರ ಒಳನಾಡಿನಲ್ಲಿ ಎರಡು ದಿನ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಮೇ 28ರಂದು ರೆಡ್ ಅಲರ್ಟ್, ಮೇ 29 ರಿಂದ ಮೇ 31ರ ವರೆಗೆ ಆರೆಂಜ್ ಅಲರ್ಟ್, ಜೂ.1 ಮತ್ತು 2ರಂದು ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಿಗೆ ಮೇ 31ರ ವರೆಗೆ ಆರೆಂಜ್ ಅಲರ್ಟ್, ನಂತರದ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ದಕ್ಷಿಣ ಒಳನಾಡಿನ ದಾವಣಗೆರೆ ಮತ್ತು ಮೈಸೂರು ಜಿಲ್ಲೆಗಳಿಗೆ ಮೇ 31ರ ವರೆಗೆ ಯೆಲ್ಲೋ ಅಲರ್ಟ್, ಚಾಮರಾಜನಗರಕ್ಕೆ ಮೇ 30 ಮತ್ತು 31ಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ.ಬೆಳಗಾವಿ, ಬೀದರ್ ಜಿಲ್ಲೆಗಳಿಗೆ ಮುಂದಿನ 24 ಗಂಟೆಗೆ ಆರೆಂಜ್ ಅಲರ್ಟ್, ಬಾಗಲಕೋಟೆ, ರಾಯಚೂರು, ವಿಜಯಪುರಕ್ಕೆ ಮೇ 28ರಂದು ಯೆಲ್ಲೋ ಅಲರ್ಟ್, ಯಾದಗಿರಿ ಮುಂದಿನ ಮೂರು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೇ 29ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎರಡೇ ದಿನಕ್ಕೆ ರಾಜ್ಯಕ್ಕೆ ವ್ಯಾಪಿಸಿದ ಮುಂಗಾರು:
ಮೈಸೂರು: ಕೊಡಗಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಫಾರಿ ವಾಹನಗಳು ನಾಗರಹೊಳೆ ವನ್ಯಜೀವಿ ವಲಯದ ಸಫಾರಿ ಜೋನ್ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗಿದೆ. ಹೀಗಾಗಿ, ಬುಧವಾರದಿಂದ ಮಳೆ ನಿಲ್ಲುವವರೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಣಚ್ಚಿ ಗೇಟ್ ಹಾಗೂ ವೀರನಹೊಸಹಳ್ಳಿ ಗೇಟ್ ನಿಂದ ಇಲಾಖಾ ಸಫಾರಿಯನ್ನು ನಿಲ್ಲಿಸಲಾಗಿದೆ. ಆದರೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ (ಕಬಿನಿ) ಸಫಾರಿ ಎಂದಿನಂತೆ ಮುಂದುವರೆಯುತ್ತದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಪಿ.ಎ.ಸೀಮಾ ತಿಳಿಸಿದ್ದಾರೆ.