ರೋಣ: ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿ ಆರ್ಥಿಕವಾಗಿ ಅಭಿವೃದ್ಧಿಪಡಿಸಲು ಉತ್ತೇಜನ ನೀಡುವುದಕ್ಕಾಗಿ ತಾಪಂ ಮಾಸಿಕ ಸಂತೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಟ್ಟಣದಲ್ಲಿ ಅನುಷ್ಠಾನಗೊಳಿಸಿದೆ. ಇದು ಸ್ತ್ರೀ ಸಬಲೀಕರಣಕ್ಕೆ ದಾರಿದೀಪವಾಗಿದೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಅವರು ಗುರುವಾರ ಪಟ್ಟಣದ ಸಂತೆ ಮಾರುಕಟ್ಟೆ ಆವರಣದಲ್ಲಿ ತಾಪಂದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ, ಸಂಜೀವಿನಿ ಯೋಜನೆಯಡಿಯಲ್ಲಿ ಜರುಗಿದ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಮಾತನಾಡಿ, ಸಂಜೀವಿನಿ ಸಂಘದ ಉತ್ಪನ್ನವು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಅದರಲ್ಲಿ ವಿಭಿನ್ನತೆಯಿರಬೇಕು, ಉತ್ಪನ್ನದ ಗುಣಮಟ್ಟ ಮತ್ತು ಗ್ರಾಹಕರಿಗೆ ನೀಡುವಾಗ ಉತ್ತಮ ಪ್ಯಾಕೆಜಿಂಗ್ ಹೊಂದಿರಬೇಕು. ಆಗ ಮಾತ್ರ ಉತ್ಪನ್ನ ಜನರನ್ನು ತಲುಪುತ್ತವೆ, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ನಿಗದಿಪಡಿಸಿದಾಗ ಮಾತ್ರ ಹೆಚ್ಚಿನ ವಸ್ತುಗಳು ಮಾರಾಟವಾಗುತ್ತವೆ ಈ ನಿಟ್ಟಿನಲ್ಲಿ ನೀವು ಕಾರ್ಯ ನಿರ್ವಹಿಸಬೇಕು ಎಂದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ .ಬಿ. ಕಂದಕೂರ ಮಾತನಾಡಿ, ಜಿಪಂ ಸಿಇಓ ಅವರ ಮಾರ್ಗದರ್ಶನದಲ್ಲಿ ಇಂತಹ ಒಂದು ಪರಿಕಲ್ಪನೆ ಮಾಡಲಾಗಿದ್ದು, ಈ ಕಾರ್ಯಕ್ರಮ ಶಾಸಕರ ಅಧ್ಯಕ್ಷತೆಯಲ್ಲಿ ಮಾಡಲಾಗಿದೆ. ಮಾಸಿಕ ಸಂತೆಗಳಲ್ಲಿ ಹೆಚ್ಚಿನ ಸಂಘಗಳು ಪಾಲ್ಗೊಳ್ಳಬೇಕು. ಗುಣಮಟ್ಟದ ಹಾಗೂ ಪರಿಶುದ್ಧ ಉತ್ಪನ್ನ ತಯಾರಿಸಬೇಕು. ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಉಮಾ ಮಂತೂರ, ತಾಲೂಕಿನ ಎಲ್ಲ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಸಂಜೀವಿನಿ ಸಿಬ್ಬಂದಿಗಳು ಸೇರಿದಂತೆ ಪಟ್ಟಣದ ಜನರು ಭಾಗವಹಿಸಿದ್ದರು.