ಮೂಡುಬಿದಿರೆ: ಪ್ರಾಕೃತಿಕ ವಿಕೋಪ ತಡೆ ಮುನ್ನೆಚ್ಚರಿಕೆ ಸಭೆ

KannadaprabhaNewsNetwork |  
Published : May 21, 2025, 12:04 AM IST
ಪ್ರಾಕೃತಿಕ ವಿಕೋಪ ತಡೆ ಮುನ್ನೆಚ್ಚರಿಕೆ ಸಭೆ | Kannada Prabha

ಸಾರಾಂಶ

ಪ್ರಾಕೃತಿಕ ವಿಕೋಪ ತಡೆ ಮುನ್ನೆಚ್ಚರಿಕೆ ಸಭೆ ಕುರಿತು ಮೂಡುಬಿದಿರೆ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖಾಧಿಕಾರಿಗಳ ಸಭೆಯ ನೆರವೇರಿತು. ಶಾಸಕ ಉಮಾನಾಥ ಕೋಟ್ಯಾನ್ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಗೆ ಇಲಾಖಾಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಅದರಿಂದ ಅನಾಹುತಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನನ್ನಾಗಿ ಮಾಡಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಎಚ್ಚರಿಸಿದ್ದಾರೆ.ಪ್ರಾಕೃತಿಕ ವಿಕೋಪ ತಡೆ ಮುನ್ನೆಚ್ಚರಿಕೆ ಸಭೆ ಕುರಿತು ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಲೆ, ಸಾರ್ವಜನಿಕ ಓಡಾಡುವ ಸ್ಥಳ, ರಸ್ತೆ ಬದಿಯಲ್ಲಿ ಅಪಾಯಕಾರಿ ಮರ, ಕೊಂಬೆಗಳಿದ್ದಲ್ಲಿ ತೆರವುಗೊಳಿಸಬೇಕು. ವಾಲಿದ ವಿದ್ಯುತ್ ಕಂಬಗಳು, ಜೋತುಬಿದ್ದ ತಂತಿಗಳಿದ್ದಲ್ಲಿ ಸರಿಪಡಿಸಬೇಕು. ಚರಂಡಿ, ರಾಜಕಾಲುವೆಗಳ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ವಹಿಸಬೇಕು ಎಂದರು.

ಮೆಸ್ಕಾಂ ಮತ್ತು ಅರಣ್ಯ ಇಲಾಖೆಗಳಿಗೆ ಹೆಚ್ಚಿನ ಜವಬ್ದಾರಿ ಇರುವುದರಿಂದ ನೀವು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ನಿರ್ಲಕ್ಷ್ಯ ಸಲ್ಲದು ಎಂದರು. ನಿಮ್ಮ ಕೆಲಸಗಳಿಗೆ ಇನ್ನೊಂದು ಇಲಾಖೆಯಿಂದ ಅಥವಾ ಮೇಲಾಧಿಕಾರಿಗಳಿಂದ ಸಹಕಾರ ಸಿಗದಿದ್ದಲ್ಲಿ ನೇರವಾಗಿ ನನಗೆ ತಿಳಿಸಿ, ಅವರ ಜತೆ ನಾನು ಮಾತನಾಡುತ್ತೇನೆ ಎಂದರು. ಇಲಾಖೆಗಳ ಕರ‍್ಯ ಪ್ರಗತಿಯನ್ನು ಪರಿಶೀಲಿಸಲು ಎರಡು ವಾರದ ನಂತರ ಇನ್ನೊಂದು ಸಭೆಯನ್ನು ಕರೆಯಲಾಗುವುದು ಎಂದು ಹೇಳಿದರು.ತಹಸೀಲ್ದಾರ್ ಶ್ರೀಧರ್ ಎಸ್.ಮುಂದಲಮನಿ ಮಾತನಾಡಿ, ಮಳೆಗಾಲಕ್ಕೆ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಸೂಚನೆಗಳನ್ನು ನೀಡಿದರೂ ಕೆಲವು ಅಧಿಕಾರಿಗಳು ಸ್ಪಂದನೆ ತೋರದಿರುವುದು ಬೇಸರದ ಸಂಗತಿ. ಪ್ರಾಕೃತಿಕ ವಿಕೋಪದ ಸಂದರ್ಭ ಜೀವ ಹಾನಿ ಅಥವಾ, ಅನಾಹುತ ಸಂಭವಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಅಗತ್ಯ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದ್ದೆ ಆದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

PREV

Recommended Stories

ತೊಗರಿ ರೈತನಿಗೆ ಗದರಿದ ಖರ್ಗೆ ವಿರುದ್ಧ ವಿಪಕ್ಷ ಗರಂ
ಯಾದಗಿರಿ ಅಕ್ಕಿ ಜಪ್ತಿ ಕೇಸ್‌ ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ : ಡೈರಿ ರಹಸ್ಯ ಬಯಲು