ಮೂಡುಬಿದಿರೆ: ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷಿತ, ಗೌರವಯುತ ಹಾಗೂ ಲಿಂಗಸಮಾನತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂತರಿಕ ದೂರು ಸಮಿತಿ ವತಿಯಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ ಕುರಿತು ಸಮಾಲೋಚನಾ ಕೂಟವನ್ನು ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಸಮಾಜಕರ‍್ಯ ವಿಭಾಗದ ಪ್ರಾಧ್ಯಾಪಕಿ ಡಾ ಸಪ್ನಾ ಪೋಷ್ ಕಾಯ್ದೆಯ ಉದ್ದೇಶ, ವ್ಯಾಪ್ತಿ ಹಾಗೂ ಮಹಿಳೆಯರ ಸುರಕ್ಷತೆಯ ಕುರಿತಂತೆ ವಿವರಿಸಿದರು. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ಸಂದರ್ಭದಲ್ಲಿಯೂ ಮಹಿಳೆಯರ ಗೌಪ್ಯತೆ, ಘನತೆ ಮತ್ತು ವೈಯಕ್ತಿಕ ಮಿತಿಗಳನ್ನು ಗೌರವಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ‍್ಯೆ ಡಾ. ರಶ್ಮಿ ಶೆಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಪೋಷ್ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಜಾಗೃತಿ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ಲೈಂಗಿಕ ಕಿರುಕುಳವು ಕೇವಲ ದೈಹಿಕ ಸ್ಪರ್ಶಕ್ಕೆ ಸೀಮಿತವಾಗಿಲ್ಲ. ಮೌಖಿಕ, ಸನ್ನೆ, ಸಂದೇಶ ಅಥವಾ ಇತರ ಅನಪೇಕ್ಷಿತ ವರ್ತನೆಗಳ ಮೂಲಕವೂ ಕಿರುಕುಳ ಸಂಭವಿಸಬಹುದು ಎಂದು ತಿಳಿಸಿದರು. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಮೌನವಾಗಿರದೆ, ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ಸೂಕ್ತ ವೇದಿಕೆಯ ಮೂಲಕ ದೂರು ದಾಖಲಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಳ್ವಾಸ್ ಸಮಾಜಕರ‍್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲಾ ಲೈಂಗಿಕ ಕಿರುಕುಳದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳ ಕುರಿತು ಮಾತನಾಡಿದರು. ಮಹಿಳೆಯರ ಬಗ್ಗೆ ಸಮಾಜದಲ್ಲಿರುವ ಕೆಲವು ಪೂರ್ವಗ್ರಹಗಳು ಮತ್ತು ರೂಢಿಗತ ಮನೋಭಾವಗಳು ಅಸಮಾನತೆಗೆ ಕಾರಣವಾಗಿದೆ ಎಂದರು. ಆದ್ದರಿಂದ ಪರಸ್ಪರ ಗೌರವ, ಸಮಾನತೆ ಮತ್ತು ಸೂಕ್ಷ್ಮ ಸಂವೇದನೆಯ ಆಧಾರದ ಮೇಲೆ ಆರೋಗ್ಯಕರ ಕಾರ್ಯಪರಿಸರ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಿರ್ವಾಹಕರಾದ ಬೆಳಕು ಆಪ್ತ ಸಮಲೋಚನಾ ಕೇಂದ್ರದ ಮುಖ್ಯ ಆಪ್ತ ಸಮಲೋಚಕಿ ರೆನಿಟಾ ಡಿಸೋಜಾ ಸಮಾಲೋಚನಾ ಕೂಟದ ನಿರ್ವಹಣಾಕಾರರಾಗಿದ್ದರು. ಆಂತರಿಕ ಸಮಿತಿಯ ಸಂಯೋಜಕಿ ಡಾ ಸುಲತಾ ಶೆಟ್ಟಿ ಇದ್ದರು. ಉಪನ್ಯಾಸಕಿ ರಮಿತಾ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.