ಮೊರಾರ್ಜಿ ಶಾಲೆ ಪ್ರಕರಣ: ಎಸ್‌ಐಟಿ ತನಿಖೆಗೆ ಒತ್ತಾಯ

KannadaprabhaNewsNetwork |  
Published : Dec 19, 2023, 01:45 AM IST
೧೮ಕೆಎಲ್‌ಆರ್-೩-೧ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲವಳ್ಳಿ ಮೊರಾರ್ಜಿದೇಸಾಯಿ ಶಾಲೆಯಲ್ಲಿ ಮಕ್ಕಳಿಂದ ಮಲಗುಂಡಿ ಸ್ವಚ್ಚಗೊಳಿಸಿದ ಪ್ರಕರಣದ ಹಿನ್ನಲೆಯಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಸಂಸದ ಎಸ್.ಮುನಿಸ್ವಾಮಿ ಭೇಟಿ ನೀಡಿ ಮಕ್ಕಳು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಮೊರಾರ್ಜಿ ಶಾಲೆ ಪ್ರಕರಣ ಪ್ರಕರಣ ಮುಚ್ಚಿಹಾಕಲು ಶಾಸಕರ ಯತ್ನ: ಆರೋಪ, ಎಸ್‌ಐಟಿ ತನಿಖೆಗೆ ವಹಿಸಲಿ, ಕೇಂದ್ರ ಸಚಿವರಿಂದ ಅಧಿಕಾರಿಗಳ ತರಾಟೆ, ಶಿಕ್ಷಕರ ಪರವಾಗಿ ಮಕ್ಕಳ ಪ್ರತಿಭಟನೆ, ಶಾಲೆಗೆ ನೂತನ ಪ್ರಾಂಶುಪಾಲ, ಶಾಲೆಗೆ ಬಂದ ಸೆಗ್ಗಿಂಗ್ ಮಿಷನ್.

ಕನ್ನಡಪ್ರಭ ವಾರ್ತೆ ಕೋಲಾರಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮಕ್ಕಳಿಂದ ಮಲಗುಂಡಿ ಸ್ವಚ್ಛಗೊಳಿಸಿರುವ ಪ್ರಕರಣ ಗಮನಿಸಿದಾಗ ಹಿಂದುಳಿದ ವರ್ಗದ ಮಕ್ಕಳು ಎಂದರೆ ಸರ್ಕಾರಕ್ಕೆ ತಿರಸ್ಕಾರ ಮನೋಭಾವ ಇದ್ದಂತಿದೆ. ಸ್ಥಳೀಯ ಶಾಸಕರು ಸಭೆ ನಡೆಸಿ ಪ್ರಕರಣ ಮುಚ್ಚಿಹಾಕುವ ಯತ್ನ ಮಾಡಿದ್ದಾರೆ, ಮುಖ್ಯಮಂತ್ರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹಾಗೂ ಸಂಸದ ಎಸ್. ಮುನಿಸ್ವಾಮಿ ಒತ್ತಾಯಿಸಿದರು.

ಕೇಂದ್ರ ಸಚಿವರು ಸೋಮವಾರ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಸ್‌ಐಟಿ ತನಿಖೆಗೆ ವಹಿಸಲಿ:

ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿತ್ತು, ಅದು ಸಾಧ್ಯವಾಗದೆ ತಡವಾಗಿ ಬೆಳಕಿಗೆ ಬಂದಿದೆ, ಇದು ರಾಜ್ಯದ ಎಲ್ಲಾ ವಸತಿ ಶಾಲೆಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇಂತಹ ಕೇಸ್‌ಗಳಲ್ಲಿ ಶಿಕ್ಷೆಯ ಪ್ರಮಾಣ ಬಹಳ ಕಡಿಮೆ ಇದೆ, ಸರ್ಕಾರ ಕೇವಲ ಕೇಸ್ ಹಾಕಿ ಸುಮ್ಮನಾಗಬಾರದು, ಇದರ ಜವಾಬ್ದಾರಿ ಹೊರಬೇಕು, ವಸತಿ ಶಾಲೆಗಳ ಕುಂದು ಕೊರತೆಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಪ್ರಕರಣ ಮುಚ್ಚಿಹಾಕಲು ಶಾಸಕರ ಯತ್ನ:

ಅನೇಕ ವಸತಿ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಅಧಿಕಾರಿಗಳ ವೈಫಲ್ಯ ಇದರಲ್ಲಿ ಇದೆ, ಇಲ್ಲಿನ ಶಾಸಕ ಕೆ.ವೈ. ನಂಜೇಗೌಡ ಸಹ ಸಭೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ, ಡಿ.೧ ರಂದು ಈ ಘಟನೆ ನಡೆದಿದ್ದರೂ, ಜಿಲ್ಲಾಡಳಿತ ಇದರ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಆಶ್ಚರ್ಯ ಉಂಟುಮಾಡಿದೆ ಎಂದರು.

ಮಕ್ಕಳ ಖಾಸಗಿ ವಿಡಿಯೋ ಬಗ್ಗೆ ಆರೋಪ ಕೇಳಿ ಬಂದಿದೆ, ನ್ಯಾಯಾಧೀಶರು ಸಹ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೇಸು ಹಾಕಿದರೆ ಪ್ರಕರಣ ದಾಖಲು ಮಾಡಿದರೆ ಬದಲಾವಣೆಯಾಗುವುದಿಲ್ಲ, ವಸತಿ ಶಾಲೆಗಳಲ್ಲಿ ನಡೆಯುತ್ತಿರುವ ಶೋಷಣೆ ಕುರಿತು ತನಿಖೆಯಾಗಬೇಕು. ಈ ಪ್ರಕರಣ ಸರ್ಕಾರಕ್ಕೆ ಗೌರವ ತರುವುದಿಲ್ಲ. ಪ್ರಕರಣದ ಬಗ್ಗೆ ಸಚಿವ ಎಚ್‌.ಸಿ. ಮಹಾದೇವಪ್ಪ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು.

ಕೇಂದ್ರ ಸಚಿವರಿಂದ ಅಧಿಕಾರಿಗಳ ತರಾಟೆ:

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಸಂಸದ ಎಸ್.ಮುನಿಸ್ವಾಮಿ, ಮಕ್ಕಳು ಇಳಿಸಿದ್ದ ಪಿಟ್ ಬಳಿ ತೆರಳಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಜಿಪಂ ಸಿಇಒ ಪದ್ಮ ಬಸವಂತಪ್ಪ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮಕ್ಕಳಿಂದ ಹೀಗೆ ಮಾಡಿಸೋದು ಸರಿಯೇ? ಡಿಸೆಂಬರ್ ೧ ರಂದು ನಡೆದಿರುವ ಘಟನೆಯಿದು, ಅಧಿವೇಶನ ಇದೆ ಅನ್ನೋ ಕಾರಣಕ್ಕೆ ಘಟನೆಯನ್ನು ಮುಚ್ವಿಟ್ಟಿದ್ದೀರಾ, ಘಟನೆ ಕುರಿತು ನಿಮಗೆ ಯಾವಾಗ ಗೊತ್ತಾಯಿತು ಎಂದು ಸಿಇಒ ಪದ್ಮಬಸಂತಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ರನ್ನು ತರಾಟೆಗೆ ತೆಗೆದುಕೊಂಡರು.

ಅಧಿವೇಶನದಲ್ಲಿ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಅನ್ನೋ ಕಾರಣಕ್ಕೆ ಮುಚ್ವಿಹಾಕುವ ಯತ್ನ ನಡೆದಿದ್ದು, ಯಾರಿಗೂ ಬೆದರಿಕೆ ಹಾಕದಂತೆ ಸಿಇಒ ಪದ್ಮ ಬಸಂತಪ್ಪಗೆ ಸೂಚನೆ ನೀಡಿದರು.

ಶಿಕ್ಷಕರ ಪರವಾಗಿ ಮಕ್ಕಳ ಪ್ರತಿಭಟನೆ:

ಈ ನಡುವೆ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲ ಗುಂಡಿಗೆ ಇಳಿಸಿದ ಪ್ರಕರಣದಲ್ಲಿ ಇಬ್ಬರು ಶಿಕ್ಷಕರನ್ನು ಮಾಸ್ತಿ ಪೊಲೀಸರು ಬಂಧಿಸಿದ್ದು, ಚಿತ್ರಕಲಾ ಶಿಕ್ಷಕ ಮುನಿಯಪ್ಪ ಬಂಧನ ಖಂಡಿಸಿ ವಸತಿ ಶಾಲೆಯ ಮಕ್ಕಳು ಸೋಮವಾರ ಬೆಳಗ್ಗೆ ೫ ಗಂಟೆಯಿಂದ ಪ್ರಕರಣ ವಾಪಸ್‌ ಪಡೆಯುವಂತೆ ವಸತಿ ನಿಲಯದ ಮಕ್ಕಳು ಊಟ, ತಿಂಡಿ ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷ ಆಗಮಿಸುವಂತೆ ಒತ್ತಾಯಿಸಿದರು. ಈ ನಡುವೆ ಸಚಿವರು, ಸಂಸದರಿಗೂ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳ ಅಹವಾಲನ್ನು ಸಚಿವರು ಆಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು.

ಶಾಲೆಗೆ ನೂತನ ಪ್ರಾಂಶುಪಾಲ:

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೂತನ ಪ್ರಿನ್ಸಿಪಲ್ ಹಾಗೂ ಶಿಕ್ಷಕರ ನೇಮಕ ಭಾನುವಾರ ರಾತ್ರಿಯೇ ನಡೆದಿದ್ದು, ಹೊಸ ಪ್ರಿನ್ಸಿಪಾಲ್ ಆಗಿ ರಘು ನೇಮಕಗೊಂಡಿದ್ದಾರೆ. ಬೆಳಗ್ಗೆಯೇ ವಿದ್ಯಾರ್ಥಿಗಳೊಂದಿಗೆ ಪ್ರಿನ್ಸಿಪಾಲ್‌ ರಘು ಮಾತುಕತೆ ನಡೆಸಿದ್ದು, ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಪ್ರತಿಕ್ರಿಯಿಸಿದರು.

ಶಾಲೆಯ ಲಾಕರ್ ಮುರಿದ ಅಧಿಕಾರಿಗಳು:

ವಸತಿ ಶಾಲೆಯ ಪ್ರಾಂಶುಪಾಲೆ ಬಂಧನವಾದ ಹಿನ್ನೆಲೆಯಲ್ಲಿ ದಾಖಲೆಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಹಾಗೂ ನೂತನ ಪ್ರಾಂಶುಪಾಲ ರಘು ಮತ್ತು ಅಧಿಕಾರಿಗಳು ಶಾಲಾ ಕಚೇರಿಯ ಲಾಕರ್ ಮುರಿದು ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಶಾಲೆಗೆ ಬಂದ ಸೆಗ್ಗಿಂಗ್ ಮಿಷನ್:

ಕೆಟ್ಟ ಮೇಲೆ ಬುದ್ಧಿ ಕಲಿತ ಅಧಿಕಾರಿಗಳು ವಸತಿ ಶಾಲೆಗೆ ಬಂದ ಸೆಗ್ಗಿಂಗ್ ಮಷಿನ್ ಪಿಟ್ ಕ್ಲೀನ್ ಮಾಡಲು ಆಗಮಿಸಿತು, ಈಗಾಗಲೆ ಮಲ ಗುಂಡಿ ಸ್ವಚ್ಛಗೊಳಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ವಸತಿ ಶಾಲೆಯ ಅಧಿಕಾರಿಗಳು ಸಚಿವರು ಬಂದ ಬಳಿಕ ಪಿಟ್ ಕ್ಲೀನ್ ಮಾಡಿಸಲು ಮುಂದಾಗಿದ್ದಾರೆ, ಸದ್ಯ ವಸತಿ ಶಾಲೆಯ ಮಲ ಗುಂಡಿಯನ್ನು ಸೆಗ್ಗಿಂಗ್ ಮಷಿನ್ ಮೂಲಕ ಸ್ವಚ್ಛಗೊಳಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ